ಪುತ್ತೂರು: ಅವಧಿಗೂ ಮುನ್ನವೇ ಈ ವರ್ಷದ ಮುಂಗಾರು ಮಾರುತಗಳು ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಪರಿಣಾಮ ನಿಕೋಬಾರ್ ದ್ವೀಪ ಸಮೂಹಗಳ ಬಳಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ ಎಂದು ತಿಳಿಸಿದೆ. ಮೇ.20ರ ನಂತರ ಸಾಮಾನ್ಯವಾಗಿ ಈ ಭಾಗದಲ್ಲಿ ಮುಂಗಾರು ಮಾರುತಗಳು ಕಳೆಗಟ್ಟುತ್ತಿದ್ದವು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಂಗಾಳ ಕೊಲ್ಲಿಯ ಕೇಂದ್ರ ಭಾಗವನ್ನು ಆವರಿಸುವ ಮುಂಗಾರು ಮಾರುತಗಳು ಸಂಪೂರ್ಣ ಬಂಗಾಳ ಕೊಲ್ಲಿಯನ್ನು ಸುತ್ತುವರಿದು ಅರಬ್ಬಿ ಸಮುದ್ರದ ಕಡೆಗೆ ಚಲಿಸಲಿವೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳ ಕರಾವಳಿ ಪ್ರವೇಶಿಸುತ್ತದೆ. ಈ ವರ್ಷ (2025) ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆ ಸುರಿಸಲಿದೆ ಎಂದು ಐಎಂಡಿ ಈಗಾಗಲೇ ಮುನ್ಸೂಚನೆ ನೀಡಿದೆ.