ಬೆಥನಿ ಲಿಝಿಯೋ ಕಾಂನ್ವೆಂಟ್‌ನ ಶತಮಾನೋತ್ಸವ ಸಂಭ್ರಮ

0

ಪುತ್ತೂರು; ಶಿಕ್ಷಣ ಮತ್ತು ಧಾರ್ಮಿಕ ಸೇವೆಗಳ ಮೂಲಕ ಸ್ಥಳೀಯ ಸಮುದಾಯದ ಬೆಳವಣಿಗೆಗೆ ಮಹತ್ವದ ಕೊಡುಗೆ ಪುತ್ತೂರಿನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗಿರುವ ದರ್ಬೆಯಲ್ಲಿರುವ ಲಿಝಿಯೊ ಕಾನ್ವೆಂಟ್‌ನ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳು ಎ.24ರಂದು ಮಾಯಿದೇ ದೇವುಸ್ ಚರ್ಚ್‌ನಲ್ಲಿ ನಡೆಯಿತು.


ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹಾಗೂ ಪುತ್ತೂರು ಧರ್ಮಪ್ರಾಂತ್ಯ ಬಿಷಪ್, ಅತೀ ವಂದನೀಯ ಡಾ.ಗಿವರ್ಗೀಸ್ ಮಾರ್ ಮಕಾರಿಯೋಸ್ ದಿವ್ಯ ಬಲಿ ಪೂಜೆ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮಗಳು ನಡೆಯಿತು.


ಶೋಷಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಾಮಾಜಿಕ ಅಭಿವೃದ್ಧಿಯೇ ಸಂಸ್ಥಾಪಕರ ಮುಖ್ಯ ಧ್ಯೇಯ-ಡಾ.ಗಿವರ್ಗೀಸ್ ಮಾರ್ ಮಕಾರಿಯೋಸ್
ದಿವ್ಯ ಬಲಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಧರ್ಮಪ್ರಾಂತ್ಯ ಬಿಷಪ್ ಡಾ.ಗಿವರ್ಗೀಸ್ ಮಾರ್ ಮಕಾರಿಯೋಸ್ ಮಾತನಾಡಿ, ಶೋಷಿತ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲಕ ಸಾಮಾಜಿಕ ಅಭಿವೃದ್ಧಿಯೇ ಸಂಸ್ಥಾಪಕರ ಮುಖ್ಯ ಧ್ಯೇಯವಾಗಿತ್ತು. ಸಮಾಜದ ಬೆಳವಣಿಗೆಯಲ್ಲಿ ಶೋಷಿತ ವರ್ಗದವರ ಉನ್ನತೀಕರಣಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಒಂದು ಶತಮಾನ ಪೂರೈಸಿರುವ ಕನ್ಯಾಮಠವು ಗತ ಕಾಲದ ವೈಭವವನ್ನು ನೆನಪಿಸುತ್ತಾ ಎರಡನೇ ಶತಮಾನಕ್ಕೆ ಹೊಸ ಪಯಣವನ್ನು ಪ್ರಾರಂಭಿಸಿದೆ. ಸಂಸ್ಥೆಯ ಮೂಲಕ ಸಮಾಜದ ಒಳಿತಿಗಾಗಿ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದರು.


ಸಾವಿರಾರು ಮಂದಿಗೆ ಜ್ಞಾನದ ಬೆಳಕು ನೀಡಿ ಬಾಳು ಬೆಳಗಿಸಿದ ಸಂಸ್ಥೆಯಾಗಿದೆ-ಲಾರೆನ್ಸ್ ಮಸ್ಕರೇನಸ್:
ಮಾಯಿದೇ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಪುತ್ತೂರಿನ ಮೊದಲ ಕನ್ಯಾಮಠವಾಗಿ ನೂರು ವರ್ಷಗಳ ಹಿಂದೆ ನೆಟ್ಟ ಗಿಡ ಇಂದು ಹೆಮ್ಮರವಾಗಿ ಸಾವಿರಾರು ಮಂದಿಯ ಜೀವನದಲ್ಲಿ ನೆರಳಾಗಿದೆ. ಸಾವಿರಾರು ಮಂದಿಗೆ ಜ್ಞಾನದ ಬೆಳಕು ನೀಡಿ ಬಾಳು ಬೆಳಗಿಸಿದ ಸಂಸ್ಥೆಯಾಗಿದೆ. ಧಾರ್ಮಿಕವಾಗಿಯೂ ಬೆಳಕು ನೀಡಿದೆ. ದೇವರ ಸಾಮಾಜ್ಯ ಕಟ್ಟುವ ಉದ್ದೇಶವನ್ನು ಹೊಂದಿರುವ ಕನ್ಯಾಮಠದ ಮುಂದಿನ ಶತಮಾನೋತ್ಸವವನ್ನು ಆಚರಿಸಲಿ ಎಂದು ಹೇಳಿದರು.


ವೇದಿಕೆಯಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಾಣವಾಗಿದೆ-ಬಾಲಚಂದ್ರ ಕೆಮ್ಮಿಂಜೆ:
ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ನೂರು ವರ್ಷಗಳ ಪರಂಪರೆಯಿರುವ ಕನ್ಯಾಮಠದ ಶತಮಾನೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ನೃತ್ಯದ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಾಣವಾಗಿದೆ. ಜೀವನದಲ್ಲಿ ಸಾವಿರಾರು ಬಯಕೆಗಳಿರುವ ಮನುಷ್ಯ ಜನ್ಮದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಬಡವರ ಕಲ್ಯಾಣ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಭಗಿನಿಯವರಿಗೆ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದರು.


ಪುತ್ತೂರಿನಲ್ಲಿ ಗುಣಮಟ್ಟದ ಶಿಕ್ಷಣದಲ್ಲಿ ಪ್ರಮುಖಪಾತ್ರ-ಲೋಕೇಶ್ ಎಸ್.ಆರ್
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಸ್ವಾತಂತ್ರ ಪೂರ್ವದ ಬಡತನದ ಸಮಯದಲ್ಲಿ ಸ್ಥಾಪನೆಗೊಂಡು ಕಾನ್ವೆಂಟ್ ಕಷ್ಟದ ದಿನಗಳಲ್ಲಿ ಸಮಾಜದ ಶೋಷಿತರಿಗೆ ಶಿಕ್ಷಣ ನೀಡವ ಮೂಲಕ ಕಷ್ಟದಲ್ಲಿ ಬೆಳೆದಿದೆ. ಧರ್ಮ ಭಗಿಸಿನಿರಯರು ಸಮಾಜದ ಒಳಿತಿಗಾಗಿ ಸಾರ್ಥಕ ಸೇವೆ ನೀಡುತ್ತಿದ್ದಾರೆ. ಭಗಿನಿಯರು ನಿವೃತ್ತ ನಂತರ ಸಮಾಜಕ್ಕಾಗಿ ಸೇವೆ ನೀಡಲು ತನ್ನ ಜೀವನವನ್ನು ಮುಡಿಪಾಗಿಟ್ಟಿರುವುದ ಶ್ಲಾಘನೀಯ. ಕಾಂನ್ವೆಂಟ್‌ನಲ್ಲಿರುವ ಶಿಕ್ಷಣ ಸಂಸ್ಥೆಗಳು ಪುತ್ತೂರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಈ ಸಂಸ್ಥೆ ಇನ್ನಷ್ಟು ಉನ್ನತ ಸ್ಥಾನದಲ್ಲಿ ಬೆಳೆಯಲಿ ಎಂದರು.


ಶತಮಾನೋತ್ಸವದ ಕಾರ್ಯಕ್ರಮ ಮತೆಯಲಾಗದ ಕ್ಷಣ-ರೋಸ್ ಸೆಲಿನ್ ಬಿ.ಎಸ್:
ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಎಂ. ಡಾ. ರೋಸ್ ಸೆಲಿನ್ ಬಿ.ಎಸ್. ಮಾತನಾಡಿ, 1925ರಲ್ಲಿ ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‌ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಕನ್ಯಾಮಠವು ಇಂದು ಶತಮಾನೋತ್ಸವವನ್ನು ಆಚರಿಸಿದೆ. ಪುತ್ತೂರಿನಲ್ಲಿ ಪ್ರಾರಂಭಗೊಂಡ ಪ್ರಥಮ ಶಾಖೆಯು ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ವಹಿಸಿತ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿಸಲಾಗಿರುವ ಕನ್ಯಾಮಠದ ಬೆಳವಣಿಗೆಯಲ್ಲಿ ಗರ್ಟ್ರೂಡ್‌ರಂತಹ ಹಲವು ಮಂದಿ ಭಗಿನಿಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶಿಕ್ಷಣಕ್ಕಾಗಿ ಪುತ್ತೂರಿನಲ್ಲಿ ಲಿಟ್ಲ್ ಫ್ಲವರ್ ಹಾಗೂ ಬೆಥನಿ ಶಾಲೆಗಳನ್ನು ಸ್ಥಾಪಿಸಿದೆ. ಶತಮಾನೋತ್ಸವದ ಕಾರ್ಯಕ್ರಮಗಳು ಅದ್ಬುತವಾಗಿ ಮೂಡಿಬಂದಿದ್ದು ಮರೆಯಲಾಗದ ಕ್ಷಣವಾಗಿದೆ ಎಂದರು.


