*ಒತ್ತಡದಲ್ಲಿರುವ ವಕೀಲರಿಗೆ ಮನೋರಂಜನೆ ಅಗತ್ಯಬೇಕು – ಸರಿತಾ ಡಿ
*ಪುತ್ತೂರು ಬಾರ್ ಅಸೋಸಿಯೇಶನ್ನಲ್ಲಿ ಕಲಿಯಲು ಬಹಳಷ್ಡಿದೆ – ಪ್ರಿಯ ರವಿ ಜೋಗಲೇಕರ್
*ಪುತ್ತೂರು ಉತ್ತಮ ಬಾರ್ ಅಸೋಸಿಯೇಶನ್ – ಅರ್ಚನಾ ಕೆ ಉನ್ನಿತಾನ್
*ಆತ್ಮವಿಶ್ವಾಸದಿಂದ ಮಾಡಿದ ಕಾರ್ಯಕ್ಕೆ ಯಶಸ್ಸು – ಜಿ.ಜಗನ್ನಾಥ ರೈ
ಪುತ್ತೂರು: ಸದಾ ಒತ್ತಡದಲ್ಲಿರುವ ವಕೀಲರಿಗೆ ಒಂದು ದಿನವಾದರೂ ಮನೋರಂಜನೆ ಇರಬೇಕು. ಇದನ್ನು ಪುತ್ತೂರು ಬಾರ್ ಅಸೋಸಿಯೇಶನ್ ಮಾಡುತ್ತಿರುವುದು ಉತ್ತಮ ವಿಚಾರ ಎಂದು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ ಅವರು ಹೇಳಿದರು.
ನ್ಯಾಯಾಲಯ ಸಂಕೀರ್ಣದಲ್ಲಿನ ಪರಾಶರ ಹಾಲ್ ನಲ್ಲಿ ಮೇ.3ರಂದು ನಡೆದ ಪುತ್ತೂರು ವಕೀಲರ ಸಂಘದ ವತಿಯಿಂದ ಸಂಘದ ಸದಸ್ಯರ ಸಂತಸದ ಸಂಭ್ರಮ -2025ʼ ಕಾರ್ಯಕ್ರಮ ಮತ್ತು ವರ್ಗಾವಣೆಗೊಂಡ ಇಬ್ಬರು ನ್ಯಾಯಾಧೀಶರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಕೀಲರಿಗೆ ಮನೋರಂಜನೆ ಬಹಳ ಕಡಿಮೆ. ಅದಕ್ಕೆ ಪೂರಕವಾಗಿ ಪುತ್ತೂರು ವಕೀಲರ ಸಂಘ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದೇ ರೀತಿ 3 ವರ್ಷದ ಕಾಲ ನ್ಯಾಯಾಧೀಶರಾಗಿ ಇದೀಗ ವರ್ಗಾವಣೆ ಗೊಳ್ಳುತ್ತಿರುವ ನ್ಯಾಯಾಧೀಶರೊಂದಿಗೆ ಎಲ್ಲಾ ವಕೀಲರು ಉತ್ತಮ ರೀತಿಯಲ್ಲಿ ಸಹಕಾರ ನೀಡಿರುವುದ ಕೂಡಾ ಉತ್ತಮ ವಿಚಾರ. ಈ ನಿಟ್ಟಿನಲ್ಲಿ ಪುತ್ತೂರು ವಕೀಲರ ಸಂಘದ ಎಲ್ಲಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.
ಪುತ್ತೂರು ಬಾರ್ ಅಸೋಸಿಯೇಶನ್ನಲ್ಲಿ ಕಲಿಯಲು ಬಹಳಷ್ಟಿದೆ:
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಿಯ ರವಿ ಜೋಗಲೇಕರ್ ಅವರು ಮಾತನಾಡಿ, ನಾನು ವಕೀಲನಾಗಿಯೇ ಈ ಹಂತ ತಲುಪಿದ್ದೇನೆ. ಹಾಗಾಗಿ ವಕೀಲರಲ್ಲಿ ಬೇಧಭಾವವನ್ನು ನಾನು ಕಂಡಿಲ್ಲ. ಇಲ್ಲಿನ ಬಾರ್ ಅಸೋಸಿಯೇಷನ್ ವಿಶೇಷವಾಗಿದೆ. ಇಲ್ಲಿ ಕಲಿಯಲು ಬಹಳ ಇದೆ.ಯಾಕೆಂದರೆ ಇಲ್ಲಿರುವ ವಕೀಲರು ಅತಿರಥಮಹಾರಥರಾಗಿದ್ದಾರೆ. ಅವರನ್ನು ನಾನು ನನ್ನ ಸೇವಾ ನಿವೃತ್ತಿಯ ತನಕ ನೆನಪಿಸುತ್ತೇನೆ. ಇವತ್ತು ನನ್ನ ತವರು ಮನೆ ಬಿಟ್ಟು ಹೋಗುತ್ತಿದ್ದಂತೆ ಅನಿಸುತ್ತಿದೆ. ಪುತ್ತೂರನ್ನು ಯಾವತ್ತು ಮರೆಯುವುದಿಲ್ಲ. ಮಹಾಲಿಂಗೇಶ್ವರ ಅವಕಾಶ ಕೊಟ್ಟರೆ ಮಂಗಳೂರು ಡಿಸ್ಟ್ರಿಕ್ಗೆ ಬರುತ್ತೇನೆ ಎಂದರು.
