ಮಿತ್ತೂರು: ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕಳಪೆ-ಆರೋಪ

0

ಪುತ್ತೂರು: ಇಡ್ಕಿದು ಗ್ರಾಮದ ಮಿತ್ತೂರು ಸಮೀಪದ ಏಮಾಜೆ ಕೆಇಬಿ ಕಾಂಕ್ರೀಟ್ ರಸ್ತೆ ಕಾಮಗಾರಿ ಇತ್ತೀಚೆಗೆ ನಡೆದಿದ್ದು ರಸ್ತೆ ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಏಮಾಜೆ ಕೆಇಬಿ ರಸ್ತೆ ಅಭಿವೃದ್ಧಿಗೆ ಸ್ಥಳೀಯರ ಬೇಡಿಕೆ ಮನ್ನಿಸಿ ಶಾಸಕ ಅಶೋಕ್ ಕುಮಾರ್ ರೈಯವರು ರೂ. 10 ಲಕ್ಷ ಅನುದಾನ ಒದಗಿಸಿದ್ದು ರಸ್ತೆಯ ಕಾಂಕ್ರೀಟ್ ಕಾಮಗಾರಿ ಕೂಡಾ ಇತ್ತೀಚೆಗೆ ನಡೆದಿತ್ತು. ಆದರೆ ಸದ್ರಿ ರಸ್ತೆ ಕಾಮಗಾರಿಯನ್ನು ಸರಿಯಾದ ಪ್ಲಾನಿಂಗ್ ಇಲ್ಲದೇ ತರಾತುರಿಯಲ್ಲಿ ಮಾಡಲಾಗಿದ್ದು ಕಾಮಗಾರಿ ಕಳಪೆಯಾಗಿದೆ, ಮಾತ್ರವಲ್ಲದೇ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕದೇ ಹಾಗೇ ಬಿಟ್ಟಿರುವುದರ ಪರಿಣಾಮ ಈಗಾಗಲೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದೂ ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಮೇ.11ರಂದು ಸ್ಥಳೀಯ ನಿವಾಸಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿ ಕಳಪೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈಯವರು ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವುದಲ್ಲದೇ ಅನೇಕ ಯೋಜನೆಗಳನ್ನು ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದು ಜನರಿಂದ ಪ್ರಶಂಸೆಗೆ ಪಾತ್ರವಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಇಂತಹ ಕಳಪೆ ಕಾಮಗಾರಿಗಳು ಅವರ ಹೆಸರಿಗೆ ಕಳಂಕ ತರುತ್ತಿದೆ, ಶಾಸಕರು ನಮ್ಮ ಬೇಡಿಕೆ ಈಡೇರಿಸಿ 10 ಲಕ್ಷ ರೂ ಅನುದಾನ ಒದಗಿಸಿದ್ದಾರೆ, ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದು ನಾವು ಕೇಳುವಾಗ ನಮ್ಮಲ್ಲಿ ಉಡಾಫೆಯಾಗಿ ಉತ್ತರಿಸಿದ್ದಾರೆ. ಈ ರಸ್ತೆ ಕೆಲವೇ ದಿನಗಳಲ್ಲಿ ಬಿರುಕು ಬೀಳುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿ ಈಶ್ವರ ಭಟ್ ಮಾತನಾಡಿ, ರಸ್ತೆ ಕಾಮಗಾರಿ ನಡೆದ ಅನೇಕ ದಿನಗಳಾದರೂ ವಾಹನದಲ್ಲಿ ಹೋಗುವಾಗ ಸೈಡ್ ಕೊಡಲು ಇಲ್ಲಿ ಜಾಗ ಇಲ್ಲ, ಇಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಶಾಸಕರು ಈ ವಿಚಾರದ ಬಗ್ಗೆ ಮುತುವರ್ಜಿ ವಹಿಸಿಕೊಂಡು ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಸಿಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳೀಯ ನಿವಾಸಿ ಹಕೀಂ ಮಾತನಾಡಿ, ಈಗಾಗಲೇ ಈ ರಸ್ತೆಯಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದು ಮೇ.12ರಂದು ಕೂಡಾ ಒಬ್ಬರು ಮಹಿಳೆ ದ್ವಿಚಕ್ರ ವಾಹನದಿಂದ ಬಿದ್ದು ಗಾಯವಾಗಿದೆ. ರಸ್ತೆ ಕಾಮಗಾರಿಗೆ ಸರಿಯಾದ ಸ್ಟ್ರಕ್ಚರ್ ಮಾಡದೇ ಅದರ ಮೇಲೆಯೇ ಕಾಂಕ್ರೀಟ್ ಹಾಕಿದ್ದು ಅದು ಕೂಡಾ ಸರಿಯಾಗಿಲ್ಲ, ಸೈಡಲ್ಲಿ ಆರು ಇಂಚು, ಮದ್ಯದಲ್ಲಿ ಮೂರು ಇಂಚು ಕಾಂಕ್ರೀಟ್ ಹಾಕಿದ್ದಾರೆ, ವಾಹನಗಳಿಗೆ ಸೈಡ್ ಕೊಡಲೂ ಜಾಗವಿಲ್ಲ, ಈ ರಸ್ತೆ ಕಾಮಗಾರಿ ಕಳಪೆಯಾಗಿದೆ, ಈ ರಸ್ತೆ ಕಾಮಗಾರಿ ಬಗ್ಗೆ ಸರಿಯಾಗಿ ತನಿಖೆಯಾದರೆ ಸತ್ಯಾಂಶ ಹೊರಬರಲಿದೆ, ಶಾಸಕ ಅಶೋಕ್ ರೈ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದು ನಮ್ಮ ಬೇಡಿಕೆ ಈಡೇರಿಸಿದ್ದಾರೆ, ಈ ರಸ್ತೆ ಕಾಮಗಾರಿ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ನಿವಾಸಿ ಗಿರೀಶ್ ಗೌಡ ಮಾತನಾಡಿ ,ಈ ರಸ್ತೆಯ ಕಾಂಕ್ರೀಟ್ ಪ್ರಾರಂಭ ಆಗುವಾಗಲೇ, ನೀವು ಮಾಡುವ ರೀತಿ ಸರಿಯಿಲ್ಲ, ಸಂಬಂಧಪಟ್ಟ ಇಂಜಿನಿಯರ್‌ನ್ನು ಕರೆಸಿ ಎಂದು ನಾವು ಗುತ್ತಿಗೆದಾರರಲ್ಲಿ ಹೇಳಿದ್ದೆವು, ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೇ ಕಾಮಗಾರಿ ನಡೆಸಿದ್ದು ಕಾಮಗಾರಿ ಕಳಪೆ ಆಗಿದೆ, ರಸ್ತೆ ಬದಿಗೆ ಮಣ್ಣು ಹಾಕಿಲ್ಲ, ಕಾಂಕ್ರೀಟ್ ರಸ್ತೆ ಆದ ಬಳಿಕ ಸರಿಯಾಗಿ ನೀರನ್ನೂ ಹಾಕಿಲ್ಲ, ಈ ಬಗ್ಗೆ ಶಾಸಕರು ಪರಿಶೀಲನೆ ನಡೆಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಗಿರೀಶ, ಚಿದಾನಂದ, ಮೌನೇಶ, ರಾಮಚಂದ್ರ, ಮೋಹನ, ಆನಂದ, ಮೋಹನ ಕೆ, ನಾಗೇಶ, ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here