ಒಬ್ಬ ವ್ಯಕ್ತಿಯಿಂದ ಎನಾಗಬಹುದು ಎಂಬುದನ್ನು ತೋರಿಸಕೊಟ್ಟವರಾಗಿದ್ದಾರೆ-ಲಿಲ್ಲಿ ಪಿರೇರಾ ಬಿ.ಎಸ್:
ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಡಾ. ಲಿಲ್ಲಿ ಪಿರೇರಾ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‌ರವರ ಪವಾಡ ಕಾರ್ಯವಾಗಿ ಸ್ಥಾಪಿತವಾದ ಲಿಝಿಯೋ ಕನ್ಯಾಮಠ ಇಂದು ನೂರರ ಸಂಭ್ರಮದಲ್ಲಿದೆ. ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಹಸಿವು ನೀಗಿಸುವ ಕಷ್ಟದ ಕಾಲದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಅಸಾಧ್ಯವಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಹೊರಟು ತನ್ನ ಗುರಿಸಾಧಿಸಿದ್ದರು. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಅಪಾರ ಕೊಡುಗೆ ನೀಡಿದವರು. ಒಬ್ಬ ವ್ಯಕ್ತಿಯಿಂದ ಏನಾಗಬಹುದು ಎಂಬುದನ್ನು ತೋರಿಸದವತಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗೋಣ ಎಂದರು.


ಸನ್ಮಾನ:
ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಡಾ. ರೋಸ್ ಸೆಲಿನ್ ಬಿ.ಎಸ್., ಮಾಯಿದೇ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ಮಾಜಿ ಪ್ರಾಂತ್ಯಾಧಿಕಾರಿಣಿ ಮಾರಿಯೆಟ್ ಬಿ.ಎಸ್., ಭಗಿನಿ ಸಿಸಿಲಿಯಾ ಮೆಂಡೋನ್ಸಾ ಬಿ.ಎಸ್., ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಪಿಂಟೊ ಬಿ.ಎಸ್. ಹಾಗೂ ಬೆಥನಿ ಕಾನ್ವೆಂಟ್‌ನಲ್ಲಿ ಈ ತನಕ ಸೇವೆ ಸಲ್ಲಿಸಿ ಭಗಿನಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.


ಲಿಝಿಯೋ ಕಾನ್ವೆಂಟ್‌ನ ಸುಪೀರಿಯರ್ ಪ್ರಶಾಂತಿ ಬಿ.ಎಸ್ ಸ್ವಾಗತಿಸಿದರು. ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಮುಖ್ಯಗುರು ಭಗಿನಿ ವೆನಿಶಾ ಬಿ.ಎಸ್. ಹಾಗೂ ಭಗಿನಿ ರೀಮಾ ಜಾನೆಟ್ ಕಾರ್ಯಕ್ರಮ ನಿರೂಪಿಸಿದರು. ಸೆಲಿನ್ ಪೇತ್ರಾ ಹಾಗೂ ಸುನಿತಾ ಮೇರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು. ಧರ್ಮಗುರುಗಳು, ಧರ್ಮಭಗಿನಿಯರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಗಮನ ಸೆಳೆದ ನೃತ್ಯ ರೂಪಕ:
ಲಿಝಿಯೋ ಕಾನ್ವೆಂಟ್‌ನ ಸ್ಥಾಪನೆಯ ಉದ್ದೇಶ, ಪ್ರಾರಂಭ ಹಾಗೂ ನೂರು ವರ್ಷಗಳ ಸಾಧನೆಯ ಹಾದಿಯ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ವಿನೂತನವಾಗಿ ಮೂಡಿ ಬಂದಿರುವ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಮಾರು 50 ಮಂದಿ ವಿದ್ಯಾರ್ಥಿಗಳು ಈ ನೃತ್ಯ ರೂಪಕದಲ್ಲಿ ಹೆಜ್ಜೆ ಹಾಕಿದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಈ ನೃತ್ಯ ರೂಪಕವನ್ನು ಸಂಯೋಜಿಸಿ ನಿರ್ದೇಶಿಸಿದ್ದರು. ಸಂಜಯನಗರ ಶಾಲಾ ಶಿಕ್ಷಕ ರಮೇಶ್ ಉಳಯ ಸ್ವರ ನೀಡಿದ್ದರು, ಸಂಗೀತ ಸಂಯೋಜನೆ ಅಶ್ವಿನ್ ಗುಮ್ಮಟೆಗದ್ದೆ, ಸ್ವಸ್ತಿಕಾ ಆರ್ ಶೆಟ್ಟಿ ನೃತ್ಯ ಸಂಯೋಜನೆ ನೀಡಿದ್ದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರಾದ ವಿಲ್ಮಾ ಫೆರ್ನಾಂಡೀಸ್, ದಿವ್ಯಾ, ಮೊಬಿಯಾ, ಜಯಲ್ಷಕ್ಷ್ಮೀ, ಸೌಮ್ಯ ಹಾಗೂ ಸುನೀತಾ ಸಹಕರಿಸಿದ್ದರು. ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ ಹಾಗೂ ಪೂಜಾನೃತ್ಯ ನೆರವೇರಿತು.

LEAVE A REPLY

Please enter your comment!
Please enter your name here