ಪುತ್ತೂರು : ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದೊಂದಿಗೆ ಪುತ್ತೂರು ತಾಲೂಕಿನಾದ್ಯಂತ ಆರಂಭಿಸಲಾಗುತ್ತಿರುವ ಹಿಂದೂ ಧರ್ಮ ಶಿಕ್ಷಣವನ್ನು ನಿರ್ವಹಿಸುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಧರ್ಮ ಶಿಕ್ಷಣ ಸಮಿತಿಯ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮೇ 5ರಂದು ಶೃಂಗೇರಿಯಲ್ಲಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಧರ್ಮ ಶಿಕ್ಷಣ ತರಗತಿಗಳು ಉದ್ಘಾಟನೆಗೊಳ್ಳಲಿದ್ದು, ಆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಸಾವಿರಾರು ಮಂದಿ ಭಾಗಿಯಾಗುವ ಯೋಜನೆ ಹಾಕಿಕೊಳ್ಳಲಾಗಿದೆ. ಆ ದಿನ ಶೃಂಗೇರಿಗೆ ತೆರಳುವವರಿಗೆ ಉಚಿತ ಬಸ್ ಹಾಗೂ ಊಟೋಪಚರದ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ಎಲ್ಲಾ ಬಸ್ ಗಳೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಡಲಿದ್ದು, ಆ ದಿನದ ಸಕಲ ಯೋಜನೆಗಳೂ ಸಾಂಗವಾಗಿ ನೆರವೆರುವಂತೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಬೇಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಪೆಹಲ್ಗಾಮ್ ನಲ್ಲಿ ನಡೆದ ಧರ್ಮದ್ವೇಷ ಆಧಾರಿತ ಹತ್ಯೆಗೆ ಪ್ರತೀಕಾರವಾಗಿ ಭಾರತದ ಸೇನೆಗೆ ಕೇಂದ್ರ ಸರ್ಕಾರ ಸಂಪೂರ್ಣ ಪರಮಾಧಿಕಾರ ನೀಡಿರುವುದರಿಂದ ಯುದ್ಧ ನಡೆಯುವ ಸಂಭವವಿದ್ದು, ಭಾರತೀಯ ಸೈನಿಕರಿಗೆ ಸರ್ವಶಕ್ತಿಯನ್ನೂ ಕರುಣಿಸಿ, ದೇಶದ ಸೈನ್ಯಕ್ಕೆ ಯಾವುದೇ ಪ್ರಾಣಹಾನಿ, ನೋವುಗಳಾಗದಂತೆ ಆಶೀರ್ವದಿಸುವಂತೆಯೂ ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ತಾಲೂಕು ಧರ್ಮ ಶಿಕ್ಷಣ ಸಮಿತಿಯ ನೇತಾರರಾದ ಮಾಧವ ಸ್ವಾಮಿ, ಸುಬ್ರಮಣ್ಯ ನಟ್ಟೋಜ, ದಿನೇಶ್ ಜೈನ್, ಬಾಲಕೃಷ್ಣ ಬೋರ್ಕರ್ ಮತ್ತಿತರರು ಹಾಜರಿದ್ದರು.