ಕ್ಷೇತ್ರ ವ್ಯಾಪ್ತಿಯ ಪ್ರತೀ ಮನೆಗೂ ಉಡುಗೊರೆ ತಲುಪಿಸುತ್ತೇನೆ: ಶಾಸಕ ಅಶೋಕ್ ರೈ
ಪುತ್ತೂರು: ಅ.20 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅಶೋಕ ಜನಮನ -2025 ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಮತ್ತು ಮಳೆಯ ಕಾರಣಕ್ಕೆ ಕೆಲವರಿಗೆ ಉಡುಗೊರೆ ಪಡೆಯಲು ಸಾಧ್ಯವಾಗಿಲ್ಲ ಈ ಕಾರಣಕ್ಕೆ ನಾನು ಪ್ರತೀ ಗ್ರಾಮಕ್ಕೂ ತೆರಳಿ ಉಡುಗೊರೆ ನೀಡಲಿದ್ದೇನೆ, ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಮನೆಗೂ ಉಡುಗೊರೆ ತಲುಪಿಸುವೆ ಎಂದು ಶಾಸಕ ಅಶೋಕ್ ರೈ ಘೋಷಣೆ ಮಾಡಿದ್ದಾರೆ. ಅವರು ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮಸ್ಥರಿಗೆ ಉಡುಗೊರೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಕೋಡಿಂಬಾಡಿ ಭಜನಾಮಂದಿರದ ಬಳಿ ನಡೆದ ಈ ಕಾರ್ಯಕ್ರಮದಲ್ಲಿ ಎರಡೂ ಗ್ರಾಮದ ನೂರಾರು ಮಂದಿ ಗ್ರಾಮಸ್ಥರು ಭಾಗವಹಿಸಿ ಉಡುಗೊರೆಯನ್ನು ಸ್ವೀಕಾರ ಮಾಡಿದರು.
ಅಶೋಕಜನಮನ ಕಾರ್ಯಕ್ರಮಕ್ಕೆ ಪ್ರತೀ ವರ್ಷವೂ ಭಾಗವಹಿಸಿ ನನಗೆ ಆಶೀರ್ವಾದ ಮಾಡುತ್ತಿದ್ದ ಹಲವಾರು ಮಂದಿ ಈ ಬಾರಿಯ ಜನಸಂದಣಿಯ ನಡುವೆ ಉಡುಗೊರೆ ಪಡೆಯಲು ಸಾಧ್ಯವಾಗಿಲ್ಲ, ನಾನು ಎಲ್ಲರನ್ನೂ ಕರೆದಿದ್ದೆ, ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಇದು ಸಂತೋಷದ ವಿಚಾರವಾಗಿತ್ತು ಆದರೆ ಬಂದವರು ಬರಿಗೈಯ್ಯಲ್ಲಿ ತೆರಳಿದ್ದು ನನಗೆ ಅತ್ಯಂತ ದುಖ ತಂದಿದೆ ಎಂದ ಶಾಸಕರು ಕೋಟಿಗಟ್ಟಲೆ ಖರ್ಚಾದರೂ ಪರವಾಗಿಲ್ಲ ಬಡವರ ಮನಸ್ಸಿಗೆ ಆದ ನೋವಿಗೆ ಪಶ್ಚಾತ್ತಾಪ ಪಟ್ಟು ಗ್ರಾಮದ ಪ್ರತೀ ಮನೆಗೂ ನಾನು ಉಡುಗೊರೆಯನ್ನು ತಲುಪಿಸುವ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.
ನಿಮ್ಮ ಆಶೀರ್ವಾದವೇ ನನಗೆ ದೊಡ್ಡದು:
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ಈ ಆಶೀರ್ವಾದ ಇಲ್ಲದೇ ಇರುತ್ತಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಂದು ಯಾರೂ ಮನಸ್ಸಿಗೆ ಬೇಸರ ಮಾಡಿಕೊಂಡು ಹೋಗಬಾರದಿತ್ತು ಆದರೆ ಆ ದಿನದ ಅವಸ್ಥೆಯಿಂದಾಗಿ ಕೆಲವರಿಗೆ ಬೇಸರವಾಗಿದ್ದಕ್ಕೆ ನಾನು ಕ್ಷಮೆಯನ್ನು ಕೂಡಾ ಕೇಳಿದ್ದೇನೆ, ಮುಂದೆಯೂ ಕ್ಷಮೆ ಕೇಳುತ್ತೇನೆ, ನಿಮಗೆ ಶಿರಬಾಗಿ ವಂದಿಸುವೆ ಎಂದು ಹೇಳಿದ ಶಾಸಕರು ನಾನು ಗ್ರಾಮ ಗ್ರಾಮದಲ್ಲಿ ವಿತರಿಸುವ ಉಡುಗೊರೆಯನ್ನು ಪ್ರತೀಯೊಬ್ಬರೂ ಸ್ವೀಕಾರ ಮಾಡಬೇಕೆಂದು ಮನವಿ ಮಾಡಿದರು.

