ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ ಅಧ್ಯಕ್ಷರ ಆಯ್ಕೆಗೆ ಮುಕ್ತ ಅವಕಾಶ-ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ

0

ವ್ಯವಸ್ಥಾಪನಾ ಸಮಿತಿ ರದ್ದುಗೊಳಿಸಿದ್ದ ಆದೇಶಕ್ಕೂ ತಡೆ
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸದಸ್ಯರೊಳಗೆ ಒಮ್ಮತವಿಲ್ಲದೇ ಇರುವುದರಿಂದ ವ್ಯವಸ್ಥಾಪನಾ ಸಮಿತಿಯನ್ನು ಬರ್ಕಾಸ್ತುಗೊಳಿಸಬಹುದು ಎಂದು ದೇವಳದ ಆಡಳಿತಾಧಿಕಾರಿಯವರು ಶಿಫಾರಸ್ಸು ಮಾಡಿದ್ದ ವಿಚಾರ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಪ್ರಸ್ತಾಪವಾಗಿ, ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ ಮರು ಪ್ರಕಟಣೆಗೆ ತೀರ್ಮಾನವಾಗಿದ್ದರಿಂದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಏ.೨೪ರಂದು ಆದೇಶ ಮಾಡಿದ್ದರು.ಆದರೆ ಆಡಳಿತಾಧಿಕಾರಿಯವರ ಶಿಫಾರಸ್ಸು ಮತ್ತು ಆ ಬಳಿಕದ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿದ್ದ ಆದೇಶಕ್ಕೂ ತಡೆಯಾಜ್ಞೆ ದೊರೆತಂತಾಗಿದೆ-
ಅರುಣ್‌ಶ್ಯಾಮ್ ಪುತ್ತೂರು, ಅರ್ಜಿದಾರರ ಪರ ವಕೀಲರು

ಪುತ್ತೂರು:ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆ ನಡೆಸಿ ಅಧ್ಯಕ್ಷರ ಆಯ್ಕೆ ನಡೆಸಲು ಕರ್ನಾಟಕ ಹೈಕೋರ್ಟ್ ಮುಕ್ತ ಅವಕಾಶ ನೀಡಿದೆ.ವ್ಯವಸ್ಥಾಪನಾ ಸಮಿತಿ ಸದಸ್ಯರೊಳಗೆ ಸಹಮತವಿಲ್ಲದೇ ಇರುವುದರಿಂದ ಅಧ್ಯಕ್ಷರ ಆಯ್ಕೆಯಾಗದಿರುವ ಕಾರಣಕ್ಕೆ ಸಮಿತಿಯನ್ನು ಬರ್ಕಾಸ್ತುಗೊಳಿಸುವಂತೆ ದೇವಳದ ಆಡಳಿತಾಧಿಕಾರಿಯವರು ಧಾರ್ಮಿಕ ದತ್ತಿ ಇಲಾಖೆಗೆ ಮಾಡಿದ್ದ ಶಿಫಾರಸ್ಸು ಮತ್ತು ಆ ಬಳಿಕದ ಎಲ್ಲ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರವರ್ಗ ಱಬಿೞಗೆ ಸೇರಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಓರ್ವ ಪ್ರಧಾನ ಅರ್ಚಕರ ಸಹಿತ ಒಂಭತ್ತು ಮಂದಿ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಜ.೯ರಂದು ಆದೇಶ ಹೊರಡಿಸಿದ್ದರು.

