ಪುತ್ತೂರು:ಮಳೆಗಾಲದಲ್ಲಿ ಗಾಳಿ, ಮಳೆಗೆ ಮರಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗುತ್ತಿದೆ.ಇದರಿಂದ ಮೆಸ್ಕಾಂಗೆ ಲಕ್ಷಾಂತರ ರೂ.ನಷ್ಟ ಉಂಟಾಗುತ್ತಿದ್ದು ಇದನ್ನು ತೆಡೆಯುವ ನಿಟ್ಟಿನಲ್ಲಿ ಮಳೆಗಾಲ ಪ್ರಾರಂಭವಾಗುವ ಮೊದಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಆಗ್ರಹಿಸಿದರು.

ಸಭೆಯು ಏ.16ರಂದು ಬನ್ನೂರು ನಗರ ಉಪ ವಿಭಾಗದ ಕಚೇರಿಯಲ್ಲಿ ವೀಕ್ಷಕ ಇಂಜಿನಿಯರ್ ಕೃಷ್ಣರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಣಿಯಾರುಮಲೆ ರಕ್ಷಿತಾರಣ್ಯದಂಚಿನಲ್ಲಿರುವ ಪ್ರದೇಶಗಳಲ್ಲಿ ಹಾದುಹೋಗುವ ವಿದ್ಯುತ್ ಲೈನ್‌ನಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಮರಬಿದ್ದು ಸಮಸ್ಯೆ ಉಂಟಾಗುತ್ತಿದೆ.ಮೆಸ್ಕಾಂಗೆ ಲಕ್ಷಾಂತರ ರೂ.ನಷ್ಟ ಉಂಟಾಗುತ್ತಿದೆ. ಗ್ರಾಹಕರಿಗೂ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ.ವಿದ್ಯುತ್ ಲೈನ್‌ಗಳಿಗೆ ಅಪಾಯಕಾರಿಯಂತಿರುವ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಚರ್ಚಿಸಿ ಶಾಶ್ವತ ಪರಿಹಾರ ನೀಡಬೇಕು. ಮಳೆಗಾಲ ಪ್ರಾರಂಭದ ಮೊದಲೇ ಕ್ರಮಕೈಗೊಂಡರೆ ಮೆಸ್ಕಾಂಗೆ ಸಂಭವಿಸುವ ನಷ್ಟವನ್ನು ತಪ್ಪಿಸಬಹುದು ಎಂದು ಶಿವಶ್ರೀರಂಜನ್ ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳಿಗೆ ಬಳ್ಳಿಗಳು ಸುತ್ತಿಕೊಂಡಿದ್ದು ಶಾರ್ಟ್ ಸರ್ಕ್ಯೂಟ್ ಆದಾಗ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ.ಮಳೆಗಾಲದಲ್ಲಿ ಗಾಳಿಗೆ ಮರಬಿದ್ದು ಹಾನಿಯುಂಟಾಗುವುದನ್ನು ತಪ್ಪಿಸಲು ಈಗಲೇ ಕ್ರಮಕೈಗೊಳ್ಳಬೇಕು.ಅಪಾಯಕಾರಿಯಂತಿರುವ ಮರಗಳನ್ನು ತೆರವುಗೊಳಿಸಬೇಕು.ಇದಕ್ಕಾಗಿ ಸ್ಥಳೀಯ ಪವರ್‌ಮೆನ್‌ಗಳಿಗೆ ಜವಾಬ್ದಾರಿ ನೀಡಬೇಕು.ಈಗಲೇ ಕ್ರಮಕೈಗೊಂಡರೆ ಮಳೆಗಾಲದಲ್ಲಿ ರಾತ್ರಿ ವೇಳೆ ಪವರ್‌ಮೆನ್‌ಗಳು ಪರದಾಡಬೇಕಾದ ಕೆಲಸ ಕಡಿಮೆಯಾಗಬಹುದು.ಅಲ್ಲದೆ ಮೆಸ್ಕಾಂಗೆ ಆಗುವ ನಷ್ಟವನ್ನು ತಪ್ಪಿಸಬಹುದು.ಅದಕ್ಕಾಗಿ ಈಗಿಂದೀಗಲೇ ಕ್ರಮಕೈಗೊಳ್ಳುವ ಮೂಲಕ ಮೆಸ್ಕಾಂನ ಸೇವೆಗೆ ಪುತ್ತೂರು ಮಾದರಿಯಾಗಬೇಕು ಎಂದು ತಿಳಿಸಿದರು.ಮಳೆಗಾಲದ ನಿರ್ವಹಣೆಗಾಗಿ ಮಾನ್ಸೂನ್ ಬ್ಯಾಚ್ ಬರಲಿದೆ. ಸ್ಥಳೀಯವಾಗಿ ಸೆಕ್ಷನ್ ಆಫೀಸರ್, ಪವರ್‌ಮೆನ್‌ಗಳಿಗೆ ಕೆಲಸಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗುವುದು ಎಂದರು.
