ಪ್ರಧಾನಿ ಮೋದೀಜಿ ಸಂಪುಟಕ್ಕೆ, ಸೇನಾಧಿಕಾರಿಗಳಿಗೆ, ದೇಶದ ಎಲ್ಲಾ ಪಕ್ಷಗಳಿಗೆ, ಜಾತಿ ಧರ್ಮ ಭಾಷೆ ಭೇದ ಭಾವ ಬಿಟ್ಟು ಬೆಂಬಲಿಸಿದ ಜನತೆಗೆ ಅಭಿನಂದನೆಗಳು
ಪಾಕಿಸ್ತಾನದ ಪ್ರತಿದಾಳಿಯ ಸಂಭವವಿರುವ ಸಂದರ್ಭದಲ್ಲಿ ದೇಶದ ಜನತೆ ತಮ್ಮ ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟಿನಲ್ಲಿರಬೇಕಲ್ಲವೇ?
ಮೋದೀಜಿಯವರು ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಮುಸ್ಲಿಂರ ಬೆಂಬಲದಿಂದ ಹಿಂದೂಗಳಿಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. ಬೆಳ್ತಂಗಡಿಯ ತೆಕ್ಕಾರಿನಲ್ಲಿ ದೇವಸ್ಥಾನಕ್ಕೆ ಇಲ್ಲಿಯ ಮುಸ್ಲಿಂರ ಬೆಂಬಲ ಬೇಡ ಯಾಕೆ?
ಗಡಿಯಲ್ಲಿ ಪಾಕಿಸ್ತಾನದೊಂದಿಗೆ ಭಾರತಕ್ಕೆ ಯುದ್ಧ, ಗ್ರಾಮ ಗ್ರಾಮಗಳಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು ವಿವಿಧ ಸಮುದಾಯದಲ್ಲಿ ದ್ವೇಷ, ನಮ್ಮೊಳಗೆ ಹೋರಾಟ ಹತ್ಯೆಗಳು ನಡೆದರೆ ಅದು ದೇಶಕ್ಕೆ ಮಾರಕವಲ್ಲವೇ
ಪಾಕಿಸ್ತಾನದ ಉಗ್ರಗಾಮಿಗಳಿಂದ ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ 26 ಜನ ಹಿಂದು ಯಾತ್ರಿಕರ ನರಮೇಧ ಭಾರತದ ಮಾತ್ರವಲ್ಲ ಜಗತ್ತಿನ ಜನರನ್ನೇ ಬೆಚ್ಚಿ ಬೀಳಿಸಿದೆ. ದೇಶದ ಜನರು ಜಾತಿ, ಪಕ್ಷ, ಧರ್ಮ, ಭಾಷೆ, ಭೇದ ಬಿಟ್ಟು ಒಂದಾಗಿ ಶೋಕಾಚರಣೆ ಮಾಡಿದ್ದಾರೆ. ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಕಾಶ್ಮೀರದಲ್ಲಿ 26 ಪ್ರವಾಸಿ ಪುರುಷರನ್ನು ಹತ್ಯೆ ಮಾಡಿ ಮಹಿಳೆಯರ ಸಿಂಧೂರ ಅಳಿಸಿರುವುದಕ್ಕೆ ಪ್ರತೀಕಾರವಾಗಿ ನಿನ್ನೆ ಭಾರತ ಸೇನೆ ‘ಸಿಂಧೂರ’ ಹೆಸರಿನಲ್ಲಿ ದಾಳಿ ನಡೆಸಿ ಪಾಕಿಸ್ತಾನದ 9 ಉಗ್ರ ಗಾಮಿಗಳ ತಾಣವನ್ನು ಉಡೀಸ್ ಮಾಡಿದೆ. ಆ ದಾಳಿಗೆ ಜನತೆ ಸಂಭ್ರಮಿಸಿದ್ದಾರೆ. ಜಗತ್ತಿನಾದ್ಯಂತ ಬೆಂಬಲ ದೊರಕಿದೆ. ಪ್ರಧಾನಿ ಮೋದಿ, ಸಂಪುಟ, ಸೈನ್ಯಕ್ಕೆ ಎಲ್ಲಾ ಪಕ್ಷಗಳು ಬೆಂಬಲ ನೀಡಿದ್ದಾರೆ. ಜನತೆ ಎಲ್ಲರನ್ನೂ ಅಭಿನಂದಿಸಿದ್ದಾರೆ.