ಮುಂದಿನ ವರ್ಷ ಬೆಳಿಗ್ಗೆಯಿಂದಲೇ ಉಡುಗೊರೆ
ಮುಂದಿನವ ವರ್ಷ ದೀಪಾವಳಿಯಂದು ಅಶೋಕ ಜನಮನ ವಿಜೃಂಬಣೆಯಿಂದ ನಡೆಯಲಿದೆ. ಬೆಳಿಗ್ಗೆಯಿಂದಲೇ ಉಡುಗೊರೆ, ಅನ್ನದಾನ ನಡೆಯಲಿದೆ. ಬಂದವರು ನೇರವಾಗಿ ನಮಗೆ ಆಶೀರ್ವಾದ ಮಾಡಿ ಅನ್ನದಾನದಲ್ಲಿ ಭಾಗವಹಿಸಿ ಉಡುಗೊರೆ ಪಡೆದು ತೆರಳಬಹುದಾಗಿದೆ. ಅತಿಥಿಗಳ ಭಾಷಣ ಕೇಳಲು ಯಾರನ್ನೂ ಕೂರಿಸುವುದಿಲ್ಲ, ಇಷ್ಟವಿದ್ದವರು ಭಾಷಣ ಕೇಳಲು ಕೂರಬಹುದು ಅಲ್ಲದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಬಹುದು. ಯಾವುದೇ ಕಾರಣಕ್ಕೂ ಕಾಯಿಸುವ ಕೆಲಸವೇ ಇಲ್ಲ. ಮುಂದಿನ ವರ್ಷ ಎಲ್ಲರೂ ಕಾರ್ಯಕ್ರಮದಂದೇ ಭಾಗವಹಿಸಿ ಸಹಕಾರ ನೀಡಬೇಕು. ಮುಂದೆ ಗ್ರಾಮ ಗ್ರಾಮಗಳಲ್ಲಿ ವಿತರಣೆ ನಡೆಯುವುದಿಲ್ಲ ಎಂದು ಶಾಸಕರು ಮನವಿ ಮಾಡಿದರು.
ಶಾಸಕರ ಬಡವರ ಮೇಲಿನ ಪ್ರೀತಿಗೆ
ಉಚಿತ ಚಿಕಿತ್ಸೆ ಘೋಷಿಸಿದ ವೈದ್ಯ…!
ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರಿನ ನೆಹರೂ ನಗರದ ಸಂಜೀವಿನಿ ಕ್ಲಿನಿಕ್ನ ವೈದ್ಯರಾದ ಡಾ. ರವಿನಾರಾಯಣ ಅವರು ಶಾಸಕ ಅಶೋಕ್ ರೈ ಅವರಿಗೆ ಬಡವರ ಮೇಲಿನ ಪ್ರೀತಿ ನೋಡಿ ನಾನು ಅಚ್ಚರಿ ಪಟ್ಟಿದ್ದೇನೆ ನನಗೂ ಅವರ ಹಾಗೆ ಸೇವೆ ಮಾಡಬೇಕೆಂಬ ಆಸೆ ಹುಟ್ಟಿಕೊಂಡಿದೆ. ನನ್ನ ಕ್ಲಿನಿಕ್ಗೆ ಚಿಕಿತ್ಸೆಗೆ ಬರುವ ಬಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಣೆ ಮಾಡಿದರು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ನನ್ನಿಂದ ಸಾಧ್ಯವಿಲ್ಲ ಕೇವಲ ಬಡವರಿಗೆ ಮಾತ್ರ ಎಂದು ಹೇಳಿದ ವೈದ್ಯರು ಕಳೆದ ಅಶೋಕ ಜನಮನದಲ್ಲಿ ಜನಸಂದಣಿ ಮತ್ತು ಮಳೆಯ ಕಾರಣಕ್ಕೆ ಉಡುಗೊರೆ ಪಡೆಯದೆ ಕೆಲವರು ಹಿಂದಿರುಗಿದ್ದಾರೆ ಎಂಬ ಕಾರಣಕ್ಕೆ ಎರಡನೇ ಹಂತದ ಉಡುಗೊರೆಯನ್ನು ಗ್ರಾಮ ಗ್ರಾಮಕ್ಕೆ ತೆರಳಿ ವಿತರಣೆ ಮಾಡುತ್ತಿದ್ದಾರೆ. ಇಂತಹ ಒಬ್ಬ ಬಡವರ ಪ್ರೇಮಿ, ಮತ್ತು ಕರುಣಾಳು ಹೃದಯವನ್ನು ಹೊಂದಿರುವ ಶಾಸಕರನ್ನು ಪಡೆದ ಪುತ್ತೂರಿನ ಜನ ಭಾಗ್ಯವಂತರು ಎಂದು ಹೇಳಿದರು.
