ಪ್ರಾಕೃತ ಘಟಿಕೋತ್ಸವ ಸಮಾರಂಭ: ಪುತ್ತೂರು, ಕಡಬದ ವಿದ್ಯಾರ್ಥಿಗಳು

0

ಪುತ್ತೂರು: ಅಖಿಲ ಭಾರತೀಯ ವ್ಯಾಪ್ತಿಯುಳ್ಳ ಹಾಗೂ ದೇಶದ ಏಕಮಾತ್ರವಾಗಿರುವ ಶ್ರವಣಬೆಳಗೊಳದ ಶ್ರೀ ಬಾಹುಬಲಿ ಪ್ರಾಕೃತ ವಿದ್ಯಾಪೀಠ (ವಿಶ್ವವಿದ್ಯಾಲಯ) ದ ಪ್ರಾಕೃತ ಘಟಿಕೋತ್ಸವವು ಎ.26ರಂದು ಶ್ರವಣಬೆಳಗೊಳದ ಶ್ರೀಧಲತೀರ್ಥಂ ವಿದ್ಯಾನಿವೇಶನದಲ್ಲಿ ನಡೆಯಿತು. ಇದರಲ್ಲಿ ಪುತ್ತೂರು, ಕಡಬ, ಬೆಳ್ತಂಗಡಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ತಾಲೂಕುಗಳ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಅಪರೂಪವಾಗಿರುವ ಈ ಪ್ರಾಕೃತ ಭಾಷೆಯಲ್ಲಿ ಪದವಿಗಳನ್ನು ಪಡೆದುಕೊಂಡರು. ಇಲ್ಲಿ ಪ್ರಾಕೃತ ಡಿಪ್ಲೊಮಾ, ಪ್ರಾಕೃತ ಮಾಧ್ಯಮ, ಪ್ರಾಕೃತ ರತ್ನ ಮತ್ತು ವಿಶಾರದ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ.


ಪದವಿದಾನದ ವಿಶೇಷ ಪೋಷಾಕು ಧರಿಸಿಕೊಂಡು ವಿವಿಧ ಪರೀಕ್ಷೆಗಳಲ್ಲಿ ಗೆದ್ದುಕೊಂಡ ಸ್ವರ್ಣ, ರಜತ ಮತ್ತು ಕಂಚಿನ ಪದಕಗಳೊಂದಿಗೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ನಗದು ಬಹುಮಾನವನ್ನು ಪಡೆದುಕೊಂಡರು. ಉನ್ನತ ಅಂಕಗಳನ್ನು ಪಡೆದುಕೊಂಡ ಮೊದಲ ಹತ್ತು ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಕರೆದು ಪದವಿ ಸರ್ಟಿಫಿಕೇಟ್‌ಗಳನ್ನು ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ, ಬೆಳಗಾಂವ್ ಮತ್ತು ಕೊಲ್ಹಾಪುರಗಳು ಪದಕ ಪಡೆಯುವುದರಲ್ಲಿ ಅಗ್ರಗಣ್ಯವೆನಿಸಿಕೊಂಡವು. ನಿಜವಾಗಿ ಇದೊಂದು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಸಾಧಕ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ಅಪೂರ್ವ ಸಮಾಗಮವೆನಿಸುವಂತಿತ್ತು. ಎಲ್ಲರಿಗೂ ಉಚಿತವಾಗಿ ವಾಸ್ತವ್ಯ, ಊಟೋಪಚಾರಗಳನ್ನು ಶ್ರವಣಬೆಳಗೊಳದ ಶ್ರೀಜೈನಮಠವು ಒದಗಿಸಿತ್ತು.


ಈ ಪದವಿದಾನ ಸಮಾರಂಭದ ಘಟಿಕೋತ್ಸವ ಭಾಷಣವನ್ನು ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ|| ಶುಭಚಂದ್ರ ನೀಡುತ್ತಾ ಪ್ರಾಚೀನ ಪ್ರಾಕೃತ ಭಾಷೆಯ ಮಹತ್ವವನ್ನು ವಿವರಿಸಿದರು. ಇದು ಭಾರತದ ಅತ್ಯಂತ ಪ್ರಾಚೀನ, ಮೂಲ ಭಾಷೆಯಾಗಿದ್ದು ಅದರ ಸಂಸ್ಕಾರಗೊಂಡ ರೂಪವೇ ಸಂಸ್ಕೃತ ಭಾಷೆ ಎಂಬುದನ್ನು ಸೋದಾಹರಣವಾಗಿ ತಿಳಿಸಿದರು. ಕೆಲವು ಪ್ರಾಕೃತ ಮಹಾ ಕಾವ್ಯಗಳನ್ನು ಪರಿಚಯಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ಡಾ|| ವೈ ಉಮಾನಾಥ ಶೆಣೈಯವರು ಸಮಾರಂಭಕ್ಕೆ ಶುಭಕೋರಿದರು.


ಕರ್ನಾಟಕ ಸರಕಾರದ ಸಹಾಯಧನದಿಂದ ನಡೆಯುತ್ತಿರುವ ಈ ಸಂಸ್ಥೆಯ ಪದವಿದಾನ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು ಕನ್ನಡ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಪ್ರಶಂಸೆಯನ್ನು ಗಳಿಸಿಕೊಂಡರು. ಇದೊಂದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು.

LEAVE A REPLY

Please enter your comment!
Please enter your name here