*ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಪ್ರಸ್ತಾಪ
*ಸಮಿತಿ ರದ್ದುಗೊಳಿಸಿ ಮರು ಪ್ರಕಟಣೆಗೆ ನಿರ್ಣಯ
ಪುತ್ತೂರು: ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಲಾಗಿದೆ.
ವ್ಯವಸ್ಥಾಪನಾ ಸಮಿತಿ ರಚಿಸಿ ಈ ಹಿಂದೆ ಹೊರಡಿಸಲಾಗಿದ್ದ ಆದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ರದ್ದುಪಡಿಸಿ ಮರು ಪ್ರಕಟಣೆ ಹೊರಡಿಸಲು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಣಯಿಸಲಾಗಿದ್ದು,ಅದರಂತೆ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿಯವರು ಏ.೨೪ರಂದು ಆದೇಶ ಹೊರಡಿಸಿದ್ದಾರೆ.
ಪ್ರವರ್ಗ ‘ಬಿ’ಗೆ ಸೇರಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಽಗೆ ಓರ್ವ ಪ್ರಧಾನ ಅರ್ಚಕರ ಸಹಿತ ಒಂಭತ್ತು ಮಂದಿ ಸದಸ್ಯರನ್ನು ನೇಮಕಗೊಳಿಸಿ ಜ.9ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದರು.ಅಲ್ಲದೆ, ಒಂದು ವಾರದ ಒಳಗಾಗಿ ಸದಸ್ಯರ ಸಭೆ ನಡೆಸಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿ ನಿರ್ಣಯದ ಪ್ರಸ್ತಾವನೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು.ಆದರೆ, ಸಮಿತಿ ಸದಸ್ಯರ ನೇಮಕವಾಗಿ ಮೂರು ತಿಂಗಳು ಕಳೆದರೂ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ.
ಸದಸ್ಯರಲ್ಲಿಲ್ಲದ ಒಮ್ಮತ ನಡೆಯದ ಅಧ್ಯಕ್ಷರ ಆಯ್ಕೆ: ವ್ಯವಸ್ಥಾಪನಾ ಸಮಿತಿಗೆ ವಾರದೊಳಗೆ ಅಧ್ಯಕ್ಷರ ಆಯ್ಕೆ ಮಾಡಿ ನಿರ್ಣಯದ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸುವಂತೆ, ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಿದ್ದ ಸಹಾಯಕ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದರು. ಆದರೆ, ಸದಸ್ಯರಲ್ಲಿ ಒಮ್ಮತವಿಲ್ಲದೇ ಅಧ್ಯಕ್ಷರ ಆಯ್ಕೆ ನಡೆಯದೇ ಇರುವುದರಿಂದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ, ಸದ್ರಿ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಿ ಮರುಪ್ರಕಟಣೆ ಹೊರಡಿಸಲು ನಿರ್ಣಯಿಸಲಾಗಿರುತ್ತದೆ. ಅದರಂತೆ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಹೊರಡಿಸಿರುವ ಆದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ಇವರು ಸದಸ್ಯರಾಗಿ ನೇಮಕಗೊಂಡಿದ್ದರು: ಇಲಾಖೆಯ ಆದೇಶದಂತೆ, ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಪ.ಜಾತಿ ಮತ್ತು ಪ.ಪಂಗಡದಿಂದ ಸತೀಶ್ ನಾಯ್ಕ ಕಾನದಗುರಿ, ಮಹಿಳಾ ಮಿಸಲು ಸ್ಥಾನದಿಂದ ಪ್ರಮೀಳಾ ಬ್ರಹ್ಮರಕೋಡಿ, ಲಲಿತಾ ಪದವು, ಸಾಮಾನ್ಯ ಸ್ಥಾನದಿಂದ ವೆಂಕಟಕೃಷ್ಣ ಪಾಲೆಚ್ಚಾರು, ನವೀನ ಕರ್ಕೇರ ರಾಂಬೈಲು, ನಾರಾಯಣ ಗೌಡ ಕುಕ್ಕುತ್ತಡಿ,ಸತೀಶ ಒಳಗುಡ್ಡೆ ಹಾಗೂ ವಾಸುದೇವ ನಾಯ್ಕರವರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಳಿಸಿ ಆದೇಶಿಸಲಾಗಿತ್ತು.
ಇಬ್ಬರೊಳಗಿನ ಪೈಪೋಟಿ-ನಡೆಯದ ಅಧ್ಯಕ್ಷರ ಆಯ್ಕೆ?: ಜಿಲ್ಲಾ ಧಾರ್ಮಿಕ ಪರಿಷತ್ನಿಂದ ನೇಮಕಗೊಂಡಿರುವ ಎಂಟು ಮಂದಿ ಸದಸ್ಯರಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರೊಳಗೆ ತೀವ್ರ ಪೈಪೋಟಿಯಿದ್ದುದರಿಂದ ಅಧ್ಯಕ್ಷರ ಆಯ್ಕೆಗೆ ಸದಸ್ಯರಲ್ಲಿ ಒಮ್ಮತ ಮೂಡಿರಲಿಲ್ಲ. ಇದು ಶಾಸಕರ ಗಮನಕ್ಕೆ ಬಂದು ಅವರು ಸಭೆ ನಡೆಸಿದ್ದರೂ ಅಲ್ಲಿಯೂ ಅಧ್ಯಕ್ಷರ ಆಯ್ಕೆಗೆ ಒಮ್ಮತ ಮೂಡಿರಲಿಲ್ಲ. ಇದರಿಂದಾಗಿ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿಯೇ ಉಳಿದಿತ್ತು.
ಜಿಲ್ಲಾ ಧಾರ್ಮಿಕ ಪರಿಷತ್ಗೆ ದೂರು: ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆಯಲ್ಲಿ ಸಮಸ್ಯೆ ಇರುವ ಕುರಿತು ಜಿಲ್ಲಾ ಧಾರ್ಮಿಕ ಪರಿಷತ್ಗೆ ದೂರು ಬಂದಿರುವುದರಿಂದ ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರು ತಿಳಿಸಿದ್ದರು.ಇದೀಗ ವ್ಯವಸ್ಥಾಪನಾ ಸಮಿತಿಯನ್ನೇ ರದ್ದುಗೊಳಿಸಿ ಆದೇಶಿಸಲಾಗಿದೆ.