ಇಲಾಖೆಯ ಆದೇಶದಂತೆ ದೈವಸ್ಥಾನದ ಪ್ರಧಾನ ಅರ್ಚಕ/ಅರ್ಚಕ, ಪ.ಜಾತಿ ಮತ್ತು ಪ.ಪಂಗಡದಿಂದ ಸತೀಶ್ ನಾಯ್ಕ ಕಾನದಗುರಿ, ಮಹಿಳಾ ಮೀಸಲು ಸ್ಥಾನದಿಂದ ಪ್ರಮೀಳಾ ಬ್ರಹ್ಮರಕೋಡಿ, ಲಲಿತಾಶಂಕರ ಪಾಟಾಳಿ ಪದವು, ಸಾಮಾನ್ಯ ಸ್ಥಾನದಿಂದ ವೆಂಕಟಕೃಷ್ಣ ಪಾಲೆಚ್ಚಾರು, ನವೀನ ಕರ್ಕೇರ ರಾಂಬೈಲು, ನಾರಾಯಣ ಗೌಡ ಕುಕ್ಕುತ್ತಡಿ, ಸತೀಶ ಗೌಡ ಒಳಗುಡ್ಡೆ ಹಾಗೂ ವಾಸುದೇವ ನಾಯ್ಕ ಪದವುರವರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಳಿಸಿ ಆದೇಶಿಸಲಾಗಿತ್ತು.ದೇವಳದ ಆಡಳಿತಾಧಿಕಾರಿಯವರು ಒಂದು ವಾರದ ಒಳಗಾಗಿ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆ ಜರುಗಿಸಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿ ನಿರ್ಣಯದ ಪ್ರತಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು.ಆದರೆ,ಸಮಿತಿ ಸದಸ್ಯರ ನೇಮಕವಾಗಿ ಮೂರು ತಿಂಗಳು ಕಳೆದರೂ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ.
ವ್ಯವಸ್ಥಾಪನಾ ಸಮಿತಿಗೆ ವಾರದೊಳಗೆ ಅಧ್ಯಕ್ಷರ ಆಯ್ಕೆ ಮಾಡಿ ನಿರ್ಣಯದ ಪ್ರತಿಯನ್ನು ಇಲಾಖೆಗೆ ಸಲ್ಲಿಸುವಂತೆ ದೇವಳದ ಆಡಳಿತಾಧಿಕಾರಿಯವರಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಸೂಚಿಸಿದ್ದರು.ಆದರೆ,ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಸಮಿತಿ ಸದಸ್ಯರ ಸಭೆ ನಡೆದಿರಲಿಲ್ಲ.ಸದಸ್ಯರಿಬ್ಬರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದುದು ಇದಕ್ಕೆ ಕಾರಣ ಎಂದು ಹೇಳಲಾಗಿತ್ತು.ಈ ವಿಚಾರ ಶಾಸಕರ ಗಮನಕ್ಕೆ ಬಂದು ಅವರು ಸದಸ್ಯರ ಜೊತೆ ಮಾತುಕತೆ ನಡೆಸಿದ್ದರು.ಆದರೂ ಅಧ್ಯಕ್ಷರ ಆಯ್ಕೆ ಸಭೆ ನಡೆದಿರಲಿಲ್ಲ.

ಅಧ್ಯಕ್ಷರ ಆಯ್ಕೆಗೆ ಸಭೆ ನಡೆಸಲು ಆಡಳಿತಾಧಿಕಾರಿಗೆ ಸೂಚಿಸಿ- 7 ಮಂದಿ ಸದಸ್ಯರಿಂದ ಎಸಿಗೆ ಮನವಿ: ವ್ಯವಸ್ಥಾಪನಾ ಸಮಿತಿ ರಚನೆಯಾಗಿ ಮೂರು ತಿಂಗಳು ಆದರೂ ದೇವಳದ ಆಡಳಿತಾಧಿಕಾರಿಯವರು ಅಧ್ಯಕ್ಷರ ಆಯ್ಕೆ ಮಾಡಿರುವುದಿಲ್ಲ.ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಶ್ರೀ ಭಟ್ಟಿ ವಿನಾಯಕ ದೇವಸ್ಥಾನ, ಶ್ರೀ ವನಶಾಸ್ತಾರ ಕ್ಷೇತ್ರ ಬಲ್ನಾಡು ಇಲ್ಲಿಯ ಆಡಳಿತ ಕೂಡಾ ಇರುತ್ತದೆ.ಇಲ್ಲಿ ವಾರ್ಷಿಕವಾಗಿ ೧೪೦ಕ್ಕೂ ಹೆಚ್ಚು ಕಾರ್ಯಕ್ರಮಗಳು ಜರಗುತ್ತವೆ.ಇವುಗಳ ವ್ಯವಸ್ಥೆ ಬಗ್ಗೆ ಆಡಳಿತ ಮಂಡಳಿ ಅವಶ್ಯಕತೆ ಇದೆ.ಅಧ್ಯಕ್ಷರ ಆಯ್ಕೆಯಾಗದೇ ತೊಂದರೆ ಅಲ್ಲದೆ ಏಪ್ರಿಲ್ ತಿಂಗಳಲ್ಲಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ಜಾತ್ರಾ ಕಾರ್ಯಕ್ರಮವೂ ನಡೆಯಲಿದ್ದು ಇದರ ಪೂರ್ವಭಾವಿ ತಯಾರಿಗಾಗಿ ಆಡಳಿತ ಕಮಿಟಿಯ ಅವಶ್ಯಕತೆ ಇರುತ್ತದೆ.ಆದ್ದರಿಂದ ತಕ್ಷಣ ಈ ಬಗ್ಗೆ ಪರಿಶೀಲನೆ ಮಾಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಮಾಡುವಂತೆ ದೇವಳದ ಆಡಳಿತಾಧಿಕಾರಿಗೆ ಆದೇಶ ಮಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರ ಪೈಕಿ ವೆಂಕಟಕೃಷ್ಣ ಪಿ.,ಲಲಿತಾ, ನಾರಾಯಣ ಗೌಡ, ಸತೀಶ್ ನಾಯ್ಕ,ಪ್ರಮೀಳ,ವಾಸುದೇವ ನಾಯ್ಕ ಮತ್ತು ಸತೀಶ್ ಗೌಡ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ಮಾ.೧೯ರಂದು ಮನವಿ ಸಲ್ಲಿಸಿದ್ದರು.

