ಬೆಂಗಳೂರು: ಖ್ಯಾತ ಉದ್ಯಮಿ,ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಯಾಗಿ ಅವರ ಅಂಗರಕ್ಷಕ ಮೋನಪ್ಪ ವಿಠ್ಠಲ ಎಂಬಾತನನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ರಾಮನಗರ ತಾಲ್ಲೂಕಿನ ಬಿಡದಿ ಮುದುವಾಡಿ ರಸ್ತೆಯ ಕರಿಯಪ್ಪನದೊಡ್ಡಿ ಬಳಿ ವಾರದ ಹಿಂದೆ ಗುಂಡಿನ ದಾಳಿ ನಡೆದಿತ್ತು.

ಘಟನೆ ನಡೆದ ದಿನ ರಿಕ್ಕಿ ಮನೆಯಲ್ಲಿದ್ದ ಅಂಗರಕ್ಷಕರು ಹಾಗೂ ಕೆಲಸಗಾರರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.ಆ ಪೈಕಿ ಏ.22ರಂದು ಮೋನಪ್ಪ ವಿಠ್ಠಲನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.ಈ ವೇಳೆ ಆತನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.ಮೋನಪ್ಪ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ತನಿಖಾಧಿಕಾರಿಗಳು ಏ.24ರಂದು ಸಂಜೆ ಬಂಧಿಸಿ ರಾಮನಗರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಕರೆತಂದು ಹಾಜರುಪಡಿಸಿದರು.ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 10 ದಿನ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಪೂರಕ ಸಾಕ್ಷ್ಯಾಧಾರ: ತನಿಖೆ ಸಂದರ್ಭದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳು ಹಾಗೂ ವಿಚಾರಣೆಯಲ್ಲಿ ಮೋನಪ್ಪವಿಠ್ಠಲನೇ ಕೃತ್ಯ ಎಸಗಿರುವುದು ಗೊತ್ತಾಗಿದೆ. ಹಾಗಾಗಿ, ಆತನನ್ನು ಬಂಽಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.ಗುಂಡಿನ ದಾಳಿಗೆ ಕಾರಣವೇನು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಆರ್.ಶ್ರೀನಿವಾಸ ಗೌಡ ಸುದ್ದಿಗಾರರಿಗೆ ತಿಳಿಸಿದರು.
ರಿಕ್ಕಿ ಅಂಗರಕ್ಷಕರು ಬಳಸುತ್ತಿದ್ದ 7 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂದೂಕುಗಳ ಜೊತೆಗೆ ಸ್ಥಳದಲ್ಲಿ ಸಿಕ್ಕ ಗುಂಡುಗಳು, ಖಾಲಿ ಕಾಟ್ರೀಜ್ಗಳನ್ನು ಸಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಕೊಟ್ಟಿದ್ದೇವೆ. ವರದಿ ಬಂದ ಬಳಿಕ ಕೃತ್ಯಕ್ಕೆ ಯಾವ ಬಂದೂಕು ಬಳಸಿದ್ದಾರೆ ಎಂಬುದು ಗೊತ್ತಾಗಲಿದೆ ಎಂದವರು ತಿಳಿಸಿದರು.
ಅಗತ್ಯವಿದ್ದರೆ ಮತ್ತೆ ವಿಚಾರಣೆ: ಕೃತ್ಯದ ಹಿಂದಿರುವವರ ಕುರಿತು ದೂರುದಾರರು ಅನುಮಾನ ವ್ಯಕ್ತಪಡಿಸಿರುವ ನಾಲ್ವರ ಪೈಕಿ ಮೊದಲ ಆರೋಪಿಯಾಗಿರುವ ರಾಕೇಶ್ ಮಲ್ಲಿ ಹಾಗೂ 3ನೇ ಆರೋಪಿ ನಿತೇಶ್ ಶೆಟ್ಟಿಯವರನ್ನು ವಿಚಾರಣೆ ನಡೆಸಲಾಗಿದೆ. ಅಗತ್ಯವಿದ್ದರೆ ಮತ್ತೆ ಕರೆಯಲಾಗುವುದು. 2ನೇ ಆರೋಪಿ ಅನುರಾಧಾ ಮತ್ತು 4ನೇ ಆರೋಪಿ ವೈದ್ಯನಾಥನ್ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದಾರೆ ಎಂದು ಎಸ್ಪಿ ಶ್ರೀನಿವಾಸ ಗೌಡ ತಿಳಿಸಿದರು.
ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿರುವ ಮನೆಗೆ ಏ.18ರಂದು ರಾತ್ರಿ ರಿಕ್ಕಿ ರೈ ಬಂದಿದ್ದರು. ಮಧ್ಯರಾತ್ರಿ ವಾಪಸ್ ಹೋಗುವಾಗ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ರಿಕ್ಕಿಯವರ ಕಿವಿ ಮತ್ತು ತೋಳಿಗೆ ಗುಂಡೇಟು ತಗುಲಿತ್ತು.ಸದ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
33 ವರ್ಷಗಳಿಂದ ಜೊತೆಗಿದ್ದ ಅಂಗರಕ್ಷಕ: ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಮೋನಪ್ಪವಿಠ್ಠಲ(53ವ.)ಸುಮಾರು 29 ವರ್ಷಗಳಿಂದ ಮುತ್ತಪ್ಪ ರೈಯವರಿಗೆ ಅಂಗರಕ್ಷಕನಾಗಿದ್ದ.ಅವರ ನಿಧನದ ಬಳಿಕ, ಪುತ್ರ ರಿಕ್ಕಿಯವರಿಗೂ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈ ಅವರಿಗೆ ಕೆಟ್ಟದಾಗಿ ನಿಂದಿಸಿದ್ದ ಕಾರಣಕ್ಕಾಗಿ 1993ರಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಜೈಲು ಸೇರಿ ಬಳಿಕ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮೋನಪ್ಪ ವಿಠ್ಠಲ ಅಂದಿನಿಂದಲೂ ಮುತ್ತಪ್ಪ ರೈ ಅವರ ಅಂಗರಕ್ಷಕನಾಗಿದ್ದ. ಇತ್ತೀಚೆಗೆ ಹೃದಯ ಸಂಬಂಧಿ ಅನಾರೋಗ್ಯಕ್ಕೆ ಒಳಗಾಗಿದ್ದ ಆತನಿಗೆ ಸ್ಟಂಟ್ ಅಳವಡಿಸಲಾಗಿತ್ತು. ಹಾಗಾಗಿ, ಆತನಿಗೆ ಮನೆಯ ಭದ್ರತೆಯ ಜವಾಬ್ದಾರಿ ವಹಿಸಲಾಗಿತ್ತು.