ರಾಮಕುಂಜ: ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯಿಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮೇ.11 ರಂದು ತಡ ರಾತ್ರಿ ಟೆಂಪೋ ಟ್ರಾವೆಲರ‍್ಸ್ ಮತ್ತು ಮಾರುತಿ-800 ಕಾರು ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ 4 ಮಂದಿ ಗಾಯಗೊಂಡು ಉಪ್ಪಿನಂಗಡಿ ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರುತಿ-800 ಕಾರಿನಲ್ಲಿದ್ದ ಪದ್ಮನಾಭ ಎಂಬವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಸುದರ್ಶನ್, ಚೇತನ್, ಸತೀಶ್ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆಲಂಕಾರು ಪರಿಸರದ ನಿವಾಸಿಗಳು ಎಂದು ತಿಳಿದು ಬಂದಿದೆ. ಟೆಂಪೋ ಟ್ರಾವೆಲರ‍್ಸ್‌ನಲ್ಲಿದ್ದ ಶಿವಮೊಗ್ಗದ ಒಂದಿಬ್ಬರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಟೆಂಪೋ ಟ್ರಾವೆಲರ‍್ಸ್‌ನಲ್ಲಿದ್ದವರು ಶಿವಮೊಗ್ಗದವರಾಗಿದ್ದು, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ ಅಲ್ಲಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದವರು. ಮಾರುತಿ ಕಾರಿನಲ್ಲಿದ್ದವರು ಉಪ್ಪಿನಂಗಡಿ ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದರು. ಘಟನೆ ಬಗ್ಗೆ ಟೆಂಪೋ ಟ್ರಾವೆಲರ‍್ಸ್ ಚಾಲಕ ಸುಜಯ್ ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಯುವಕರು:
ಅಪಘಾತ ಸಂಭವಿಸಿ ಮಾರುತಿ ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡು ಕಾರಿನಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದು, ಸ್ಥಳೀಯರಾದ ನಿಸಾರ್, ಸುಲೈಮಾನ್, ಬಾಯಿಸ್ ಸ್ಥಳಕ್ಕೆ ಧಾವಿಸಿ ಬಂದು ಅವರನ್ನು ಹೊರ ತೆಗೆದು ನಿಸಾರ್ ಎಂಬವರು ತನ್ನ ರಿಕ್ಷಾದಲ್ಲಿ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.