ಪಾಕಿಸ್ತಾನದ ಉಗ್ರಗಾಮಿ ತಾಣಗಳ ಮೇಲೆ ದಾಳಿ ಮಾಡಿದ ಘಟನೆ ವಿಜಯೋತ್ಸವಕ್ಕೆ ಕಾರಣವಾದರೂ ಇದು ಅಂತ್ಯವಲ್ಲ ಪ್ರಾರಂಭ ಮಾತ್ರವೆಂದು ಎಲ್ಲರೂ ತಿಳಿಯಬೇಕಾಗಿದೆ. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿದ್ದು ಈಗಾಗಲೇ ಬೆದರಿಕೆ ಒಡ್ಡಿರುವುದರಿಂದ ನಾವು ಕಟ್ಟೆಚ್ಚರಿಕೆಯಿಂದ ಇರಬೇಕಾಗಿದೆ. ಪಾಕಿಸ್ತಾನದ ಕಡೆಯಿಂದ ಆಗಬಹುದಾದ ಕಷ್ಟನಷ್ಟಗಳನ್ನು ಸಹಿಸಿ ಎದುರಿಸುವ ನಿರ್ಣಯ ಕೈಗೊಳ್ಳಬೇಕಾಗಿದೆ. ಪಾಕಿಸ್ತಾನದ ಉಗ್ರರ ನಾಶ ಸಂಪೂರ್ಣವಾಗುವವರೆಗೂ ಅವರ ಚಟುವಟಿಕೆ ನಿಲ್ಲುವವರೆಗೂ ಭಾರತದ ಜನತೆ ವಿಶ್ರಮಿಸುವಂತಿಲ್ಲ ಎಂಬ ಸತ್ಯವನ್ನು ನಾವೆಲ್ಲ ಅರಿತುಕೊಳ್ಳಬೇಕಾಗಿದೆ. ಈ ಗಂಭೀರ ಪರಿಸ್ಥಿತಿ ನಮ್ಮಲ್ಲಿರುವಾಗ ಗಡಿಯಲ್ಲಿ ಪಾಕಿಸ್ತಾನದೊಂದಿಗೆ ಭಾರತಕ್ಕೆ ಯುದ್ಧ, ಗ್ರಾಮ ಗ್ರಾಮಗಳಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು ವಿವಿಧ ಸಮುದಾಯದ ಒಳಗೆ ನಮ್ಮೊಳಗೆ ಹೋರಾಟ ಹತ್ಯೆಗಳು ನಡೆಯಬಾರದಲ್ಲವೇ?
ಪ್ರಧಾನಿ ಮೋದೀಜಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಈ ಮೇಲಿನ ವಿಷಯದ ಹಿನ್ನೆಲೆಯಲ್ಲಿ ಬಹಿರಂಗ ಮನವಿ ಸಲ್ಲಿಸುತ್ತಿದ್ದೇನೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನ ಹಿಂದುಗಳ ಹತ್ಯೆಯಾದಾಗ ಅಲ್ಲಿ ಭಾರತೀಯ ಸೇನೆ ಆ ಕೃತ್ಯವನ್ನು ನಡೆಸಿದ ಉಗ್ರಾಗಾಮಿಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿತ್ತು. ಅಲ್ಲಿಯ ಬಹುಸಂಖ್ಯಾತ ಮುಸ್ಲಿಂರಿಗೆ, ಅಲ್ಲಿ ಇರುವ ಇತರ ಧರ್ಮೀಯರಿಗೆ, ಪ್ರವಾಸಿಗರಿಗೆ ಯಾವುದೇ ತೊಂದರೆ ನೀಡದೆ ರಕ್ಷಣೆ ನೀಡಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಿದೆ. ಭಾರತೀಯ ಸೇನೆ ಪಾಕಿಸ್ತಾನದ ಉಗ್ರಗಾಮಿ ತಾಣಗಳ ಮೇಲೆ ದಾಳಿ ಮಾಡಿದೆಯೇ ಹೊರತು ಯಾವುದೇ ನಾಗರಿಕರ ಮೇಲೆ ದಾಳಿ ಮಾಡಿ ಸಾವು ನೋವಿಗೆ ಕಾರಣವಾಗಿರುವುದಿಲ್ಲ. ಅಂದರೆ ಯಾರು ನೇರವಾಗಿ ತಪ್ಪಿತಸ್ಥರೋ ಅವರ ಮೇಲೆ ದಾಳಿ ನಡೆಸಿದೆ.
