ನೆಲ್ಯಾಡಿ: ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಗೆ ಹಾಗೂ ಭಾರತೀಯ ಸೇನೆಗೆ ಮತ್ತಷ್ಟೂ ಶಕ್ತಿ ತುಂಬಲು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮೇ.9ರಂದು ವಿಶೇಷ ರಂಗಪೂಜೆ ನಡೆಯಿತು.
ಬೆಳಗ್ಗೆ ದೇವಾಲಯದ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯರ ನೇತೃತ್ವದಲ್ಲಿ ಮಹಾಗಣಪತಿ ದೇವರಿಗೆ ಶೋಧಸೋಪಚಾರ ಪಾದಪೂಜೆ, ಅಲಂಕಾರ, ನೈವೇದ್ಯ ಹಾಗೂ ರಂಗಪೂಜೆಯೊಂದಿಗೆ ವಿಶೇಷ ಆರಾಧನೆ ನಡೆಯಿತು. ಈ ವೇಳೆ ದೇಶದ ಭದ್ರತೆಗೆ ನಿಂತಿರುವ ಭಾರತೀಯ ಯೋಧರಿಗೆ ದೇವರು ಶಕ್ತಿ, ಸಾಮರ್ಥ್ಯ ಹಾಗೂ ಆತ್ಮಬಲ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ, ಯೋಧರ ಕುಟುಂಬಗಳು ಕ್ಷೇಮ, ಸುಖ, ಸಮೃದ್ಧಿಯಲ್ಲಿ ಇರಲೆಂದು ಆಶಿಸಿ ಪೂಜೆ ನೆರವೇರಿಸಲಾಯಿತು. ಕ್ಷೇತ್ರದ ಅರ್ಚಕರು, ದೇವಸ್ಥಾನದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.