ಪುತ್ತೂರು:ಕಾಂಞಗಾಡ್ -ಕಾಣಿಯೂರು ರೈಲ್ವೆ ಮಾರ್ಗ ಬದಲು ಪುತ್ತೂರು ರೈಲ್ವೆ ಮಾರ್ಗಕ್ಕೆ ಸೇರಿಸುವಂತೆ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಕಾಂಞಗಾಡ್ ವಿನಿಂದ ಕಾಣಿಯೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಪ್ರಾಥಮಿಕ ತಯಾರಿಗಳು ನಡೆಯುವ ಪ್ರಕ್ರಿಯೆ ಪ್ರಾರಂಭವಾಗುವ ಹಂತದಲ್ಲಿದೆ. ಪ್ರಸ್ತಾವಿತ ಯೋಜನೆಯಂತೆ ಕಾಂಞಗಾಡ್ ನಿಂದ ಹೊರಟು ಪಲ್ಲತ್ತೂರು ಎಂಬಲ್ಲಿಗೆ ಬಂದ ನಂತರ ಈ ಮಾರ್ಗವು ಸುಳ್ಯ ತಾಲೂಕಿನ ಗುತ್ತಿಗಾರು ದೇವರಗುಂಡ ಮುಂತಾದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿ ಸುಳ್ಯ ತಾಲೂಕಿನ ಕಾಣಿಯೂರಿಗೆ ಸೇರುವ ಬದಲು ಪ್ರಸ್ತುತ ಯೋಜನೆಯನ್ನು ಪಲ್ಲತ್ತೂರಿನಿಂದ ಪೆರ್ಲ, ಅಳಕೆ, ಅಡ್ಯನಡ್ಕ, ವಿಟ್ಲ ಮಾರ್ಗವಾಗಿ ಪುತ್ತೂರು ರೈಲ್ವೆ ಮಾರ್ಗಕ್ಕೆ ಸೇರಿಸಿ ಮುಂದೆ ಕಾಣಿಯೂರು, ಸುಬ್ರಹ್ಮಣ್ಯ ಮೂಲಕ ಹಾದು ಹೋಗುವಂತೆ ಯೋಜನೆ ರೂಪಿಸುವಂತೆ ಒತ್ತಾಯಿಸುತ್ತೇವೆ.
ಪರಿಷ್ಕೃತ ಯೋಜನೆಯಿಂದ ಇಲಾಖೆಯ ಬೊಕ್ಕಸಕ್ಕೆ ನಷ್ಟವಾಗುವುದು ತಪ್ಪುತ್ತದೆ. ಅರಣ್ಯ ಪ್ರದೇಶ ನಾಶವಾಗುವುದು ತಪ್ಪಿ ಪರಿಸರ ರಕ್ಷಣೆಗೆ ಪೂರಕವಾಗುತ್ತದೆ ಮತ್ತು ಮುಂದೆ ಜಿಲ್ಲೆಯಾಗುವ ಕನಸು ಹೊತ್ತ ಪುತ್ತೂರು ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ. ಪುತ್ತೂರಿನ ಅಭಿವೃದ್ಧಿಗೆ ಬೆಂಬಲ ನೀಡುವ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಸೇರಿ ಈ ಪ್ರಸ್ತಾವನೆಯಂತೆ ಯೋಜನೆ ರೂಪುಗೊಳ್ಳಲು ಪ್ರಯತ್ನಿಸುವಂತೆ ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ರವರು ಆಗ್ರಹ ವ್ಯಕ್ತಪಡಿಸಿದ್ದಾರೆ.