ಪುತ್ತೂರು ರಥೋತ್ಸವದ ರಾತ್ರಿ ಗರ್ಭಗುಡಿಯೊಳಗೆ ಭೇರಿ ಪೂಜೆ : ಸೀಮೆಯ ಏಕೈಕ ದೇವಳದಲ್ಲಿ ನಡೆಯುವ ಮಹಾ ಆಚರಣೆ

0

ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೆ ಒಂದು ದಿನ ಜಾತ್ರೆಯ ವೇಳೆ ಶಾಸನದಲ್ಲಿ ಹೇಳಲ್ಪಟ್ಟ ತಂತ್ರಾಗಮ ಪದ್ಧತಿಯ ಆಚರಣೆಯಿಂದಲೇ ಈ ದೇಗುಲ ಕಾರ್ಣಿಕ ಕ್ಷೇತ್ರವಾಗಿದೆ.


ಭೇರಿಗೆ ಇನ್ನೊಂದು ಹೆಸರು ಪಟಾಹ ಭೇರಿ ಪೂಜೆ ಎಂಬುದು ದೇವಾನುದೇವತೆಗಳನ್ನು ಸಂತುಷ್ಟಗೊಳಿಸಲು ನಡೆಸುವ ವಿಧಾನ.ಪಟಾಹವನ್ನು ಕೊಡಿ ಏರಿದ ರಾತ್ರಿ ಉತ್ಸವದಿಂದ ಆರಂಭವಾಗಿ, ನಿತ್ಯ ಎರಡು ಉತ್ಸವದಲ್ಲಿ ದೇವರನ್ನು ಶಿರದಲ್ಲಿ ಇರಿಸುವ ಮುನ್ನ ನುಡಿಸಲಾಗುತ್ತದೆ.ಏಪ್ರಿಲ್ 17ರ ರಾತ್ರಿ ಬ್ರಹ್ಮರಥೋತ್ಸವ ಮುಗಿದು ತಡರಾತ್ರಿಯಲ್ಲಿ ನಡೆಯುವ ಶ್ರೀಭೂತ ಬಲಿಯ ಮೊದಲು ಭೇರಿ ಪೂಜೆ ನಡೆಯುತ್ತದೆ.ಯಾವುದೇ ದೇಗುಲದ ಬ್ರಹ್ಮಕಲಶ, ಪ್ರತಿಷ್ಠಾಪನಾ ಸಂದರ್ಭದಲ್ಲೂ ಭೇರಿತಾಡನಕ್ಕೆ ಉನ್ನತ ಮಹತ್ವವಿದೆ.ರಾಜ್ಯದಲ್ಲಿ ಇದರ ವಾದಕರ ಸಂಖ್ಯೆ ಅತೀ ವಿರಳ.ಪೂರ್ಣ ಕಲಿಯದೆ ಭೇರಿ ನುಡಿಸಬಾರದೆಂಬ ಕಟ್ಟುಪಾಡುಗಳಿವೆ.ಭೇರಿ ನುಡಿಸುವ ಪರಿಣತರೇ ಕೊಡಿ ಏರಿಸುವ,ಇಳಿಸುವ ಆರಾಟಕ್ಕೆ ಕುದಿ ಇಡುವ ತಾಂತ್ರಿಕ ಕಾರ್ಯಗಳನ್ನು ನಡೆಸಿಕೊಡಬೇಕು.ಪುತ್ತೂರು,ಈಶ್ವರಮಂಗಲ, ಧರ್ಮಸ್ಥಳ , ಪೊಳಲಿ , ಕಾಸರಗೋಡು ಕಡೆ ಭೇರಿತಾಡನ ನಡೆಸುವ ಬೆರಳೆಣಿಕೆಯ ಕಲಾವಿದರಿದ್ಧಾರೆ. ಎಲ್ಲೇ ಧಾರ್ಮಿಕ ಕಾರ್ಯಕ್ರಮಕ್ಕೆ ಇವರಲ್ಲೊಬ್ಬರು ತೆರಳಬೇಕಾಗುತ್ತದೆ.


