ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ಬಳಿ ಸ್ಕೂಟರ್ ಹಾಗೂ ಲಾರಿ ನಡುವೆ ನಡೆದ ಅಪಘಾತದಿಂದಾಗಿ ಚರ್ಚ್‌ನಲ್ಲಿ ಬೆಳಿಗ್ಗೆ ನಡೆಯುತ್ತಿದ್ದ ಪೂಜಾವಿಧಿಗೆ ಬರುತ್ತಿದ್ದ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಎ.26 ರಂದು ನಡೆದಿದೆ.
ಕೆಮ್ಮಿಂಜೆ ನಿವಾಸಿ ಫ್ರಾನ್ಸಿಸ್ ಲೂವಿಸ್(73ವ.)ರವರು ಮೃತಪಟ್ಟವರು. ಮೃತ ಫ್ರಾನ್ಸಿಸ್ ಲೂವಿಸ್‌ರವರು ತಮ್ಮ ಸ್ಕೂಟರ್ ಚಲಾಯಿಸಿಕೊಂಡು ಎಂದಿನಂತೆ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೆಳಿಗ್ಗೆ ನಡೆಯುವ ಪೂಜಾವಿಧಿಗೆ ಬರುತ್ತಿದ್ದ ಸಂದರ್ಭದಲ್ಲಿ ನಿಂತಿರುವ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಅನ್ನು ಬಲಕ್ಕೆ ಸೈಡ್ ತೆಗೆದುಕೊಂಡಾಗ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಫ್ರಾನ್ಸಿಸ್ ಲೂವಿಸ್‌ರವರನ್ನು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮತ್ತು ಸ್ಥಳೀಯರು ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾ.ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
2021ರಲ್ಲಿ ಮೃತರಾದ ಧರ್ಮಗುರು ವಂ|ವಲೇರಿಯನ್ ಲೂವಿಸ್‌ರವರ ಸಹೋದರರಾಗಿರುವ ಮೃದು ಸ್ವಭಾವದ ಫ್ರಾನ್ಸಿಸ್ ಲೂವಿಸ್‌ರವರು ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದು, ದಿನಾಲೂ ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ಮಾಯಿದೆ ದೇವುಸ್ ಚರ್ಚ್‌ನಲ್ಲಿ ನಡೆಯುವ ಪೂಜಾವಿಧಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮೃತರಾದ ದಿನವೂ ಕೂಡ ಅವರು ಬೆಳಿಗ್ಗೆ ಚರ್ಚ್‌ನಲ್ಲಿ ನಡೆಯುವ ಪೂಜಾವಿಧಿಯಲ್ಲಿ ಭಾಗವಹಿಸಲು ಆಗಮಿಸುವ ಸಂದರ್ಭದಲ್ಲಿ ವಿಧಿ ಬೇರೆನೇ ಬಗೆದಿತ್ತು. ಮೃತ ಫ್ರಾನ್ಸಿಸ್ ಲೂವಿಸ್‌ರವರು ಪತ್ನಿ ಲಿಲ್ಲಿ ಲೂವಿಸ್, ಪುತ್ರರಾದ ದರ್ಬೆ ಪಿಸಿ ಪೈ ಪೆಟ್ರೋಲ್ ಪಂಪ್‌ನ ಉದ್ಯೋಗಿ ರೋಶನ್ ಲೂವಿಸ್, ಅನಿಲ್ ಲೂವಿಸ್ ಬೆಂಗಳೂರು, ಅರುಣ್ ಲೂವಿಸ್ ಚೆನ್ನೈ, ಪುತ್ರಿ ರೇಶ್ಮಾ ಲೂವಿಸ್ ಮೊಡಂಕಾಪು, ಸೊಸೆಯಂದಿರಾದ ಝೀಟಾ ಡಿ’ಸೋಜ, ಪ್ರೀತಿ ಲೂವಿಸ್, ಜಾನೆಟ್ ಡಿ’ಸೋಜ, ಅಳಿಯ ಲೋಯ್ಡ್ ಪಿರೇರಾ, ಸಹೋದರರಾದ ಚಾರ್ಲ್ಸ್ ಲೂವಿಸ್, ತೋಮಸ್ ಲೂವಿಸ್, ಲಿಯೋ ಲೂವಿಸ್‌ರವರನ್ನು ಅಗಲಿದ್ದಾರೆ.
ಎ.27 ರಂದು ಅಂತ್ಯಕ್ರಿಯೆ:
ಮೃತರಾದ ಫ್ರಾನ್ಸಿಸ್ ಲೂವಿಸ್‌ರವರ ಅಂತ್ಯಕ್ರಿಯೆಯು ಎ.27 ರಂದು ಮಾಯಿದೆ ದೇವುಸ್ ಚರ್ಚ್‌ನ ಏಳ್ಮುಡಿ ಸಿಮೆತರಿಯಲ್ಲಿ ಸಂಜೆ ಜರಗಲಿದೆ ಎಂದು ಮೃತ ಫ್ರಾನ್ಸಿಸ್ ಲೂವಿಸ್‌ರವರ ಪುತ್ರ ರೋಶನ್ ಲೂವಿಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.