ಪುತ್ತೂರು: ಪ್ರೊ.ಎ.ಎಸ್.ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿಗೊಳಗಾಗಿದ್ದ ಎಲ್ಲ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿರುವುದಾಗಿ ತಿಳಿದುಬಂದಿದೆ.
2011ರಲ್ಲಿ ಪ್ರೊ.ರಾಮಕೃಷ್ಣರ ಹತ್ಯೆ ನಡೆದಿತ್ತು. ಈ ಕೇಸು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2016ರಲ್ಲಿ ಕೇಸು ಬಿಟ್ಟು ಹೋಗಿತ್ತು. ಈ ತೀರ್ಪಿನ ವಿರುದ್ಧ ಸರಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ವಿಚಾರಣೆ ನಡೆದು 2023ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಇದರ ವಿರುದ್ಧ ಶಿಕ್ಷೆಗೊಳಗಾದವರು ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದರು.
ಸುಪ್ರೀಂಕೋರ್ಟು ಹೈಕೋರ್ಟು ವಿಧಿಸಿದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಆರೋಪಿಗಳಿಗೆ ಜಾಮೀನು ನೀಡಿತ್ತು. ಬಳಿಕ ವಿಚಾರಣೆ ನಡೆದು ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ನಾಗೇಶ್ ಎಚ್.ಆರ್., ವಾಮನ ಪೂಜಾರಿ, ಶರಣ್ ಮಂಗಳೂರು, ಭವಾನಿಶಂಕರ ಎಲ್ಲರನ್ನೂ ಸುಪ್ರೀಂಕೋರ್ಟ್ ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಸುಪ್ರೀಂಕೋರ್ಟಿನಲ್ಲಿ ಖ್ಯಾತ ವಕೀಲರುಗಳಾದ ಸಿದ್ಧಾರ್ಥ್ ಲೂತ್ರಾ ಹಾಗೂ ಗಿರೀಶ್ ಅನಂತಮೂರ್ತಿ ಡಾ.ರೇಣುಕಾಪ್ರಸಾದರ ಪರವಾಗಿ ವಾದಿಸಿದ್ದರು.