ಕುಕ್ಕೆ ಸುಬ್ರಹ್ಮಣ್ಯ ಕಮಿಟಿ: ಕೊನೆಗೂ ಗಜಪ್ರಸವ

0

ವ್ಯವಸ್ಥಾಪನಾ ಸಮಿತಿ ಸದಸ್ಯರ ಪಟ್ಟಿ ಪ್ರಕಟ

ಪುತ್ತೂರು: ರಾಜ್ಯದ ನಂಬರ್ ವನ್ ದೇವಸ್ಥಾನವಾಗಿರುವ ಪ್ರಸಿದ್ಧ ನಾಗಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ಪಟ್ಟಿ ಕೊನೆಗೂ ಪ್ರಕಟವಾಗಿದೆ. ಒಂದು ವರ್ಷದಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಡಾ. ರಘು ಬೆಳ್ಳಿಪ್ಪಾಡಿ ಸೇರಿದಂತೆ 8 ಮಂದಿಯ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ.


ಡಾ| ಬಿ.ರಘು ಬೆಳ್ಳಿಪ್ಪಾಡಿ, ಮಹೇಶ್ ಕುಮಾರ್ ಕರಿಕ್ಕಳ, ಅಶೋಕ್ ನೆಕ್ರಾಜೆ ಯೇನೆಕಲ್, ಹರೀಶ್ ಇಂಜಾಡಿ ಸುಬ್ರಹ್ಮಣ್ಯ, ಲೀಲಾ ಮನಮೋಹನ ಅಜ್ಜಾವರ, ಪ್ರವೀಣ ಮರುವಂಜ ಮುಪ್ಪೇರ್ಯ, ಸೌಮ್ಯ ಭರತ್ ಸುಬ್ರಹ್ಮಣ್ಯ ಹಾಗೂ ಅಜಿತ್ ಪೂಜಾರಿಯವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.


ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ವರ್ಷದಲ್ಲಿ ಮೋಹನ್ ರಾಮ್ ಸುಳ್ಳಿ ನೇತೃತ್ವದ ವ್ಯವಸ್ಥಾಪನಾ ಸಮಿತಿಯ ಅಕಾರಾವಧಿ ಮುಗಿದಿತ್ತು. ಅಂದಿನಿಂದಲೇ ಹೊಸ ಸಮಿತಿಯ ಸದಸ್ಯರಾಗಲು ಕಾಂಗ್ರೆಸ್ಸಿಗರ ನಡುವೆ ಪೈಪೋಟಿ ಆರಂಭಗೊಂಡಿತ್ತು. ಆದರೆ ಕುಕ್ಕೆ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಮಾಡದೆ ಅಭಿವೃದ್ಧಿ ಪ್ರಾಧಿಕಾರ ಮಾಡುವ ಪ್ರಸ್ತಾಪ ಸರಕಾರದ ಮುಂದಿದ್ದುದರಿಂದ ಅರ್ಜಿ ಆಹ್ವಾನಕ್ಕೆ ನೋಟಿಫಿಕೇಶನ್ ಮಾಡಿರಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ಸಿಗರ ನಿಯೋಗ ಹೋಗಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಕನ್ವಿನ್ಸ್ ಮಾಡಿ ವ್ಯವಸ್ಥಾಪನಾ ಸಮಿತಿಗೆ ಒಪ್ಪಿಸಿದ್ದರು. ಬಳಿಕ ಅರ್ಜಿ ಸಲ್ಲಿಕೆಗೆ ನೋಟಿಫಿಕೇಶನ್ ಆಗಿತ್ತು.


