ಭಗವಾನ್ ಬುದ್ಧರ ಧರ್ಮ ಅತ್ಯಂತ ಶ್ರೇಷ್ಟ – ಅಶೋಕ್ ಕುಮಾರ್ ರೈ
ಪುತ್ತೂರು: ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮೇ.12ರಂದು ನೆಹರೂ ನಗರದ ಕಾರೆಕ್ಕಾಡ್ ಜೆಸಿ ಅಂಗನವಾಡಿ ಬಳಿ ಇರುವ ಅಂಗಣದಲ್ಲಿ ಬುದ್ಧ ಹುಣ್ಣಿಮ ಕಾರ್ಯಕ್ರಮ ಆಚರಿಸಲಾಯಿತು.
ಭಗವಾನ್ ಬುದ್ಧರಿಗೆ ದೀಪ ಬೆಳಗಿಸಿ ಸಾಮೂಹಿಕವಾಗಿ ಹೂವು ಸಮರ್ಪಿಸಿ ವಂದಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಧಮ್ಮಾಚಾರಿಯದ ನಯನ್ ಕುಮಾರ್ ಇವರು ಬೌದ್ಧ ಉಪಾಸಕ, ಉಪಾಸಿಕರೊಂದಿಗೆ ಬುದ್ಧವಂದನೆ, ತಿಸ್ಸರಣ ಹಾಗೂ ಪಂಚಶೀಲವನ್ನು ಬೋಧಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ಶಾಸಕ ಅಶೋಕ್ ಕುಮಾರ್ ರೈಯವರು ಭಗವಾನ್ ಬುದ್ಧರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಭಗವಾನ್ ಬುದ್ಧರ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಧರ್ಮವಾಗಿದ್ದು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮೀಯರಾಗಿದ್ದರು ಹಾಗೂ ಸಾಮ್ರಾಟ್ ಅಶೋಕ ಚಕ್ರವರ್ತಿಗಳು ಭಗವಾನ್ ಬುದ್ಧರಿಗೆ ಹಾಗೂ ಅವರ ಧರ್ಮಕ್ಕೆ ಶರಣಾಗಿದ್ದರು, ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಸರ್ಕಾರದ ವತಿಯಿಂದಲೇ ಬುದ್ಧ ಹುಣ್ಣಿಮೆ ನಡೆಸಲು ಈ ಬಾರಿ ಆದೇಶ ನೀಡಿದ್ದಾರೆ ಎಂದರು.

ಸೊಸೈಟಿಯ ಸಂಘಟನಾ ಕಾರ್ಯದರ್ಶಿ ಬಾಸ್ಕರ್ ವಿಟ್ಲ ಅವರು ವೈಶಾಖ ಹುಣ್ಣಿಮೆಯ ವಿಶೇಷತೆ, ಭಗವಾನ್ ಬುದ್ಧರ ಧರ್ಮದ ಮಹತ್ವ ಹಾಗೂ ಭಯ ಮುಕ್ತ ಜೀವನದ ಅಗತ್ಯದ ಬಗ್ಗೆ ತಿಳಿಸಿದರು. ಪಾಳಿ ಬಾಷೆಯನ್ನು ಕಲಿಯುವ ಅಗತ್ಯ ಹಾಗೂ ಆ ಮೂಲಕ ಭಗವಾನ್ ಬುದ್ಧರ ಉಪದೇಶಗಳನ್ನು ಅಧ್ಯಯನ ಮಾಡಲು ಸ್ಥಳೀಯವಾಗಿ ಪಾಲಿ ಬಾಷೆಯನ್ನು ಕಲಿಯುವ ಯೋಜನೆ ರೂಪಿಸುವ ಕುರಿತು ಅತಿಥಿ ಡಾ |ಪೀಟರ್ ವಿಲ್ಸನ್ ಪ್ರಬಾಕರ್ ಇವರು ತಿಳಿಸಿದರು.
ಸನ್ಮಾನ:
ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಅತಿಥಿಯಾದ ಪೀಟರ್ ವಿಲ್ಸನ್ ಪ್ರಬಾಕರ್ ಅವರನ್ನು ಸಂಘದ ವತಿಯಿಂದ ಅಧ್ಯಕ್ಷ ಗಣೇಶ್ ಕಾರೆಕ್ಕಾಡ್ ಅವರು ಸನ್ಮಾನಿಸಿದರು. ಬುದ್ಧ ಹುಣ್ಣಿಮೆ ಪ್ರಯುಕ್ತ ನಡೆಸಲಾದ ಚಿತ್ರ ಬಿಡಿಸುವ ಸ್ಪರ್ದೆ ಹಾಗೂ ಪ್ರಬಂಧ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಜಯಶ್ರೀ ನಡೆಸಿಕೊಟ್ಟರು. ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಕಾರೆಕ್ಕಾಡ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಗಣೇಶ್ ಕಾರೆಕ್ಕಾಡ್ ಸ್ವಾಗತಿಸಿದರು. ಸ್ಥಳೀಯ ಪ್ರತಿಬಾನ್ವಿತರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ರಾತ್ರಿ ಭೋಜನವನ್ನು ಹುಣ್ಣಿಮೆ ಬೆಳಕಿನಲ್ಲಿ ಸವಿಯುವ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.