ಒಳ್ಳೆಯ ಮನಸ್ಸು ಇದ್ದರೆ ಮಾತ್ರ ಸಾಧ್ಯ: ರಾಜೇಶ್ ಬೆಜ್ಜಂಗಳ
ಡಾ. ರಾಜೇಶ್ ಬೆಜ್ಜಂಗಳ ರವರು ಮಾತನಾಡಿ, ಒಳ್ಳೆಯ ಮನಸ್ಸು ಇದ್ದವರಿಗೆ ಮಾತ್ರ ಈ ರೀತಿಯ ಕಾರ್ಯಕ್ರಮ ನಡೆಸಲು ಸಾಧ್ಯ. ಕಾರ್ಯಕ್ರಮಕ್ಕೆ ಬಂದು ದೀಪಾವಳಿ ಉಡುಗೊರೆ ಪಡೆಯದೆ ಕೆಲವರು ಮರಳಿದ್ದಾರೆ ಇದರಿಂದ ನನ್ನ ,ಮನಸ್ಸಿಗೆ ನೋವಾಗಿದೆ ಎಂದು ಹೇಳುತ್ತಿರುವ ಶಾಸಕ ಅಶೋಕ್ ರೈ ಅವರ ನಿಷ್ಕಲ್ಮಶ ಮನಸ್ಸು ಅವರನ್ನು ಇಷ್ಟು ಮೇಲಕ್ಕೇರಿಸಿದೆ. ಬಡವರ ಮೇಲೆ ಇವರಿಗಿರುವ ಪ್ರೀತಿ ಜಿಲ್ಲೆಯ ಯಾವ ಜನಪ್ರತಿನಿಧಿಗಳಿಗೂ ಇಲ್ಲ. ಪುತ್ತೂರಿನ ಅಭಿವೃದ್ದಿಗಾಗಿ ಶ್ರಮ ವಹಿಸುತ್ತಿರುವ ಶಾಸಕರ ಕೆಲಸಕ್ಕೆ ನಾವು ಸಂಪೂರ್ಣ ಬೆಂಬಲವನ್ನು ನೀಡಬೇಕು. ಪುತ್ತೂರಿನ ಸಂಪೂರ್ಣ ಅಭಿವೃದ್ದಿಯಾಗುವ ತನಕ ಜನ ಇವರಿಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈ ಚಾರಿಟೇಬಲ್ ಟ್ರಸ್ಟ್ನ ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರ್, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಮಟಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಟಂತಬೆಟ್ಟು, ನಿಹಾಲ್ ಪಿ ಶೆಟ್ಟಿ, ಶಿವಪ್ರಸಾದ್ ಕೋಡಿಂಬಾಡಿ, ವಿಕ್ರಂ ಶೆಟ್ಟಿ, ಮೋನಪ್ಪ ಗೌಡ ಬೊಮ್ಮಮಜಲು, ರಾಮಣ್ಣ ಪಿಲಿಂಜ, ಸಾಹಿರಾ ಬಾನು, ಪ್ರಭಾಕರ ಸಾಮಾನಿ, ಪದ್ಮನಾಭ ಶೆಟ್ಟಿ ರೆಂಜಾಜೆ,ರಶ್ಮಿ ನಿರಂಜನ್, ಅನಿಮಿನೆಜಸ್, ರೇಣುಕಾ ಮುರಳೀಧರ್, ಯಮುನಾ ಡೆಕ್ಕಾಜೆ , ಹೊನ್ನಪ್ಪ ಕೈಂದಾಡಿ, ಸೀತಾರಾಮ ಶೆಟ್ಟಿ ಹೆಗ್ಗಡೆ ಹಿತ್ಲು, ರತ್ನ ವರ್ಮ ಆಳ್ವ, ಉಲ್ಲಾಸ್ ಕೋಟ್ಯಾನ್, ಗಿರೀಶ್ ರೈ ಸಂಟ್ಯಾರ್, ಕೆ ಪಿ ಬೊಳ್ಳಾವು,ಹುಸೈನ್ ಕೆಬಿಕೆ ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿ ನಡುಮನೆ ಸ್ವಾಗತಿಸಿ, ಯೋಗೀಶ್ ಸಾಮಾನಿ ವಂದಿಸಿದರು.ಪವಿತ್ರ ಕೈಪ ಸಹಕರಿಸಿದರು.
ಪ್ರಾರಂಭಿಕವಾಗಿ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಉಡುಗೊರೆ ವಿತರಣೆ ನಡೆದಿದೆ. ಇಲ್ಲಿ ಕಾರ್ಯಕ್ರಮ ಯಶಶ್ವಿಯಾಗಿದೆ. ಮುಂದೆ ಎಲ್ಲಾ ಗ್ರಾಮಗಳಲ್ಲಿಯೂ ನಡೆಯಲಿದೆ. ದಿನಾಂಕವನ್ನು ನಾವು ತಿಳಿಸುತ್ತೇವೆ. ಆಯಾ ಗ್ರಾಮದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆಯಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉಡುಗೋರೆಯನ್ನು ಪಡೆದುಕೊಳ್ಳಬೇಕು
ಸುದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ರೈ ಚಾರಿಟೇಬಲ್ ಟ್ರಸ್ಟ್