124 ಅರ್ಜಿ ಸ್ವೀಕೃತ:
ಒಟ್ಟು 124 ಅರ್ಜಿಗಳು ರಾಜ್ಯಾದ್ಯಂತ ದಿಂದ ಬಂದಿದ್ದವು. ಅವರಲ್ಲಿ 8 ಮಂದಿಯನ್ನು ಆರಿಸುವುದು ಹರ ಸಾಹಸದ ಕೆಲಸವಾಗಿತ್ತು. ಆದರೂ ಕಾಂಗ್ರೆಸ್ಸಿನ ಜಿಲ್ಲಾ ನಾಯಕರುಗಳು, ಕಡಬ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್‌ನವರ ಸಲಹೆ ಪಡೆದು ರಮಾನಾಥ ರೈ, ಹರಿಕುಮಾರ್, ಮಂಜುನಾಥ ಭಂಡಾರಿ , ದಿನೇಶ್ ಗುಂಡೂರಾವ್‌ರವರು ಚರ್ಚಿಸಿ 8 ಮಂದಿಯ ಹೆಸರು ಅಮತಿಮಗೊಳಿಸಿ ಸಚಿವ ರಾಮಲಿಂಗರೆಡ್ಡಿಯವರಲ್ಲಿಗೆ ಕಳುಹಿಸಿದರು. ಆ ಪಟ್ಟಿ ಸೋರಿಕೆಯಾಗಿ ಕಾಂಗ್ರೆಸ್‌ನಲ್ಲಿ ಸಂಚಲನವಾಗಿತ್ತು. ಡಾ| ರಘು, ಜಯಪ್ರಕಾಶ್ ರೈ, ಮಹೇಶ್ ಕುಮಾರ್ ಕರಿಕ್ಕಳ, ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ, ಲೀಲಾ ಮನಮೋಹನ, ಪ್ರವೀಣಾ ಮರುವಂಜ, ಅಜಿತ್ ಪೂಜಾರಿಯವರ ಹೆಸರು ಅದರಲ್ಲಿತ್ತು. ದೇವಳದ ಕೈಂಕರ್ಯದ ಒಂದು ಭಾಗವಾದ ಮಲೆ ಕುಡಿಯ ಸಮುದಾಯಕ್ಕೆ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ. ಕೂಜುಗೋಡು ಕುಟುಂಬಕ್ಕೆ ಅವಕಾಶ ನೀಡಿಲ್ಲ ಎಂಬ ದೂರುಗಳು ರಾಜ್ಯ ಮಟ್ಟದ ವವರೆಗೆ ಹೋಗಿ ಆ ಪಟ್ಟಿ ತಡೆ ಹಿಡಿಯಲ್ಪಟ್ಟಿತ್ತು. ಇದೀಗ ಮೇ.10 ರಂದು ಪಟ್ಟಿ ಅಂತಿಮಗೊಂಡು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿತ್ತು. ಆದರೆ ಅದನ್ನು ಬಹಿರಂಗಗೊಳಿಸಬಾರದೆಂಬ ಕಟ್ಟಪ್ಪಣೆ ಇದ್ದುದರಿಂದ ಪಟ್ಟಿ ಬಹಿರಂಗವಾಗಲಿಲ್ಲ. ಆದರೆ ಪಟ್ಟಿಯಲ್ಲಿ ಒಂದು ಬದಲಾವಣೆಯಾಗಿದೆ. ಹಿರಿಯ ನಾಯಕರಾದ ಜಯಪ್ರಕಾಶ್ ರೈಯವರ ಹೆಸರನ್ನು ಕೈ ಬಿಟ್ಟು ಮಲೆ ಕುಡಿಯ ಸಮುದಾಯದ ಮಹಿಳೆ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರೂ ಆಗಿರುವ ಸೌಮ್ಯ ಭರತ್ ರವರನ್ನು ನೇಮಕ ಗೊಳಿಸಲಾಗಿದೆ ಎಂಬ ಮಾಹಿತಿ ಹರಿದಾಡತೊಡಗಿತು. ಸಂಜೆಯ ವೇಳೆಗೆ ಈ ಮಾಹಿತಿ ನಿಜವೆಂಬುದು ದೃಢಪಟ್ಟಿತು. ದೇವಸ್ಥಾನದಿಂದ, ನೇಮಕಗೊಂಡ 8 ಮಂದಿಗೂ ಅಧಿಕೃತ ಮಾಹಿತಿ ಹೋಗಿ ಅವರು ಬಂದು ಅಽಕೃತ ಆದೇಶ ಪತ್ರ ಪಡೆದು ಸಹಿ ಹಾಕಿದರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here