ಎ.28 : ಸೀಮೆಯೊಡತಿ ಬಲ್ನಾಡು ಉಳ್ಳಾಲ್ತಿಗೆ ನೇಮ ನಡಾವಳಿಯ ಸಂಭ್ರಮ

0

ಪುತ್ತೂರು: ಬಂಗಾರದ ಮಲ್ಲಿಗೆಯನ್ನೇ ತೊಟ್ಟು ನೇಮ ಪಡೆದುಕೊಳ್ಳುವ ಸೀಮೆಯೊಡತಿ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28ರಂದು ನಡೆಯಲಿದೆ.


ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಮಕರತೋರಣರೋಹಣ, ಶ್ರೀ ದೈವಗಳ ಭಂಡಾರ ತೆಗೆದು ಮೂಲಸ್ಥಾನದಿಂದ ನೇಮ ನಡೆಯುವ ದೈವಸ್ಥಾನಕ್ಕೆ ಆಗಮನ, ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆಯಲಿದೆ. ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆದು ಕಟ್ಟೆ ಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಬೆಳಿಗ್ಗೆ 10ಗಂಟೆಯಿಂದ ಶ್ರೀ ಉಳ್ಳಾಲ್ತಿ ದೈವದ ನೇಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ಯಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ಉಳ್ಳಾಲ್ತಿ ದೈವಕ್ಕೆ ಮುಡಿದು ನೇಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2 ಗಂಟೆಯಿಂದ ಶ್ರೀಕಾಳರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಲಿದೆ.


ಸ್ವರ್ಣದ ಮಲ್ಲಿಗೆ ಮೊಗ್ಗಿನ ಹಾರ, ರಜತ ಗಗ್ಗರ ಸಮರ್ಪಣೆ:
ಈ ವರ್ಷದ ನೇಮೋತ್ಸವದಲ್ಲಿ ವಿಶೇಷವಾಗಿ ಮಲ್ಲಿಗೆ ಪ್ರೀಯೆ ಉಳ್ಳಾಲ್ತಿಗೆ ಊರ, ಪರವೂರ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣಗೊಂಡಿರುವ ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ ಹಾಗೂ ಬೆಳ್ಳಿಯ ಗಗ್ಗರದ ಸಮರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here