ಪುತ್ತೂರು: ಕಾೖಮಣ ಗ್ರಾಮದ ಅಂಕಜಾಲು ಎಂಬಲ್ಲಿ 6 ವರ್ಷಗಳ ಹಿಂದೆ ತಾಯಿಗೆ ಹಲ್ಲೆ ನಡೆಸಿ ಬಳಿಕ ಚಿಕಿತ್ಸೆ ಕೊಡಿಸದ ಪರಿಣಾಮ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, ಮೃತರ ಪುತ್ರ ಗೋಪಾಲ ಯಾನೆ ಗೋಪರವರಿಗೆ ಜೈಲು ಶಿಕ್ಷೆ ವಿಧಿಸಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2019ರ ಫೆ.19ರಂದು ಕಾೖಮಣ ಗ್ರಾಮದ ಅಂಕಜಾಲು ಎಂಬಲ್ಲಿ ಆರೋಪಿ ಗೋಪಾಲ ಯಾನೆ ಗೋಪ ಎಂಬವರು ಕ್ಷುಲಕ ಕಾರಣಕ್ಕೆ ತನ್ನ ತಾಯಿ ಚಿಂಕು ಎಂಬವರಿಗೆ ಹಲ್ಲೆ ನಡೆಸಿ ಬಳಿಕ ಚಿಕಿತ್ಸೆ ಕೊಡಿಸದ ಪರಿಣಾಮ ಆಕೆಯು ಮೃತ ಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 304ರಂತೆ ಪ್ರಕರಣ ದಾಖಲಾಗಿತ್ತು. ಪ್ರಾರಂಭಿಕ ತನಿಖೆ ನಡೆಸಿದ ಬೆಳ್ಳಾರೆ ಠಾಣಾ ಪೊಲೀಸ್ ಠಾಣೆಯ ಆಗಿನ ಉಪನಿರೀಕ್ಷಕ ಈರಯ್ಯ ಡಿ.ಎನ್ ಮತ್ತು ಆಗಿನ ಸುಳ್ಯ ವೃತ್ತದ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಆರ್. ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರ್ರಿ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಜಯಂತಿ ಭಟ್‌ರವರು ವಾದ ಮಂಡಿಸಿದರು. ನ್ಯಾಯಾಲಯದ ವಿಚಾರಣೆ ವೇಳೆ ಆರೋಪಿತನು ಕೃತ್ಯ ಎಸಗಿರುವುದು ಸಾಬೀತಾಗಿ, ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶೆ ಸರಿತಾ ಡಿ. ರವರು ಆರೋಪಿ ಗೋಪಾಲ ಅವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ರೂ. 5 ಸಾವಿರ ದಂಡ, ದಂಡ ತಪ್ಪಿದಲ್ಲಿ ಮೂರು ತಿಂಗಳ ಸಾಧಾರಣ ಶಿಕ್ಷೆ ವಿಧಿಸಿ ಎ.29ರಂದು ತೀರ್ಪು ನೀಡಿದ್ದಾರೆ.