ಅಧ್ಯಕ್ಷರ ಆಯ್ಕೆಗೆ ಮೂಡದ ಒಮ್ಮತ ಸಮಿತಿ ಬರ್ಕಾಸ್ತಿಗೆ ಆಡಳಿತಾಧಿಕಾರಿ ಶಿಫಾರಸ್ಸು: ಈ ಮಧ್ಯೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸದಸ್ಯರೊಳಗೆ ಒಮ್ಮತವಿಲ್ಲದೇ ಇರುವುದರಿಂದ ಸಭೆ ನಡೆಯದೆ ಅಧ್ಯಕ್ಷರ ಆಯ್ಕೆಯಾಗಿಲ್ಲ.ಈ ಕಾರಣಕ್ಕಾಗಿ ವ್ಯವಸ್ಥಾಪನಾ ಸಮಿತಿಯನ್ನು ಬರ್ಕಾಸ್ತುಗೊಳಿಸಬಹುದು ಎಂದು ದೇವಳದ ಆಡಳಿತಾಧಿಕಾರಿಯಾಗಿರುವ ಬಲ್ನಾಡು ಗ್ರಾ.ಪಂ.ಪಿಡಿಒ ದೇವಪ್ಪ ಪಿ.ಆರ್.ಅವರು ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತರಿಗೆ ಶಿಫಾರಸ್ಸು ಪತ್ರವೊಂದನ್ನು ಕಳುಹಿಸಿದ್ದರು.ಈ ವಿಚಾರ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆಗೆ ಬಂದು, ದೇವಳದ ವ್ಯವಸ್ಥಾಪನಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ, ಮರು ಪ್ರಕಟನೆಗೆ ತೀರ್ಮಾನಿಸಲಾಗಿತ್ತು.ಅದರಂತೆ, ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಏ.೨೪ರಂದು ಆದೇಶಿಸಿದ್ದರು.

