(ಏ.27) ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಕುಂಕುಮ ಮಹತಿ’ ಕೃತಿ ಲೋಕಾರ್ಪಣೆ -ಸಾಮೂಹಿಕ ಕುಂಕುಮಾರ್ಚನೆ

0

ಪುತ್ತೂರು: ಭಾರತೀಯ ಭವ್ಯ ಸನಾತನ ಪರಂಪರೆಯ ಅಸ್ಮಿತೆ ಸಿಂಧೂರ, ಈ ಸಿಂಧೂರದ ಕುರಿತಾದ ಮಹತ್ವವನ್ನು ತಿಳಿಸುವ ಹಿನ್ನೆಲೆಯಲ್ಲಿ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಇವರ ಮುತುವರ್ಜಿಯಲ್ಲಿ, ಕಾಸರಗೋಡಿನ ಲೇಖಕಿ ಶೀಲಾ ಲಕ್ಷ್ಮೀ ಇವರು ಬರೆದ ಕೃತಿ ‘ಕುಂಕುಮ ಮಹತಿ’ ಯು ಏಪ್ರಿಲ್ 27 ಆದಿತ್ಯವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿಯಲ್ಲಿರುವ ಅನ್ನಛತ್ರದಲ್ಲಿ ಬೆಳಗ್ಗೆ 9:30 ಕ್ಕೆ ಲೋಕಾರ್ಪಣೆ ಗೊಳ್ಳಲಿದೆ. ಬಳಿಕ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.

ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ, ಮುಳಿಯ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ನಡೆಯುವ ಕೃತಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ದೇವಾಲಯ ಸಂವರ್ಧನ ಸಮಿತಿಯ ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ ಪ್ರಮುಖ್ ಶ್ರೀ ಗಣೇಶ ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾವಯವ ಕುಂಕುಮದ ಅರಿವನ್ನುಂಟು ಮಾಡುವ ನೆಟ್ಟಿನಲ್ಲಿ, ಸಾವಯವ ಕುಂಕುಮ ಅನಾವರಣಗೊಳ್ಳಲಿದೆ.

ಕೃತಿ ಲೋಕಾರ್ಪಣೆಯ ಬಳಿಕ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಆಸಕ್ತ ಯುವತಿಯರು,ಮಹಿಳೆಯರು ಕಾರ್ಯಕ್ರಮದಲ್ಲಿ ಹಾಗೂ ಕೃತಿ ಲೋಕಾರ್ಪಣಾ ಸಮಾರಂಭಕ್ಕೆ ಭಾಗಿಯಾಗುವಂತೆ ತಿಳಿಸಿದ್ದಾರೆ. ಕುಂಕುಮಾರ್ಚನೆಗೆ ಬೇಕಾದ ಸಾಹಿತ್ಯವನ್ನು ಸಂಘಟಕರೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here