ಪುತ್ತೂರು ಉತ್ತಮ ಬಾರ್ ಅಸೋಸಿಯೇಶನ್:
ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ಸಿ ನ್ಯಾಯಾಧೀಶೆ ಅರ್ಚನಾ ಕೆ ಉನ್ನಿತಾನ್ ಅವರು ಮಾತನಾಡಿ ಪುತ್ತೂರಿನಲ್ಲಿ ನಾನು ಮೂರು ವರ್ಷ ಪೂರೈಸಿದ್ದು ದೊಡ್ಡ ಸಾಧನೆಯಾಗಿದೆ. ಮೂಲತಃ ಕೇರಳವಾದರೂ ಇಷ್ಟಪಟ್ಟು ಕನ್ನಡ ಕಲಿತೆ. ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವರ ಕುರಿತು ಈ ಹಿಂದೆಯೇ ಸೀನಿಯರ್ ನ್ಯಾಯಾಧೀಶರ ಛೇಂಬರ್ ಒಳಗಿದ್ದ ಫೋಟೋ ತಿಳಿದಿದ್ದೆ. ಆಗಲೇ ನಾನು ಒಂದು ಭಾರಿ ಅವಕಾಶ ಕೊಟ್ಟರೆ ಪುತ್ತೂರು ಮಹಾಲಿಂಗೇಶ್ವರನನ್ನು ನೋಡಿ ಬಿಡೋಣ ಎಂದಂತೆ ಅವಕಾಶ ಸಿಕ್ಕಿಯೇ ಬಿಟ್ಟಿತ್ತು. ಹಾಗೆ ಮೂರು ವರ್ಷ ವಕೀಲರಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಪುತ್ತೂರು ಬಾರ್ ಅಸೋಸಿಯೇಶನ್ ಉತ್ತಮ ಬಾರ್ ಅಸೋಸಿಯೇಶನ್ ಆಗಿದೆ ಎಂದರು.
ಆತ್ಮವಿಶ್ವಾಸದಿಂದ ಮಾಡಿದ ಕಾರ್ಯಕ್ಕೆ ಯಶಸ್ಸು:
ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ ಅವರು ಮಾತನಾಡಿ ನಿಷೇದಾಜ್ಞೆಯ ಕೂಗು ಬಂದಾಗ ಹಿರಿಯ ವಕೀಲರ ಸಲಹೆಯಂತೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಿದ್ದೇವೆ. ಈ ಕಾರ್ಯಕ್ರಮದ ಅಂಗವಾಗಿ ಆರಂಭದಲ್ಲಿ ಕ್ರೀಡಾಕೂಟ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿತ್ತು. ಇವತ್ತು ಸಂಘದ ಸಂತಸದ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದಕ್ಕೆಲ್ಲ ನನ್ನ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯ ಮಿತ್ರರು ಸಹಕಾರ ನೀಡಿದ್ದಾರೆ. ಒಟ್ಟಿನಲ್ಲಿ ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಯಶಸ್ವಿಯಾಗುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ನ್ಯಾಯಾಧೀಶರುಗಳಿಬ್ಬರಿಗೆ ಬೀಳ್ಕೊಡುಗೆ:
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯಾಗಿ ಇದೀಗ ಅಂಕೋಲದ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಪ್ರಿಯ ರವಿ ಜೋಗಲೇಕರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ಸಿ ನ್ಯಾಯಾಧೀಶೆಯಾಗಿದ್ದು ಇದೀಗ ಮೈಸೂರು ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಅರ್ಚನಾ ಕೆ ಉನ್ನಿತಾನ್ ಅವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ನ್ಯಾಯಾಧೀಶ ದೇವರಾಜ್ ವೈ ಹೆಚ್ ಅವರು ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಹಾಗು ಯೋಗೇಂದ್ರ ಶೆಟ್ಟಿಯವರು ಮುಂದೆ ಪುತ್ತೂರು ನ್ಯಾಯಾಲಯದಲ್ಲೇ ಹೆಚ್ಚುವರಿ ನ್ಯಾಯಧೀಶರಾಗಿ ವರ್ಗಾವಣೆಗೊಳ್ಳಲಿದ್ದು ಅವರನ್ನು ಸ್ವಾಗತಿಸಲಾಯಿತು.
