ಪುತ್ತೂರು:ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿದ್ದ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿಯವರೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.ಏ.25ರಂದು ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಸುಳ್ಯಪದವು ನಿವಾಸಿ ಜೊಹರಾ ಮತ್ತು ಅವರ ಮಗನ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ರೋಗಿಗಳ ತಪಾಸಣೆ ಸಂಬಂಧ ಪರ್ಯಟನೆ ಮಾಡುತ್ತಿದ್ದ ವೇಳೆ ಪ್ರಸವ ನಂತರದ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರಮಂಗಲದ ಅಝೀಮ್ ಕೈಮರ್ ಎಂಬವರ ಪತ್ನಿ ಫಾತಿಮತ್ ಝರೀನಾ ಇವರ ಕಡೆಯವರಾದ ಸುಳ್ಯಪದವಿನ ಝೊಹರಾ ಮತ್ತು ಅವರ ಮಗ, ರೋಗಿಯು ಮಲಗುವ ಮಂಚದಲ್ಲಿ ಕುಳಿತುಕೊಂಡಿದ್ದರು.
ಇದನ್ನು ಗಮನಿಸಿದ ನಾನು, ಇದು ರೋಗಿಯನ್ನು ಭೇಟಿ ಮಾಡುವ ಸಮಯವಲ್ಲ ಮಾತ್ರವಲ್ಲದೆ,ರೋಗಿಯು ಕುಳಿತುಕೊಂಡಿರುವ ಮಂಚದಲ್ಲಿ ಕುಳಿತುಕೊಂಡಿದ್ದೀರಾ, ಇದರಿಂದ ಇಲ್ಲಿಯ ನವಜಾತ ಶಿಶುಗಳಿಗೆ ಮತ್ತು ಬಾಣಂತಿಯರಿಗೆ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ವಾರ್ಡ್‌ನಿಂದ ಹೊರಗೆ ಹೋಗಿ ಎಂದು ಹೇಳಿದೆ.
ಈ ಸಂದರ್ಭದಲ್ಲಿ ಝೊಹರಾರವರು ಏರು ಧ್ವನಿಯಲ್ಲಿ ಮಾತನಾಡಿ ಎದುರುತ್ತರವನ್ನು ನೀಡಿದ್ದು,ಅಲ್ಲದೆ ಅವರ ಮಗ ಏಕಾಏಕಿಯಾಗಿ ಅನುಚಿತವಾಗಿ ವರ್ತಿಸುತ್ತಾ ಏಕವಚನದಲ್ಲಿ ಬೈಯುತ್ತಾ, ಹಲ್ಲೆ ಮಾಡಲು ಬಂದು, ಕೈಯಿಂದ ದೂಡಿದ್ದರು.ನಂತರ ಹೊರಗೆ ಬಂದು ಏರು ಧ್ವನಿಯಲ್ಲಿ, ರೋಗಿಗಳನ್ನು ನೋಡಲು ಬರುವ ಸಮಯವನ್ನು ಆಂಗ್ಲ ಭಾಷೆಯಲ್ಲಿ ಹಾಕಬೇಕಿತ್ತು, ನಮಗೆ ಕನ್ನಡ ಓದಲು ಬರುವುದಿಲ್ಲ.
ನೀವೆಲ್ಲ ಓದಿದವರು ನಿಮಗೆ ಗೊತ್ತಾಗುವುದಿಲ್ಲವಾ ಎಂದು ಹೇಳಿ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ, ಕರ್ತವ್ಯ ನಿರತಳಾಗಿದ್ದ ನನ್ನ ಫೊಟೋವನ್ನೂ ತೆಗೆದಿರುವುದಾಗಿ ಡಾ.ಆಶಾಜ್ಯೋತಿಯವರು ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಳಾದ ಜೊಹರಾ ಮತ್ತವರ ಮಗನ ವಿರುದ್ಧ ಕಲಂ 132, 74, 79 ಜೊತೆಗೆ 3(5) BNS 2023ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.