ರಮೇಶ್ ಭಟ್ ಬಳಗಕ್ಕೆ 10 ಸಹಕಾರ ಭಾರತಿಗೆ 2 ಸ್ಥಾನ
ರಾಮಕುಂಜ: ತೀವ್ರ ಕುತೂಹಲ ಕೆರಳಿಸಿದ್ದ ಆಲಂಕಾರು ಸಹಕಾರ ಸಂಘದ ಚುನಾವಣೆ ಫಲಿತಾಂಶ ಘೋಷಣೆಗೆ ಸಂಬಂಧಿಸಿ ಹೈಕೋರ್ಟ್ ತೀರ್ಪು ಪ್ರಕಟಗೊಂಡಿದ್ದು ಬಿಜೆಪಿಗೆ ಸೆಡ್ಡು ಹೊಡೆದು ಸ್ಪರ್ಧೆ ಮಾಡಿದ್ದ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗ ಮೇಲುಗೈ ಸಾಧಿಸಿದೆ. 12 ನಿರ್ದೇಶಕ ಸ್ಥಾನಗಳ ಪೈಕಿ 10ರಲ್ಲಿ ರಮೇಶ್ ಭಟ್ ಬಳಗ ಜಯಭೇರಿ ಗಳಿಸಿದ್ದು ಸಹಕಾರ ಭಾರತಿ ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಪ್ರತಿಷ್ಠಿತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗಾಗಿ ಮಾ.೨ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಕೋರಿ ಮತದಾರರ ಪಟ್ಟಿಯಲ್ಲಿ ಇಲ್ಲದ ಸಂಘದ 423 ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ 423 ಸದಸ್ಯರಿಗೂ ಮತದಾನಕ್ಕೆ ಅವಕಾಶ ನೀಡಿತ್ತು. ಆದರೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮತದಾನದ ಬಳಿಕ ಮತ ಎಣಿಕೆ ನಡೆದರೂ ಚುನಾವಣಾಧಿಕಾರಿಯವರು ಫಲಿತಾಂಶ ಘೋಷಣೆ ಮಾಡಿರಲಿಲ್ಲ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಎ.24ರಂದು ತೀರ್ಪು ಪ್ರಕಟಿಸಿದೆ.
ರಿಟ್ ಅರ್ಜಿ ವಾಪಸ್
ಎ.24ರಂದು ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಅನರ್ಹ ಮತದಾರರ ಪರ ವಕೀಲರು ರಿಟ್ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಪಡೆದು ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಮತದಾರರ ಮತ ಪರಿಗಣನೆಗೆ ತೆಗೆದುಕೊಳ್ಳದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಅರ್ಹ ಮತದಾರರು ಚಲಾಯಿಸಿದ್ದ ಮತ ಮಾತ್ರ ಪರಿಗಣನೆಗೆ ತೆಗೆದುಕೊಂಡು ಫಲಿತಾಂಶ ಘೋಷಿಸುವಂತೆ ಚುನಾವಣಾಧಿಕಾರಿಯವರಿಗೆ ಹೈಕೋರ್ಟ್ ಆದೇಶಿಸಿದೆ. ಇದರಿಂದಾಗಿ ರಮೇಶ್ ಭಟ್ ಉಪ್ಪಂಗಳ ಸಹಕಾರ ಬಳಗದ 10 ಹಾಗೂ ಸಹಕಾರ ಭಾರತಿಯ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ.
ಆಯ್ಕೆಯಾಗುವ ನಿರ್ದೇಶಕರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಕೇಶವ ಗೌಡ (828), ದಯಾನಂದ ರೈ ಮನವಳಿಕೆ(795), ರಮೇಶ್ ಯು.ಉಪ್ಪಂಗಳ (704), ಉದಯ ಸಾಲಿಯಾನ್(757), ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪಽಸಿದ್ದ ರತ್ನಾ ಬಿ.ಕೆ(717), ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ಸ್ಪಧಿಸಿದ್ದ ವಿಜಯ ಎಸ್ ಅಂಬಾ(727), ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಸ್ಪಧಿಸಿದ್ದ ಪದ್ಮಪ್ಪ ಗೌಡ ಕೆ.(757), ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪಧಿಸಿದ್ದ ಕುಂಞ ಮುಗೇರ(778), ಪರಿಶಿಷ್ಠ ಪಂಗಡ ಮೀಸಲು ಸ್ಥಾನದಿಂದ ಸ್ಪಧಿಸಿದ್ದ ಅಶೋಕ ಪೆರಾಬೆ(809) ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಲೋಕೇಶ್ ಕಮ್ಮಿತ್ತಿಲು (151)ಆಯ್ಕೆಯಾಗಲಿದ್ದಾರೆ. ಸಹಕಾರಿ ಭಾರತಿಯ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಅಶೋಕ ಗೋಕುಲನಗರ(696), ಮಹಿಳಾ ಮೀಸಲು ಸ್ಥಾನದಿಂದ ಸ್ಪಧಿಸಿದ್ದ ಗಾಯತ್ರಿ(853)ಆಯ್ಕೆಯಾಗಲಿದ್ದಾರೆ.
ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿದ ಕೂಡಲೇ ಚುನಾವಣಾಧಿಕಾರಿಯವರು ಫಲಿತಾಂಶ ಪ್ರಕಟ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ದ.ಕ.ಜಿಲ್ಲೆ ಮಂಗಳೂರು ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಅವರು ಚುನಾವಣಾಧಿಕಾರಿಯಾಗಿದ್ದರು. ಸಾಲಗಾರ ಕ್ಷೇತ್ರದಲ್ಲಿ 2059 ಮತದಾರರಿದ್ದು ಈ ಪೈಕಿ 1808 ಮತದಾರರು ಮತಚಲಾವಣೆ ಮಾಡಿದ್ದು ಶೇ.88 ಮತದಾನ ನಡೆದಿತ್ತು. ಸಾಲಗಾರರಲ್ಲದ ಕ್ಷೇತ್ರದಲ್ಲಿ 412 ಮತದಾರರಿದ್ದು ಈ ಪೈಕಿ 300 ಮತದಾರರು ಮತ ಚಲಾವಣೆ ಮಾಡಿದ್ದು ಶೇ.75 ಮತದಾನವಾಗಿತ್ತು. 12 ನಿರ್ದೇಶಕ ಸ್ಥಾನಗಳಿಗೆ ಸಹಕಾರ ಭಾರತಿಯ 12, ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ 11 ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬರು ಸೇರಿ 24 ಮಂದಿ ಕಣದಲ್ಲಿದ್ದರು. ರಮೇಶ್ ಭಟ್ ಬಳಗವು 10 ಸ್ಥಾನಗಳಲ್ಲಿ ಭರ್ಜರಿ ಜಯದಾಖಲಿಸಿ ಆಡಳಿತ ಚುಕ್ಕಾಣಿ ಹಿಡಿಯಲಿದೆ.
ಹೈಕೋರ್ಟ್ ನಲ್ಲಿ ರಮೇಶ್ ಭಟ್ ಸಹಕಾರಿ ಬಳಗದ ಪರ ವಕೀಲ ಗಟ್ಟಿಗಾರು ಬಾಲಕೃಷ್ಣ ಶಾಸ್ತ್ರಿ ಹಾಗೂ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರವಾಗಿ ಆನಂದರಾಮ ಅವರು ವಾದಿಸಿದ್ದರು.
ತಾಳೆಯಾಗದ ಸಹಿ
ಸಹಕಾರ ಸಂಘದ ನಿಬಂಧನೆ ಪ್ರಕಾರ ಸಾಲಗಾರ ಕ್ಷೇತ್ರದಲ್ಲಿ 2059 ಸದಸ್ಯರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಮತದಾನದಿಂದ ಕೈಬಿಟ್ಟಿದ್ದ ಎಲ್ಯಣ್ಣ ಪೂಜಾರಿ ಹಾಗೂ 423 ಸದಸ್ಯರು ಹೈಕೋರ್ಟ್ ಮೊರೆ ಹೋಗಿ ಮತದಾನಕ್ಕೆ ಅವಕಾಶ ಪಡೆದುಕೊಂಡು ಬಂದಿದ್ದರು. ಹೈಕೋರ್ಟ್ ಆದೇಶದಂತೆ ಇವರಿಗೆ ಪ್ರತ್ಯೇಕ ಬೂತ್ನಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಪೈಕಿ 356 ಮಂದಿ ಮತ ಚಲಾಯಿಸಿದ್ದರು. ಮತದಾನಕ್ಕೆ ಅವಕಾಶ ಕೋರಿದ್ದ 423 ಸದಸ್ಯರಲ್ಲಿ ಬಹುತೇಕ ಸದಸ್ಯರ ಸಹಿ ಅವರ ನೈಜ ಸಹಿಯ ಜೊತೆ ತಾಳೆಯಾಗದೇ ಇರುವುದನ್ನು ವಿಚಾರಣೆ ವೇಳೆ ವಕೀಲರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಇದೇ ಕಾರಣದಿಂದ ಅನರ್ಹ ಮತದಾರರ ಪರ ವಕೀಲರು ರಿಟ್ ಅರ್ಜಿ ವಾಪಸ್ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಸಹಿ ಪೋರ್ಜರಿ, ಐವರಿಂದ ಹೈಕೋರ್ಟ್ ಮೊರೆ
ಮತದಾನ ಅವಕಾಶ ಕೋರಿ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಮ್ಮ ಸಹಿ ಪೋರ್ಜರಿ ಮಾಡಲಾಗಿದೆ ಎಂದು ಐವರು ಸದಸ್ಯರು ವಿಚಾರಣೆ ವೇಳೆ ಹೈಕೋರ್ಟ್ ಗಮನಕ್ಕೆ ತಂದರು ಎಂದು ವರದಿಯಾಗಿದೆ. ಮತದಾನಕ್ಕೆ ಅವಕಾಶ ಕೋರಿ ನಾವು ಅರ್ಜಿ ಸಲ್ಲಿಸಿಯೂ ಇಲ್ಲ, ಚುನಾವಣೆಯಲ್ಲಿ ಮತದಾನವನ್ನೂ ಮಾಡಿಲ್ಲ ಎಂದು ಈ ಐವರು ಹೈಕೋರ್ಟ್ ಗಮನಕ್ಕೆ ತಂದರು ಎಂದು ವರದಿಯಾಗಿದೆ. ಇವರ ಪರ ವಕೀಲ ಪ್ರದೀಪ್ಕುಮಾರ್ ಅವರು ಹೈಕೋರ್ಟ್ ನಲ್ಲಿ ವಾದಿಸಿದ್ದರು.