ಸನ್ಮಾನ:
ಕೆರೆಗೆ ಬಿದ್ದ ಮಗುವನ್ಬು ರಕ್ಷಣೆ, ಹಾವುಗಳ ರಕ್ಷಣೆ, ಅಡುಗೆ ಅನಿಲ ಸೋರಿಕೆ ತಡೆಯುವ ಮೂಲಕ ಸಾಹಸಿ ಕೆಲಸ ಮಾಡಿದ ಹಿರಿಯ ವಕೀಲ ಕೆ ಮೋಹನ್ ಭಟ್ ಮತ್ತು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಯುವ ನ್ಯಾಯವಾದಿ ಅಶೋಕ್ ಅವರನ್ನು ಸನ್ಮಾನಿಸಲಾಯಿತು. ವಕೀಲರ ಕುಟುಂಬದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸ್ಪರ್ಶ ಟಿ ಎಸ್, ಅನ್ವಿತ್, ಪೂರ್ವಿ ಅವರ ಪರವಾಗಿ ಅವರ ಪೋಷಕರನ್ನು ಗೌರವಿಸಲಾಯಿತು. ಇತ್ತೀಚೆಗೆ ವಕೀಲರ ಸಂಘದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ತಂಡದ ಮಾಲಕರನ್ನು ಅಭಿನಂದಿಸಲಾಯಿತು. ವಕೀಲ ರಾಕೇಶ್ ಜೈನ್ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಜೆಎಮ್ಎಫ್ಸಿಯೂ ಆಗಿರುವ ದೇವರಾಜ್ ವೈ ಹೆಚ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್ಎಫ್ಸಿ ಶಿವಣ್ಣ ಹೆಚ್ ಆರ್ ಹಾಗು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್ಎಫ್ಸಿ ಯೋಗೇಂದ್ರ ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿ ಮಮತಾ ಸುವರ್ಣ, ಖಜಾಂಜಿ ಮಹೇಶ್ ಕೆ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರುಣಾ ದಿನಕರ್, ಸೀಮಾ ನಾಗರಾಜ್, ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಹರಿಣಾಕ್ಷಿ ಜೆ ಶೆಟ್ಟಿ, ಪ್ರವೀಣ್ ಕುಮಾರ್, ಸೂರ್ಯನಾರಾಯಣ ಎನ್ ಕೆ ಅತಿಥಿಗಳನ್ನು ಗೌರವಿಸಿದರು. ರಾಜೇಶ್ವರಿ ಪ್ರಾರ್ಥಿಸಿದರು. ವಕೀಲರ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಎನ್ ಸ್ವಾಗತಿಸಿದರು. ಉಪಾಧ್ಯಕ್ಷ ಮೋನಪ್ಪ ಎಮ್ ವಂದಿಸಿದರು ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
ವಕೀಲರಿಂದ ಯಕ್ಷಗಾನ ತಾಳಮದ್ದಳೆ:
ಸಭಾ ಕಾರ್ಯಕ್ರಮದ ಆರಂಂಭದಲ್ಲಿ ವಕೀಲರ ಸಂಘದ ಸದಸ್ಯರಿಂದ ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ ನಡೆಯಿತು. ಗಣೇಶ್ ಕೊಲೆಕ್ಜಾಡಿ ವಿರಚಿತ ಸಮರ ಸೌಂಧಿಕ ಎಂಬ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳನದಲ್ಲಿ ಭಾಗವತರಾಗಿ ಮಲ್ಲಿಕಾ ಅಜೀತ್ ಶೆಟ್ಟಿ ಸಿದ್ದಕಟ್ಟೆ, ಮದ್ದಳೆಯಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚೆಂಡೆಯಲ್ಲಿ ಪರೀಕ್ಷಿತ್, ಮುಮ್ಮೇಳದಲ್ಲಿ ಪದ್ಮಾ ಆಚಾರ್(ಭೀಮ), ಜಗನ್ನಾಥ ರೈ (ದ್ರೌಪದಿ), ಹರೀಣಾಕ್ಷಿ ಜೆ ಶೆಟ್ಟಿ ( ಕುಭೇರ), ಹೀರಾ ಉದಯ್ ( ಹನೂಮಂತ), ಜಯಾನಂದ ಕೆ (ವನಪಾಲಕ) ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.