ಆಡಳಿತಾಧಿಕಾರಿ ಶಿಫಾರಸ್ಸು ವಿರುದ್ಧ 7 ಮಂದಿ ಸದಸ್ಯರಿಂದ ಹೈಕೋರ್ಟ್‌ಗೆ ರಿಟ್: ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸದಸ್ಯರೊಳಗೆ ಒಮ್ಮತ ಮೂಡದೇ ಇರುವುದರಿಂದ ಸಭೆ ನಡೆಸಲಾಗುತ್ತಿಲ್ಲ.ಈ ಕಾರಣಕ್ಕಾಗಿ ವ್ಯವಸ್ಥಾಪನಾ ಸಮಿತಿಯನ್ನು ಬರ್ಕಾಸ್ತುಗೊಳಿಸಬಹುದು ಎಂದು ದೇವಳದ ಆಡಳಿತಾಧಿಕಾರಿ ದೇವಪ್ಪ ಪಿ.ಆರ್.ಅವರು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಮಾಡಿದ್ದ ಶಿಫಾರಸ್ಸಿನ ವಿರುದ್ಧ ದೇವಳದ ವ್ಯವಸ್ಥಾಪನಾ ಸಮಿತಿಯ ೭ ಮಂದಿ ಸದಸ್ಯರು ರಾಜ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಗೌಡ,ವೆಂಕಟಕೃಷ್ಣ ಪಿ.,ವಾಸುದೇವ ನಾಯ್ಕ್ ಪಿ.,ಸತೀಶ ಗೌಡ, ಶ್ರೀಮತಿ ಪ್ರಮೀಳಾ, ಶ್ರೀಮತಿ ಲಲಿತಾ ಮತ್ತು ಸತೀಶ್ ನಾಯ್ಕ್ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯಕ್ತರು, ಮಂಗಳೂರು ಸಹಾಯಕ ಆಯುಕ್ತರು ಮತ್ತು ದೇವಳದ ಆಡಳಿತಾಧಿಕಾರಿಯವರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿತ್ತು.ವ್ಯವಸ್ಥಾಪನಾ ಸಮಿತಿ ರಚನೆಯಾಗಿ ಮೂರು ತಿಂಗಳಾಗುತ್ತಾ ಬಂದರೂ ಆಡಳಿತಾಧಿಕಾರಿಯವರು ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಸಭೆ ನಡೆಸಿಲ್ಲ.

ಈ ಕುರಿತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆಯ ಸಹಾಯಕ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಸದಸ್ಯರು, ಕೂಡಲೇ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆ ನಡೆಸಿ ಅಧ್ಯಕ್ಷರ ಆಯ್ಕೆ ನಡೆಸುವಂತೆ ಪ್ರತಿವಾದಿಗಳಿಗೆ ಆದೇಶಿಸುವಂತೆ ರಿಟ್ ಅರ್ಜಿಯಲ್ಲಿ ಕೋರಿದ್ದರು.ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ವ್ಯವಸ್ಥಾಪನಾ ಸಮಿತಿಯ ೯ ಮಂದಿ ಸದಸ್ಯರ ಪೈಕಿ ೭ ಮಂದಿ ಸದಸ್ಯರು ರಿಟ್ ಅರ್ಜಿ ಸಲ್ಲಿಸಿ, ಅಧ್ಯಕ್ಷರ ಆಯ್ಕೆಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.ಇದರಿಂದ ಸದಸ್ಯರೊಳಗೆ ಸಹಮತವಿದೆ ಎನ್ನುವುದು ಮನವರಿಕೆಯಾಗಿದೆ ಎನ್ನುವ ನಿರ್ಧಾರಕ್ಕೆ ಬಂದು, ವ್ಯವಸ್ಥಾಪನಾ ಸಮಿತಿಯನ್ನು ಬರ್ಕಾಸ್ತುಗೊಳಿಸುವಂತೆ ದೇವಳದ ಆಡಳಿತಾಧಿಕಾರಿಯವರು ಮಾಡಿರುವ ಶಿಫಾರಸ್ಸು ಹಾಗೂ ಆ ಬಳಿಕದ ಎಲ್ಲ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದೆ.ವ್ಯವಸ್ಥಾಪನಾ ಸಮಿತಿ ಸದಸ್ಯರ ಸಭೆ ನಡೆಸಿ ಅಧ್ಯಕ್ಷರ ಆಯ್ಕೆಗೆ ಮುಕ್ತ ಅವಕಾಶ ನೀಡಿರುವ ನ್ಯಾಯಪೀಠ ಮುಂದೇನಾದರೂ ತೊಂದರೆಗಳಾದರೆ ರಜಾಕಾಲದ ಪೀಠದ ಮುಂದೆ ಹೋಗುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.ಅರ್ಜಿದಾರರ ಪರ ಹಿರಿಯ ವಕೀಲರಾದ ಅರುಣ್‌ಶ್ಯಾಮ್ ಪುತ್ತೂರು ವಾದಿಸಿದ್ದರು.ವಕೀಲ ಸುಯೋಗ್ ಹೇರಳೆ ವಕಾಲತ್ತು ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here