ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ-ಖಾದರ್ ಶಾ
ಪುತ್ತೂರು: ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಮಾಹಿತಿ ಕಾರ್ಯಾಗಾರ ಎ.27ರಂದು ಬೊಳ್ವಾರು ಮಹಾವೀರ ಹಾಲ್‌ನಲ್ಲಿ ನಡೆಯಿತು.
ಅತಿಥಿಯಾಗಿದ್ದ ಮಾಹಿತಿ ಮತ್ತು ಸಂಪರ್ಕ ಇಲಾಖೆಯ ದ.ಕ ಜಿಲ್ಲಾ ಮಾಹಿತಿ ಅಧಿಕಾರಿ ಬಿ.ಎ ಖಾದರ್ ಶಾ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದಲ್ಲೂ, ಸಮುದಾಯದಲ್ಲೂ ಪರಿವರ್ತನೆ ಸಾಧ್ಯ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಪುಣ್ಯದ ಕಾರ್ಯ, ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೌಂಟೆನ್ ವ್ಯೂ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ, ಉನ್ನತ ವಿದ್ಯಾಭ್ಯಾಸ ಮಾಡುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕೆಎಂಸಿ ವೈದ್ಯಕೀಯ ಪ್ರಾಧ್ಯಾಪಕ ಡಾ.ತಾಜುದ್ದೀನ್ ಮಾತನಾಡಿ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು, ಎಷ್ಟೇ ಕಷ್ಟ ಆದರೂ ಮಕ್ಕಳಿಗೆ ಶಿಕ್ಷಣ ನೀಡಲೇಬೇಕು ಎಂದು ಅವರು ಹೇಳಿದರು.
ಅಮೆಝೋನ್ ಸೀನಿಯರ್ ಸಾಫ್ಟ್‌ವೇರ್ ಡೆವಲಪರ್ ಎನ್‌ಐಟಿಕೆಯ ಇಮ್ರಾನ್ ಖಾನ್ ಮಾತನಾಡಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಅದಕ್ಕೆ ಪೂರಕವಾದ ಶಿಕ್ಷಣ ಪಡೆಯಬೇಕು, ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಕಾರ್ಯ ಮಾದರಿಯಾಗಿದೆ ಎಂದರು.
ಪ್ರೇರಣಾ ತರಬೇತಿ ಮತ್ತು ಮಾಹಿತಿ ನೀಡಿದ ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಅವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು. ವಿವಿಧ ಸಾಧಕರ ಸಾಧನೆಯನ್ನು ಉದಾಹರಣೆಯೊಂದಿಗೆ ವಿವರಿಸಿದ ಅವರು ಸೇರಿದ್ದವರನ್ನು ಹುರಿದುಂಬಿಸಿ ಮಾತನಾಡಿದರು. ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಸಂಸ್ಥೆಯು ಉನ್ನತ ವಿದ್ಯಾಭ್ಯಾಸ ಪಡೆಯಲುದ್ದೇಶಿಸುವ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ ಮೂಡಿಬರುತ್ತಿದ್ದು ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸ್ವಾಗತಿಸಿದ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಅವರು ಕಳೆದ ಒಂದು ವರ್ಷದಲ್ಲಿ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಸಂಸ್ಥೆಯು ಮಾಡಿರುವ ಕಾರ್ಯಚಟುವಟಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಎನ್ನವುದು ಶೈಕ್ಷಣಿಕವಾಗಿ ದೂರದೃಷ್ಟಿ ಚಿಂತನೆಯೊಂದಿಗೆ ಸ್ಥಾಪಿಸಿದ ಸಂಸ್ಥೆಯಾಗಿದ್ದು ಉನ್ನತ ವಿದ್ಯಾಭ್ಯಾಸದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಇಇಎಫ್‌ನ ಕೌನ್ಸಿಲರ್ ಡಾ.ವಾಜಿದಾ ಅವರು ವಿದ್ಯಾರ್ಥಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ನಮ್ಮ ಕನಸು ನನಸು ಮಾಡಲು ಸಾಧ್ಯವಾಗುತ್ತದೆ, ಈಗ ಕಲಿಕೆಗೆ ಸಾಕಷ್ಟು ಪ್ರೋತ್ಸಾಹಗಳು ಲಭಿಸುತ್ತಿದ್ದು ಅದೆಲ್ಲವನ್ನು ಸದುಪಯೋಗಡಿಸಿಕೊಂಡು ಮುನ್ನಡೆಯಬೇಕು, ಭವಿಷ್ಯದಲ್ಲಿ ನಿಮ್ಮ ಪೋಷಕರು ಮತ್ತು ಸಮಾಜ ಹೆಮ್ಮೆ ಪಡುವಂತಹ ಸಾಧನೆ ನೀವು ಮಾಡಿ ತೋರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿ ರಿಜಿಸ್ಟ್ರೇಷನ್ ಮಾಡಿಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೈಕಿ ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿ ಮೂವರು ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಎಂಬಂತೆ ತಲಾ ರೂ.೫೦೦೦/- ನಗದು ನೀಡಿ ಅಭಿನಂದಿಸಲಾಯಿತು. ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಕೆಲವು ಫಲಾನುಭವಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿ/ವಿದ್ಯಾರ್ಥಿನಿಯರು, ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಇಇಎಫ್ ಜೊತೆ ಸಂಪರ್ಕ ಸಾಧಿಸಿದರು. ವಿದ್ಯಾರ್ಥಿ ಮುಹಮ್ಮದ್ ಉವೈಸ್ ಖಿರಾಅತ್ ಪಠಿಸಿದರು. ಪತ್ರಕರ್ತ ಯೂಸುಫ್ ರೆಂಜಲಾಡಿ ವಂದಿಸಿದರು. ಡಾ.ವಾಜಿದ ಕಾರ್ಯಕ್ರಮ ನಿರೂಪಿಸಿದರು.