ಸಭೆಯ ಬಗ್ಗೆ ಪ್ರಚಾರ ನೀಡಿ:
ಮೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಹಲವು ಮಾಹಿತಿ ಬಂದಿರುತ್ತದೆ.ಹೀಗಾಗಿ ಜನಸಂಪರ್ಕ ಸಭೆಯ ಬಗ್ಗೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಹಾಗೂ ಪಿಡಿಓಗಳಿಗೆ ಮಾಹಿತಿ ನೀಡಬೇಕು. ಮೆಸ್ಕಾಂನ ಉತ್ತಮ ಕಾರ್ಯಗಳ ಬಗ್ಗೆಯೂ ಜನರಿಗೂ ಅರಿವಾಗಬೇಕು. ಜನ ಸಾಮಾನ್ಯರಿಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಯ ಕುರಿತು ಪ್ರಚಾರ ನೀಡಬೇಕು ಎಂದು ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.
ವೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ.ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಬರುವ ಸಮಸ್ಯೆಗಳನ್ನು ಆದ್ಯತೆಯಲ್ಲಿ ಪರಿಹಾರ ಮಾಡಲಾಗುತ್ತಿದೆ.ಕೆಲವು ಕಡೆಗಳಲ್ಲಿ ಮರು ಸ್ಥಾಪಿಸುವ ಕಾಮಗಾರಿಗಳಿಗೆ ಅಂದಾಜುಪಟ್ಟಿ ಮಾಡಬೇಕಾಗಿರುವುದರಿಂದ ವಿಳಂಬವಾಗುತ್ತಿದೆ ಎಂದರು. ಮರಗಳನ್ನು ತೆರವುಗೊಳಿಸುವ ಮೊದಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದಕ್ಕೆ ಬೇಕಾದ ಯೋಜನೆ ರೂಪಿಸಬೇಕು ಎಂದು ಅಽಕಾರಿ ಹಾಗೂ ಸಿಬಂದಿಗಳಿಗೆ ಸೂಚನೆ ನೀಡಿದರು.
ಬಿಲ್ ಕ್ಲಪ್ತ ಸಮಯಕ್ಕೆ ನೀಡಬೇಕು:
ಗೃಹಬಳಕೆಯ ವಿದ್ಯುತ್ ಬಿಲ್ ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವಿತರಣೆಯಾಗಬೇಕು.ಇಲ್ಲದಿದ್ದಲ್ಲಿ ಸರಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗುತ್ತದೆ.ಹೀಗಾಗಿ ಬಿಲ್ ವಿತರಣೆಯಾಗುವಾಗ ವಿಳಂಬ ಮಾಡಬಾರದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪೂರ್ಣೇಶ್ ಕುಮಾರ್ ತಿಳಿಸಿದರು.
ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಖಾದರ್ ಕರ್ನೂರು, ನಿವೃತ್ತ ಅರಣ್ಯ ವೀಕ್ಷಕ ಶೀನ, ಸಂತೋಷ್ ರೈ ಸಂಪ್ಯದಮೂಲೆ, ವಿಕ್ರಂ ರೈ ಸಾಂತ್ಯ ಸೇರಿದಂತೆ ಹಲವು ಮಂದಿ ಭಾಗವಹಿಸಿ ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು.
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಲೆಕ್ಕಾಧಿಕಾರಿ ನಾರಾಯಣ ಶೆಣೈ, ಸಹಾಯಕ ಇಂಜಿನಿಯರ್ ರಾಜೇಶ್ ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಕುಂಬ್ರ ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಸ್ವಾಗತಿಸಿ, ವಂದಿಸಿದರು.