ಪುತ್ತೂರು: ಬೆಟ್ಟಂಪಾಡಿ ಪ್ರಿಯದಶಿನಿ ವಿದ್ಯಾಸಂಸ್ಥೆಯಲ್ಲಿ ವರ್ಣದರ್ಶಿನಿ ಮಕ್ಕಳ ಸನಿವಾಸ ರಂಗ ಸಂಭ್ರಮ ಮೇ.10ರಂದು ಉದ್ಘಾಟನೆಗೊಂಡಿತು.
ವಿಶೇಷ ರೀತಿಯ ಉದ್ಘಾಟನೆ
ಸುಮಾರು 47 ಶಿಬಿರಾರ್ಥಿಗಳು ಬಾಳೆ ಗಿಡಕ್ಕೆ ಚುಚ್ಚಿದ ಚಮಚಗಳಿಗೆ ಹಣತೆ ಬೆಳಗಿದರು ಮತ್ತು ನೀರಿನ ಕೊಳವನ್ನು ನಿರ್ಮಿಸಿ ಶಿಬಿರಾರ್ಥಿಗಳು ಹಣತೆಗಳನ್ನು ತೇಲಿ ಬಿಟ್ಟರು. ಇದು ಸೇರಿದ ಸಮಸ್ತ ಜನರ ಕಣ್ಮನ ಸೆಳೆಯಿತು.
ಸಂಟ್ಯಾರು ಕಾರ್ತಿಕೇಯ ಇಂಡಸ್ಟ್ರೀಸ್ ಇದರ ಮಾಲಕರಾದ ಜಗನ್ಮೋಹನ ರೈ ಸೂರಂಭೈಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯನ್ನು ದೂರವಿಟ್ಟು ಭಾರತೀಯತೆಯತ್ತ ಒಲವು ತೋರಿಸುವ ಅನಿವಾರ್ಯತೆ ಇದೆ. ಪೋಷಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಮನವಿ ಮಾಡಿದರು. ಮುಖ್ಯ ಅತಿಥಿಗಳಾದ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್ ಮಾತನಾಡಿ, ಸೃಜನಶೀಲ ವ್ಯಕ್ತಿಗಳಿಂದ ಕೂಡಿದ ಈ ಶಿಬಿರಕ್ಕೆ ಶಿಬಿರಾರ್ಥಿಗಳು ಇನ್ನಷ್ಟು ರಂಗು ತರಲಿ ನಾವೀನ್ಯ ರೀತಿಯ ಈ ಶಿಬಿರ ಉದ್ಘಾಟನೆ ಮನಸ್ಸಿಗೆ ಹರುಷ ತಂದಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿಗಳಾದ ರಘುರಾಜ ಉಬರಡ್ಕ ಇವರು ಶುಕ್ಲ ಪಕ್ಷದ ಗೋಧೂಳಿ ಮುಹೂರ್ತದಲ್ಲಿ ಶಿಬಿರ ಉದ್ಘಾಟನೆಗೊಂಡಿದೆ. ಮಕ್ಕಳಲ್ಲಿ ಮುಂದೂಡಿಕೆ ಸಮಸ್ಯೆ, ಧಾರವಾಹಿ ಚಾಳಿ, ಅತಿ ನಿದ್ರೆ ಕಡಿಮೆಯಾಗಬೇಕು. ಇವುಗಳನ್ನು ದೂರಗೊಳಿಸಲು ವರ್ಣದರ್ಶಿನಿ ಶಿಬಿರ ಸೂಕ್ತ ವೇದಿಕೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರುಣಾಕರ ಶೆಟ್ಟಿ ಕೊಮ್ಮಂಡ, ಈ ಹಿಂದೆ ನಡೆದ ಅಲಂಕಾರ ಶಿಬಿರ ಹಾಗೂ ಇಂದು ನಡೆಯುತ್ತಿರುವ ವರ್ಣದರ್ಶಿನಿ ಯಂತಹ ಅನೇಕ ಕಾರ್ಯಕ್ರಮಗಳ ಜೊತೆಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು 100 ಶೇಕಡ ಫಲಿತಾಂಶ ತಂದು ಕೊಡುತ್ತಿರುವುದು ಹೆಮ್ಮೆಯ ವಿಷಯ. ಪುಸ್ತಕ ಜ್ಞಾನ ಒಂದಿದ್ದರೆ ಸಾಲದು ಮಕ್ಕಳಿಗೆ ಹೊರ ಪ್ರಪಂಚ ಅರಿವಾಗಬೇಕು ಎಂದರು. ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಾತ್ವಿಕ, ವೃದ್ಧಿ ಹಾಗೂ ವೈಷ್ಣವಿ ಪ್ರಾರ್ಥಿಸಿದರು. ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಸಂಚಾಲಕ ಡಾ. ಸತೀಶ್ ರಾವ್ ಶಿಬಿರಾರ್ಥಿಗಳಿಗೆ ಕಿಟ್ ವಿತರಿಸಿದರು. ಶಿಬಿರ ನಿರ್ವಾಹಕ ಪ್ರಶಾಂತ್ ವಂದಿಸಿದರು .ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.