ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಖಂಡಿಸಿ ಅಮ್ಟೂರಿನಲ್ಲಿ ಪ್ರತಿಭಟನಾ ಸಭೆ

0

ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷದ್, ಬಜರಂಗದಳ, ಬಿಜೆಪಿ ಅಮ್ಟೂರು ಆಶ್ರಯದಲ್ಲಿ ಪ್ರತಿಭಟನಾ ಸಭೆ ಅಮ್ಟೂರಿನ ಶ್ರೀಕೃಷ್ಣ ಮಂದಿರದ ಸಭಾಭವನದಲ್ಲಿ ನಡೆಯಿತು.

ಪಹಲ್ಗಾಂಮ್ ನಲ್ಲಿ ನಡೆದ ಪಾಕಿಸ್ತಾನದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಲಾಯಿತು. ಮೃತಪಟ್ಟ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅಮ್ಟೂರು ಶ್ರೀಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ವಿಶ್ವ ಹಿಂದು ಪರಿಷದ್ ಬಂಟ್ವಾಳ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮಾಡಿದರು. ಕಾಶ್ಮೀರದಲ್ಲಿ ಧರ್ಮದ ಆಧಾರದಲ್ಲಿ ಪ್ರವಾಸಿಗರನ್ನು ಪ್ರತ್ಯೇಕಿಸಿ ಹತ್ಯೆ ಮಾಡಿದ ಪ್ರಕರಣವು ಆತಂಕಕಾರಿಯಾಗಿದ್ದು, ಇದರ ಕುರಿತು ಹಿಂದು ಸಮಾಜ ಜಾಗೃತರಾಗುವ ಅವಶ್ಯಕತೆ ಇದೆ ಎಂದರು.

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಹಿಂದುಗಳು ಇನ್ನು ಜಾಗೃತರಾಗದೇ ಇದ್ದರೆ ಉಳಿಗಾಲವಿಲ್ಲ. ನಮ್ಮ ಹತ್ತಿರ ಹತ್ತಿರವೇ ಸಾವು ಬರುತ್ತಿದೆ ಎಂಬುದನ್ನು ಗಮನಿಸಿಕೊಳ್ಳಬೇಕು. ನಾವು ಒಂದಾಗಿ ಎದುರಿಸುವ ಕಾಲ ಬಂದಿದೆ. ಇಂದು ಯುವಸಮೂಹ ಕ್ರಿಕೆಟ್ ಆಟವಾಡುತ್ತಾ ಕುಳಿತುಕೊಳ್ಳುವುದರ ಬದಲು ಹಿಂದು ಸಮಾಜಕ್ಕೆ ಬಂದಿರುವ ಕಂಟಕದ ಕುರಿತು ಚಿಂತಿಸಿ ಅದನ್ನು ಹೇಗೆ ನಿವಾರಿಸುವುದು ಎಂಬ ಕುರಿತು ಯೋಚಿಸಬೇಕಾಗಿದೆ. ಕಾಶ್ಮೀರದಲ್ಲಿ ನಡೆದ ಘಟನೆ ಅಪಾಯದ ಕರೆಗಂಟೆಯಾಗಿದೆ ಎಂದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್ ಆಮ್ಟೂರು, ಬಿಜೆಪಿಯ ಹಿರಿಯ ನಾಯಕರಾದ ಗೋಪಾಲ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರಾದ ಲಕ್ಷ್ಮಿ ಪ್ರಭು, ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಮ್ಟೂರು ಘಟಕದ ಪ್ರಮುಖರಾದ ಜಿತೇಶ್ ಶೆಟ್ಟಿ ಬಾಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಲವು ಪ್ರಮುಖರು, ಶ್ರೀ ಕೃಷ್ಣ ಮಂದಿರದ ಕಾರ್ಯಕರ್ತರು, ಭಾಜಪದ ಕಾರ್ಯಕರ್ತರು, ಪರಿವಾರದ ಕಾರ್ಯಕರ್ತರು ಸಹಿತ ಹಲವರು ಉಪಸ್ಥಿತರಿದ್ದರು. ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ನುಡಿ ನಮನ ಸಲ್ಲಿಸಿದರು . ಕುಶಾಲಪ್ಪ ಅಮ್ಟೂರು ವಂದಿಸಿದರು.

LEAVE A REPLY

Please enter your comment!
Please enter your name here