ಪುತ್ತೂರು: ಭಾರತೀಯ ಜ್ಞಾನ ಪರಂಪರೆಯು ಅತ್ಯಂತ ಹೆಚ್ಚು ಅವಜ್ಞೆಗೊಳಗಾಗಿದೆ ಮತ್ತು ನಮ್ಮವರಿಂದಲೇ ನಿರಾಕರಿಸಲ್ಪಟ್ಟಿದೆ. ಅಧರ್ಮವನ್ನು ಧರ್ಮ ಎಂದು ಬಿಂಬಿಸುವ ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ನಾವು ಕಳೆದುಕೊಂಡದ್ದು ಅಪಾರ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್.ಕೆ.ಎನ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತೀಯ ಜ್ಞಾನ ಪರಂಪರೆ ಪರಿಚಯ ಮತ್ತು ಅವಲೋಕನ ಎನ್ನುವ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಕಳೆದುಕೊಂಡಿರುವುದನ್ನು ಅಲ್ಲಿಯೇ ಹುಡುಕಬೇಕು, ಆಗ ನಮಗೆ ಪ್ರೇರಣೆ ಸಿಗಬಹುದು. ಆ ಬಳಿಕ ಏನು ಮಾಡಬೇಕೆಂಬುದನ್ನು ವಿಮರ್ಶಿಸಬೇಕು ಹಾಗಾಗಿ ಆ ಪ್ರೇರಣೆ ತುಂಬುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ.ಎಸ್.ರಾವ್ ಮಾತನಾಡಿ ನಮ್ಮತನದ ಬಗ್ಗೆ ಹೆಮ್ಮೆ ಮೂಡುವಂತಹ ಶೈಕ್ಷಣಿಕ ಚಟುವಟಿಕೆಗಳು ನಡೆಯಬೇಕು. ಭಾರತೀಯ ಜ್ಞಾನ ಪರಂಪರೆಯ ವಿಷಯವನ್ನು ಬೋಧಿಸುವುದಕ್ಕೆ ಯಾವ ವಯೋಮಾನದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಚಟುವಟಿಕೆಗಳು ಹೆಚ್ಚು ಸೂಕ್ತ ಎನ್ನುವ ಚರ್ಚೆಯಾಗಬೇಕು. ಅದರ ಬಗ್ಗೆ ಅವಲೋಕನವನ್ನು ಮಾಡಿ ಅದಕ್ಕೆ ತಕ್ಕುದಾದ ಪಠ್ಯ ಕ್ರಮವನ್ನು ತಯಾರಿಸಬೇಕು ಎಂದರು.
ಎರಡು ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ಪ್ರಾಚೀನ ಭಾರತದ ವೇದಗ್ರಂಥ, ತತ್ವಶಾಸ್ತ್ರಗಳ ವ್ಯಾಪ್ತಿ ಮತ್ತು ಪ್ರಾಮುಖ್ಯತೆ, ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಜ್ಞಾನದ ಅವಲೋಕನ, ಪ್ರಾಚೀನ ಭಾರತದ ಭಾಷಾ ಶಾಸ್ತ್ರ, ಸಂಖ್ಯೆ ಮತ್ತು ಮಾಪನ, ಕಲೆ, ಕರಕುಶಲತೆ ಮತ್ತು ವ್ಯಾಪಾರ, ಪ್ರಾಚೀನ ಭಾರತದ ಗಣಿತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಭೌತಶಾಸ್ತಗಳ ಪರಿಚಯ ಮತ್ತು ಅವಲೋಕನ, ಪ್ರಾಚೀನ ಭಾರತದ ಖಗೋಳ ಶಾಸ್ತ್ರ, ಜೋತಿಷ್ಯ ಶಾಸ್ತ್ರ ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಪ್ರಾಚೀನ ಭಾರತದ ನಗರಯೋಜನೆಗಳು ಮತ್ತು ವಾಸ್ತುಶಿಲ್ಪ, ಕೃಷಿ, ಸಾರ್ವಜನಿಕ ಆಡಳಿತ ವ್ಯವಸ್ಥೆ, ಪ್ರಾಚೀನ ಭಾರತದ ಆರೋಗ್ಯ, ಸ್ವಾಸ್ಥ್ಯ ಮತ್ತು ಮನೋವಿಜ್ಞಾನ, ಔಷಧ ಪದ್ದತಿ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿಗಳು ಹೀಗೆ ಆರು ಅವಧಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಷಯ ವಿಸ್ತಾರವನ್ನು ಮಾಡಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಶೊಭಿತಾ ಸತೀಶ್ ಮಾತನಾಡಿ ಭಾರತೀಯ ಜ್ಞಾನ ಪರಂಪರೆಯನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಿಗೆ ಬೋಧಿಸುತ್ತಾ ಬಂದಿದ್ದೇವೆ. ಬದಲಾದ ಶೈಕ್ಷಣಿಕ ನೀತಿಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದ್ದು, ಇದರ ಬಗ್ಗೆ ಹೆಚ್ಚು ಯೋಚಿಸುವಂತಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ಅಗಾಧವಾದ ವಿಷಯಗಳುಳ್ಳ ಭಾರತೀಯ ಜ್ಞಾನ ಪರಂಪರೆಯನ್ನು ಎರಡು ದಿನಗಳಲ್ಲಿ ಪರಿಚಯಿಸಲು ಸಾಧ್ಯವಿಲ್ಲ ಆದರೂ ಅದನ್ನು ಪೂರ್ಣವಾಗಿ ತಿಳಿದುಕೊಳ್ಳಬೇಕೆಂಬ ಮನಸ್ಥಿತಿ ಉಂಟುಮಾಡುವುದೇ ಈ ಕಾರ್ಯಾಗಾರದ ಉದ್ದೇಶ ಎಂದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಮತ್ತು ಕಾರ್ಯಕ್ರಮ ಸಂಯೋಜಕ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ನವೀನ್.ಎಸ್.ಪಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕ ಸತೀಶ್.ಕೆ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.