14 ಗ್ರಾಪಂಗಳಲ್ಲಿ ನಿವೇಶನಕ್ಕೆ ಜಮೀನು ಮಂಜೂರು

0

ಪುತ್ತೂರು: ಚುನಾವಣಾ ಸಂದರ್ಭದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಸಲುವಾಗಿ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ನಿವೇಶನಗಳಿಗಾಗಿ ಒಟ್ಟು 14 ಗ್ರಾಪಂಗಳಲ್ಲಿ ಜಮೀನು ಕಾಯ್ದಿರಿಸಿದ್ದಾರೆ. 14 ಗ್ರಾಪಂಗಳಲ್ಲಿ ಸುಮಾರು 1000 ಮಂದಿ ನಿವೇಶನ ರಹಿತರಿಗೆ ಜಾಗವನ್ನು ಮಂಜೂರು ಮಾಡಲಿದ್ದಾರೆ. ಬನ್ನೂರು ಗ್ರಾಮದ ಪಡ್ನೂರು ಗ್ರಾ.ಪಂ ಕುಂಬಾಡು ಎಂಬಲ್ಲಿ 2.25 ಎಕ್ರೆ , ಚಿಕ್ಕಮುಡ್ನೂರು ಗ್ರಾಮದ ಅಗ್ಲಿಮಜಲು ಎಂಬಲ್ಲಿ 92 ಸೆಂಟ್ಸ್ ಹಾಗೂ 22 ಸೆಂಟ್ಸ್ ಜಮೀನಿನ ಪಹನಿ ಪತ್ರವನ್ನು ಬನ್ನೂರು ಗ್ರಾ.ಪಂ ಪಿಡಿಒರವರಿಗೆ ಶಾಸಕರು ಮೇ.12ರಂದು ಹಸ್ತಾಂತರಿಸಿದರು.

14 ಗ್ರಾಮಗಳಲ್ಲಿ ಶೀಘ್ರವೇ ನಿವೇಶನ ಹಂಚಿಕೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 14 ಗ್ರಾಮಗಳಲ್ಲಿ ಈಗಾಗಲೇ ಜಮೀನು ಕಾಯ್ದಿರಿಸಲಾಗಿದೆ. ಜಮೀನಿನ ಪಹನಿ ಪತ್ರವೂ ಸಿದ್ದವಾಗಿದ್ದು ಮುಂದೆ ಜಾಗವನ್ನು ಸೈಟ್ ಮಾಡಿ ನಿವೇಶನ ರಹಿತರಿಗೆ ನೀಡಲಾಗುತ್ತದೆ. ಬನ್ನೂರು, ಕೆದಂಬಾಡಿ, ಆರ್ಯಾಪು, ನರಿಮೊಗರು, ಪಾಣಾಜೆ, ನಿಡ್ಪಳ್ಳಿ, ಕೆಯ್ಯೂರು, ಕೊಳ್ತಿಗೆ, ಬಜತ್ತೂರು, ಬಡಗನ್ನೂರು, ಪಡುವನ್ನೂರು, ಅರಿಯಡ್ಕ, ಬಲ್ನಾಡು, ಹಾಗೂ ಬೆಟ್ಟಂಪಾಡಿ ಗ್ರಾಮಗಳಲ್ಲಿ ಈಗಾಗಲೇ ನಿವೇಶನ ಸಿದ್ದತೆ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ.

ನಿವೇಶನ ರಹಿತರು ಅರ್ಜಿ ಸಲ್ಲಿಸಬಹುದು
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರು ಆಯಾ ಗ್ರಾಪಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಿವೇಶನವೇ ಇಲ್ಲದವರು ಮೇಲೆ ತಿಳಿಸಿದ ಯಾವುದೇ ಗ್ರಾಮದಲ್ಲಿ ಬೇಕಾದರೂ ಅವಕಾಶ ಇದ್ದು ರಾಜೀವ ಗಾಂಧಿ ವಸತಿ ನಿಗಮದಡಿ ಎಲ್ಲಾ ಗ್ರಾಪಂಗಳಲ್ಲೂ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.ಅರ್ಜಿದಾರರು ಯಾವುದೇ ನಿವೇಶನ ಹೊಂದಿರುವಂತಿಲ್ಲ ಮತ್ತು ನಿವೇಶನ ರಹಿತರ ದೃಢ ಪತ್ರವನ್ನು ನಿವೇಶನ ಹಂಚಿಕೆ ವೇಳೆ ನೀಡಬೇಕಾಗುತ್ತದೆ.

ಈಗಾಗಲೇ 14 ಗ್ರಾಪಂಗಳಲ್ಲಿ ನಿವೇಶನ ಸಿದ್ದಗೊಳ್ಳುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಸಂಕಲ್ಪ ಮಾಡಿದ್ದೇನೆ. ಕೆಲವೇ ತಿಂಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಹ ಬಡವರಿಗೆ ಅಥವ ನಿವೇಶನ ರಹಿತರಿಗೆ ನಿವೇಶನ ವಿತರಣೆ ನಡೆಯಲಿದೆ. ನಿವೇಶನ ರಹಿತರು ಪುತ್ತೂರು ವಿಧಾನಸಭಾ ಕ್ಷೇತ್ರದ ಯಾವುದೇ ಗ್ರಾಪಂ ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಈ ಅವಕಾಶವನ್ನು ಬಳಸಿಕೊಳ್ಳುವಂತೆ ವಿನಂತಿಸುತ್ತಿದ್ದೇನೆ
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here