ಪುತ್ತೂರು: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಹೊಳೆ ನೀರು ತೋಟಕ್ಕೆ ನುಗ್ಗಿದ ಪರಿಣಾಮ ಅಪಾರ ಕೃಷಿ ಹಾನಿಯುಂಟಾದ ಘಟನೆ ಕೆಯ್ಯೂರು ಗ್ರಾಮದ ಮಾಡಾವು ಬೊಳಿಕ್ಕಳದಿಂದ ವರದಿಯಾಗಿದೆ. ಬೊಳಿಕ್ಕಲ ನಿವಾಸಿ ರಾಧಾಕೃಷ್ಣ ಗೌಡ ಎಂಬವರ ತೋಟಕ್ಕೆ ನುಗ್ಗಿದ ಹೊಳೆ ನೀರಿನಿಂದಾಗಿ ಅಡಿಕೆ ಮರಗಳು ಸಹಿತ ಕೃಷಿ ಕೊಚ್ಚಿ ಹೋಗಿದೆ. ಬೊಳಿಕ್ಕಲದಲ್ಲಿ ಮಾಡಾವು ಹೊಳೆಗೆ ಕಟ್ಟಿದ ಕಿಂಡಿ ಅಣೆಕಟ್ಟಿಗೆ ಬೇಸಿಗೆಕಾಲದಲ್ಲಿ ಹಲಗೆ ಹಾಕಿ ನೀರು ನಿಲ್ಲಿಸಲಾಗಿತ್ತು. ಆದರೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಿದ ಪರಿಣಾಮ ನೀರು ಹರಿದು ಹೋಗಲು ಸಾಧ್ಯವಾಗದೆ ತೋಟಕ್ಕೆ ನುಗ್ಗಿದೆ. ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಿರುವ ಸಮಯದಲ್ಲೇ ಹಲಗೆ ತೆಗೆದು ನೀರು ಹರಿದು ಹೋಗಲು ಅನುವು ಮಾಡಿಕೊಡುತ್ತಿದ್ದರೆ ಯಾವುದೇ ಹಾನಿ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ತೋಟಕ್ಕೆ ನುಗ್ಗಿದ ಹೊಳೆ ನೀರು ತೋಟವನ್ನೇ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಇದರಿಂದ ಹಲವು ಅಡಿಕೆ ಮರಗಳು, ಬಾಳೆ ಗಿಡಗಳು ಕೊಚ್ಚಿಕೊಂಡು ಹೋಗಿವೆ. ತಕ್ಷಣವೇ ಕಿಂಡಿ ಅಣೆಕಟ್ಟಿನ ಹಲಗೆ ತೆಗೆದು ನೀರು ಹರಿದು ಹೋಗುವಂತೆ ಮಾಡದಿದ್ದರೆ ಮುಂದೆಯೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ರಾಧಾಕೃಷ್ಣ ಗೌಡರವರು ತಿಳಿಸಿದ್ದಾರೆ.