ಪುತ್ತೂರು: ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿ ದೊಂಬಿ ನಡೆಸಿ ನಿಷೇಧಾಜ್ಞೆ ಉಲ್ಲಂಘನೆ – 30 ಮಂದಿ ವಿರುದ್ಧ ಪ್ರಕರಣ ದಾಖಲು

0


ಪುತ್ತೂರು: ನಿಷೇದಾಜ್ಞೆ ಜಾರಿಯಲ್ಲಿದ್ದರೂ ಮೇ.2ರಂದು ಪುತ್ತೂರು ಗಾಂಧಿಕಟ್ಟೆಯ ಬಳಿ ಸುಮಾರು 20 ರಿಂದ 30 ಜನ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ಮತ್ತು ಸಮಾನ ಉದ್ದೇಶದಿಂದ ದೊಂಬಿ ಎಬ್ಬಿಸಿ ನಿಷೇದಾಜ್ಞೆ ಉಲ್ಲಂಘನೆ ಮಾಡಿರುವ ನಿಟ್ಟಿನಲ್ಲಿ ಸುಮಾರು 30 ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೇ.1ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಎಂಬುವರ ಹತ್ಯೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಮೇ 2 ರಿಂದ 5ರ ತನಕ ಜಿಲ್ಲಾಧಿಕಾರಿಯವರು ನಿಷೇದಾಜ್ಞೆ ಜಾರಿ ಮಾಡಿದ್ದರು. ಆದರೆ ಮೇ 2ರಂದು ಪುತ್ತೂರು ಗಾಂಧಿಕಟ್ಟೆ ಜಂಕ್ಷನ್ ಬಳಿಯಲ್ಲಿ ಸುಮಾರು 20 ರಿಂದ 30 ಜನ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವಾಗ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ನಿಷೇದಾಜ್ಞೆ ಜಾರಿಯಲ್ಲಿರುವ ಕುರಿತು ಸೂಚನೆ ನೀಡಿದರೂ ಸೂಚನೆಗಳನ್ನು ಉಲ್ಲಂಘಿಸಿ, ಅಕ್ರಮ ಕೂಟ ಸೇರಿದ 20 ರಿಂದ 30 ಜನ ಸಮಾನ ಉದ್ದೇಶದಿಂದ ದೊಂಬಿ ನಡೆಸುವ ಮೂಲಕ ನಿಷೇದಾಜ್ಞೆ ಉಲ್ಲಂಘಿಸಿದ್ದಾರೆ. ಈ ಕುರಿತು ದೊಂಬಿ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here