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು, ಕೋಮುಗಲಭೆಗಳು, ಪ್ರತೀಕಾರದ ಹತ್ಯೆಗಳು ಸಮುದಾಯ ಸಮುದಾಯದ ನಡುವೆ ಅಶಾಂತಿಗೆ, ಸಂಶಯಕ್ಕೆ ಎಡೆಮಾಡಿಕೊಡಲಾರಂಭಿಸಿದೆ. ಸಮುದಾಯಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೂ ಕಾರಣವಾಗಬಹುದು. ಅಮಾಯಕರ ಸಾವು ನೋವುಗಳಿಗೆ, ಬಲತ್ಕಾರದ ಬಂದ್‌ಗಳಿಗೆ ಎಡೆಮಾಡಿಕೊಟ್ಟಿದೆ. ಅದು ಬೇರೆ ಕಡೆಗಳಿಗೂ ಹರಡಬಹುದು. ಹೀಗಿರುವಾಗ ಅಂತಹ ಘಟನೆಗಳು ನಡೆಯದೆ ತಪ್ಪಿತಸ್ಥರ ಮೇಲೆ ಮಾತ್ರ ಕ್ರಮ ಕೈಗೊಂಡು ಅವರಿಗೆ ಶಿಕ್ಷೆ ದೊರಕುವಂತಾಗಲಿ. ನಾವು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬುದ್ಧ ಎಲ್ಲಾ ಜಾತಿ, ಧರ್ಮದವರು ಪರಸ್ಪರ ದ್ವೇಷ ಮಾಡದೆ, ಭಾರತೀಯರು ಎಂದು ಒಂದೇ ಭಾವನೆಯಲ್ಲಿ ಬದುಕುವಂತಾಗಲು ದೇಶ ರಕ್ಷಣೆಗೆ ಬದ್ಧರಾಗಲು ಏನು ಮಾಡಬೇಕೆಂದು ಮತ್ತು ದೇಶದಲ್ಲಿ ಎಲ್ಲಾ ಧರ್ಮದವರು ಸೇರಿಕೊಂಡು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಮೋಹನ್ ಭಾಗವತ್ ಮೊದಲಾದ ಪ್ರಭಾವಿ ವ್ಯಕ್ತಿಗಳು ತಮ್ಮ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಸಂದೇಶ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ಪ್ರಧಾನಿ ಮೋದೀಜಿಯವರು ಅಬುಧಾಬಿಯಂತಹ ಮುಸ್ಲಿಂ ದೇಶದಲ್ಲಿ ಅಲ್ಲಿರುವ ಹಿಂದೂಗಳಿಗೆ ಬೇಕಾಗಿ ಸ್ಥಳ ಪಡೆದು ಹಿಂದೂ ದೇವಾಲಯ ಕಟ್ಟಿಸಿದ್ದಾರೆ. ಹಾಗಿರುವಾಗ ಭಾರತ ದೇಶದ ಬೆಳ್ತಂಗಡಿಯ ತೆಕ್ಕಾರಿನಲ್ಲಿರುವ ದೇವಸ್ಥಾನಕ್ಕೆ ತೆಕ್ಕಾರಿನ ಮುಸ್ಲಿಮರ ಸಹಾಯ ಬೇಡ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಹೇಳುವುದು ಯಾಕೆ !? ಎಂಬ ಬಗ್ಗೆ ಮೋದೀಜಿಯವರಲ್ಲಿಯೇ ಕೇಳಿ ಉತ್ತರ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ತೆಕ್ಕಾರಿನಲ್ಲಿ ನಡೆದ ಜಾತ್ರೋತ್ಸವ ಸಮುದಾಯಗಳ ನಡುವೆ ಸಾಮರಸ್ಯಕ್ಕೆ, ಒಗ್ಗಟ್ಟಿಗೆ ಕಾರಣವಾಗಲಿ. ಪರಸ್ಪರ ಪೂರಕವಾಗಿ ಬದುಕಲು ಸಹಾಯ ಮಾಡಲಿ ಎಂದು ಆಶಿಸುತ್ತೇನೆ.
ಚುನಾವಣೆ ರಾಜಕೀಯ, ಚುನಾವಣೆಗೇ ಸೀಮಿತವಾಗಿರಲಿ. ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗದೆ ನಮ್ಮೊಳಗೆ ಭೇದ ಭಾವ ಉಂಟು ಮಾಡದೆ ಸಮುದಾಯಗಳನ್ನು ಒಡೆಯದಿರಲಿ. ಗ್ರಾಮ ಗ್ರಾಮಗಳಲ್ಲಿ ಎಲ್ಲಾ ಧರ್ಮದವರು ಪರಸ್ಪರ ವಿಶ್ವಾಸದಿಂದ ಸಾಮರಸ್ಯದಲ್ಲಿ ಜೀವನ ನಡೆಸಲು ಎಲ್ಲರ ಸಹಕಾರ, ಭಾಗವಹಿಸುವಿಕೆಗೆ ರಾಜಕೀಯ ಪೂರಕವಾಗಿ ಕೆಲಸ ಮಾಡಲಿ. ದೇಶದ ಒಳಗಡೆ ಎಲ್ಲಿಯೂ, ಗ್ರಾಮ ಗ್ರಾಮಗಳಲ್ಲಿ ನಾವು ನಾವು ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದು ಆಶಿಸುತ್ತೇನೆ.
ಡಾ.ಯುಪಿ ಶಿವಾನಂದ