ಭೇರಿ ಪೂಜೆ ವಿಧಾನ:
ರಥೋತ್ಸವದ ರಾತ್ರಿ ಪುತ್ತೂರು ದೇಗುಲದ ಗರ್ಭಗುಡಿಯಲ್ಲಿ ಆಚಾರ್ಯ ತಂತ್ರಿ ವರ್ಗದವರೆಲ್ಲಾ ಸೇರಿದಾಗ ಭೇರಿತಾಡನ ಮಾಡಲಾಗುತ್ತದೆ.ದೇವರ ಸನಿಹದಲ್ಲಿ ಭೇರಿ ಆಕೃತಿಯ ರಂಗೋಲಿ (ಸ್ಕಂಡಿಲ)ವನ್ನು ಬರೆದು ಆಸನವನ್ನು ಮಾಡಿ ಭೇರಿಯನ್ನು ಹೊಸ ಬಟ್ಟೆಯಿಂದ ಸುತ್ತಿ ಸ್ಕಂಡಿಲದಲ್ಲಿರಿಸಿ ಪೀಠಪೂಜೆ ಮಾಡಿ,ಗಂಧ ಪುಷ್ಪ ಅಕ್ಷತೆಗಳಿಂದ ಪೂಜಿಸಿ ಇಂದ್ರಾದಿ ದೇವತೆಗಳನ್ನು ಆಹ್ವಾನಿಸಿ ಇತರ ದೇವರನ್ನೂ ಆಹ್ವಾನಿಸಿ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಾಡಿ ನಿರಾಜನ ಪುಷ್ಪಾಂಜಲಿಯನ್ನು ಮಾಡಿ ಅಸರಾಜನನ್ನು ಸ್ಮರಿಸಿ ಭೇರಿತಾಡನ ಮಾಡಲಾಗುತ್ತದೆ. ನಂತರ ಗಂಧ ಮಾಲ್ಯಾದಿಗಳಿಂದ ಆಲಂಕರಿಸಲ್ಪಟ್ಟ ಬಟ್ಟೆ ಉಟ್ಟ ಉಪವೀತವನ್ನು ಹೊಂದಿ ಉತ್ತರೀಯವನ್ನು ಹೊಂದಿ ಸ್ನಾನಾದಿಗಳಿಂದ ಪರಿಶುದ್ಧನಾಗಿ ಮಡಿಯಲ್ಲಿರುವ ಪರಿಶುದ್ಧನಾದ ವಾದಕನನ್ನು ಕರೆದು ಪಂಚಾಕ್ಷರಿಯನ್ನು ಸ್ಮರಿಸುತ್ತಾ ಶುದ್ಧಜಲದಿಂದ ಪ್ರೋಕ್ಷಿಸಿ,ವಾದಕನು ಕೈ ತೊಳೆದ ನಂತರ ಅವನಿಗೆ ಹೂ ಅಕ್ಷತೆಯನ್ನು ಕೊಟ್ಟು ಕ್ಷೇತ್ರದ ತಂತ್ರಿಗಳು ಅಸರಾಜನನ್ನು ಸ್ಮರಿಸುವ ವೇಳೆ ವಾದಕನು ಕೈಯಲ್ಲಿರುವ ಹೂ ಅಕ್ಷತೆಯನ್ನು ಭೇರಿಯ ಮೇಲೆ ಹಾಕುತ್ತಾನೆ.ತಂತ್ರಿಗಳ ಅನುಮತಿಯಂತೆ ಭೇರಿಯನ್ನು ಹೆಗಲಿಗೆ ಧರಿಸಿ ದೇವತೆಗಳನ್ನು ಸ್ಮರಿಸಿ ಉತ್ಸವಕ್ಕೆ ಆಹ್ವಾನಿಸಿ ಬಲಿತಾಳಗಳನ್ನು ನುಡಿಸುತ್ತಾನೆ.

ವೀಕ್ಷಣೆಗೆ ಅವಕಾಶವಿಲ್ಲ
ಭೇರಿ ಪೂಜೆ ನಡೆದು ಭೂತಬಲಿ ಆರಂಭವಾಗುವಾಗ ದೇವಳದ ನಾಲ್ಕೂ ಬಾಗಿಲುಗಳನ್ನು ಮುಚ್ಚಿ ನಡೆಯುವ ಈ ಬಲಿಯನ್ನು ಯಾರೂ ನೋಡುವಂತಿಲ್ಲ.ಭೂತಬಲಿ ಮುಗಿದ ಬಳಿಕ ದೇವರ ಶಯನಕ್ಕಾಗಿ ವಿಧಿವಿಧಾನ ನಡೆದು ದೇವರ ಬಾಗಿಲು ಮುಚ್ಚಲಾಗುತ್ತದೆ.ಶಬ್ದ ಹೊಮ್ಮದಂತೆ ಎಲ್ಲಾ ಗಂಟೆಗಳನ್ನು ಕಟ್ಟಲಾಗುತ್ತದೆ.ಭೇರಿ ತಾಡನ ತಿಳಿದವರೆಲ್ಲಾ ಮಹಾಲಿಂಗೇಶ್ವರನ ಪಾರಂಪರಿಕ ಸೇವಾ ಕುಟುಂಬದವರು ಎಂಬುದು ಉಲ್ಲೇಖನೀಯ.ಭೇರಿ ಪೂಜೆಯ ಮಹತ್ವವುಳ್ಳ ಈ ಕ್ಷೇತ್ರದ ಹಿರಿಮೆ ಅಪಾರ.
ಪಿ.ಜಿ.ಚಂದ್ರಶೇಖರ ರಾವ್

LEAVE A REPLY

Please enter your comment!
Please enter your name here