ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದ ರೆಂಜ-ಮುಡಿಪಿನಡ್ಕ ರಸ್ತೆ
ನಿಡ್ಪಳ್ಳಿ: ಗ್ರಾಮದ ಕುಕ್ಕುಪುಣಿ ಹಾಲಿನ ಡೈರಿ ಬಳಿ ತಿರುವಿನಲ್ಲಿ ನ್ಯಾನೊ ಕಾರು ಮತ್ತು ಆಕ್ಟಿವಾ ನಡುವೆ ಏ.21ರಂದು ಅಪಘಾತ ಸಂಭವಿಸಿದೆ. ಆದರೆ ಈ ಘಟನೆಯಲ್ಲಿ ದೊಡ್ಡ ಅಪಾಯವೇನು ಸಂಭವಿಸಿಲ್ಲವಾದರೂ ಆಗಾಗ ಈ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ.
ಕೂಟೇಲಿನಿಂದ ಕುಕ್ಕುಪುಣಿವರೆಗಿನ ಲೋಕೋಪಯೋಗಿ ರಸ್ತೆಯ ಸುಮಾರು ಒಂದು ಕಿಲೋಮೀಟರ್ ರಸ್ತೆ ಕಿರಿದಾಗಿರುವುದು ಮಾತ್ರವಲ್ಲದೆ ಸೈಡ್ ಇಳಿಸಲು ನೋಡಿದರೆ ದೊಡ್ಡ ದೊಡ್ಡ ಹೊಂಡ ಗುಂಡಿಗಳೂ, ಎರಡು ವಾಹನಗಳು ಎದುರಾದರೆ ಸೈಡ್ ಕೊಡಲಾಗದೆ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಕೆಲವು ಸಮಯದ ಅವಧಿಯಲ್ಲಿ ಇದು ಮೂರನೇ ಅಪಘಾತವಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ರಸ್ತೆಗೆ ಮುಕ್ತಿ ಯಾವಾಗ….? ಸಾರ್ವಜನಿಕರ ಪ್ರಶ್ನೆ
ಕೂಟೇಲಿನಿಂದ ಕುಕ್ಕುಪುಣಿವರೆಗಿನ ಲೋಕೋಪಯೋಗಿ ಇಲಾಖೆಯ ರಸ್ತೆ ಬಹಳ ಕಿರಿದಾಗಿದ್ದು ಮತ್ತು ರಸ್ತೆಯ ಬದಿ ಗುಂಡಿಗಳಿದ್ದು ಮಳೆ ಬರುವಾಗ ಅಂತೂ ಹೇಳುವುದೇ ಬೇಡ. ಈ ರಸ್ತೆಯಿಂದ ವಾಹನ ಚಲಾಯಿಸುವ ಸವಾರರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ಎರಡು ದೊಡ್ಡ ತಿರುವುಗಳು ಅಪಾಯವನ್ನು ಅಹ್ವಾನಿಸುತ್ತಿದೆ. ಮಳೆಗಾಲದಲ್ಲಿ ನೀರು ಹರಿದು ರಸ್ತೆ ಬದಿ ಹೊಂಡ ಬಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಜನಪ್ರತಿನಿಧಿಗಳನ್ನು ವಿಚಾರಿಸಿದರೆ ಅನುದಾನ ಇಡಲಾಗಿದೆ, ಟೆಂಡರ್ ಕರೆಯಲಾಗಿದೆ, ಕಾಮಗಾರಿ ಆರಂಭವಾಗುತ್ತದೆ ಎಂದು ಉತ್ತರಿಸುತ್ತಾರೆಯೇ ಹೊರತು ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿಯೂ ನಡೆದಿಲ್ಲ. ಇನ್ನಾದರೂ ನಡೆಯಬಹುದೇ? ಇದಕ್ಕೆ ಮುಕ್ತಿ ಯಾವಾಗ? ಎಂಬುದು ಸಾರ್ವಜನಿಕರ ಆತಂಕ. ಇದಕ್ಕೆ ಸಂಬಂಧಪಟ್ಟ ಇಲಾಖೆಯು ಈ ರಸ್ತೆಯ ಅಭಿವೃದ್ದಿಗೆ ತಕ್ಷಣ ಸ್ಪಂದಿಸಿ, ಕಾಮಗಾರಿ ಆರಂಭಿಸಿ ಎಂಬುವುದೇ ಇಲ್ಲಿನ ಸಾರ್ವಜನಿಕರ ಆಗ್ರಹ.