ಪುತ್ತೂರು: ದಕ್ಷಿಣ ಭಾರತ ಕುಸ್ತಿ ಸಂಘದ 2025–29ರ ಸಾಲಿನ ಉಪಾಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಸ್ತಿ ಸಂಘದಲ್ಲಿ ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಪ್ರಮುಖ ಪ್ರಾತಿನಿಧ್ಯ ದೊರೆತಂತಾಗಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಉರಮಾಲು ನಿವಾಸಿಯಾಗಿದ್ದು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರಾಗಿರುವ ಗುಣರಂಜನ್ ಶೆಟ್ಟಿ ಅವರು ಭಾರತ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಖ್ಯಾತ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರನಾಗಿರುವ ಉದ್ಯಮಿ ಗುಣರಂಜನ್ ಶೆಟ್ಟಿ ಅವರು ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿ ನಾಲ್ಕು ವರ್ಷದ ನಂತರ ಚುನಾವಣೆ ನಡೆದಿದ್ದು ಕರ್ನಾಟಕ ಎಲ್ಲಾ ವಿಭಾಗಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಕುಸ್ತಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಭಾರತಕ್ಕೆ ಉತ್ತಮ ಪ್ರಾತಿನಿಧ್ಯ ದೊರಕಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
