ಸರಕಾರಿ ಪ್ರ.ದರ್ಜೆ ಮಹಿಳಾ ಕಾಲೇಜಿನಲ್ಲಿ ‘ನಮ್ಮವರೊಡನೆ’ ವಿನೂತನ ಕಾರ್ಯಕ್ರಮ

0

ಹೊಸ ಕಟ್ಟಡದಲ್ಲಿ ಪುತ್ತೂರಿನ ಮಹಿಳಾ ಕಾಲೇಜು ಊರಿಗೆ ಹೊಸತನವನ್ನು ತರಲಿ-ಪ್ರೊ| ಝೇವಿಯರ್ ಡಿಸೋಜ

ಪುತ್ತೂರು: ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇನ್ನು ಕೆಲವೇ ಕಾಲದಲ್ಲಿ ಬೊಳುವಾರಿನಲ್ಲಿರುವ ತನ್ನ ಸ್ವಂತ ಆಧುನಿಕ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈಗಾಗಲೇ ಹತ್ತು ವರ್ಷಗಳನ್ನು ಕಂಡು ಹಲವು ಸೀಮಿತತೆಗಳ ನಡುವೆ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಈ ಕಾಲೇಜು ಹೊಸ ಕಟ್ಟಡದಲ್ಲಿ ಹೊಸ ಕೋರ್ಸ್ ಗಳನ್ನು ಆಧುನಿಕವಾಗಿ ಮುಂದುವರೆದು ತಾಲೂಕಿನ ಹಾಗೂ ಹೊರಗಿನ ಬಡ ಹಿಂದುಳಿದ ವಿದ್ಯಾರ್ಥಿಗಳಿಗೆ  ಪ್ರಗತಿಶೀಲವಾದ ಶಿಕ್ಷಣ ಯೋಜನೆಗಳನ್ನು ನೀಡಿ ಜನಪ್ರಿಯವಾಗಲಿ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೊ| ಝೇವಿಯರ್ ಡಿ’ಸೋಜರವರು ಹೇಳಿದರು. 

ಅವರು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ನಮ್ಮವರೊಡನೆ’ ಎಂಬ ವಿನೂತನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ನಮ್ಮವರೊಡನೆ ಎನ್ನುವುದು ಕಾಲೇಜಿನ ಐಕ್ಯುಏಸಿ ಘಟಕವು ಸಂಯೋಜಿಸಿದ ಕಾಲೇಜು ಬದುಕಿಗೆ ಸಂಬಂಧಪಟ್ಟ ಎಲ್ಲಾ ವಿವಿಧ ಸಂಘಟನೆಗಳ ಸದಸ್ಯರ ಅಥವಾ ಪದಾಧಿಕಾರಿಗಳ ಸಮಾಲೋಚನಾ ಸಭೆಯಾಗಿತ್ತು.

ಕಾಲೇಜಿನ ನೂತನ ಕಟ್ಟಡದ ಕಂಟ್ರಾಕ್ಟರ್ ಆಸಿಫ್ ಮಾತನಾಡಿ, ಮುಂದಿನ ಐದು ತಿಂಗಳುಗಳಲ್ಲಿಯೇ ಮೊದಲ ಹಂತದ ಕಟ್ಟಡ ಸಿದ್ದಗೊಳ್ಳುವುದು ಹಾಗೂ ಕಾಲೇಜಿನ ಈಗಿನ ತರಗತಿಗಳ ಅಗತ್ಯ ಅದರಿಂದ ಪೂರ್ತಿಯಾಗುವುದೆಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಪ್ರೇಮಲತಾರವರು ಮಾತನಾಡಿ, ನಮ್ಮ ಕಾಲೇಜು ಪುತ್ತೂರು ತಾಲೂಕಿಗೆ ಹೆಸರಾಂತವಾಗುವ ಕಾಲೇಜ್ ಆಗಿ ಬೆಳೆಯಬೇಕು. ಹೊಸ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸವಲತ್ತುಗಳು ಸಿಗುವುದು. ಕಾಲೇಜಿನ ನಿರಂತರ ಅಭಿವೃದ್ಧಿಯಲ್ಲಿ ಎಲ್ಲಾ ಪೋಷಕರು, ಊರವರು ಕೈಸೇರಿಸಿ ದುಡಿಯುವೆವು ಎಂದು ತಿಳಿಸಿದರು.

ಪುತ್ತೂರು ನಗರಪಾಲಿಕೆ ಸದಸ್ಯೆ ಯಶೋಧ ಎಸ್ ಮಾತನಾಡಿ, ಒಂದು ಸರ್ಕಾರಿ ಕಾಲೇಜ್ ಆದರೂ ಇಲ್ಲಿ ಟೈಲರಿಂಗ್ ಕಂಪ್ಯೂಟರ್ ಶಿಕ್ಷಣ, ಮುಂತಾದವುಗಳನ್ನು ತೀರಾ ಕಡಿಮೆ ವೆಚ್ಚದಲ್ಲಿ ಒದಗಿಸಲಾಗುತ್ತಿರುವುದು  ಸಂತೋಷದ ವಿಷಯ. ಇದರೊಡನೆ ಇನ್ನಷ್ಟು ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆ ಮಾಡುವ. ಆದಷ್ಟು ಬೇಗ ಹೊಸ ಕಟ್ಟಡವಾಗಲಿ ಅದು ನಮ್ಮ ವಿದ್ಯಾರ್ಥಿಗಳ ವೃತ್ತಿ ಅಗತ್ಯಗಳನ್ನು ಪೂರೈಸಲಿ ಎಂದು ಶುಭ ಹಾರೈಸಿದರು.

ಸಿಡಿಸಿ ಸದಸ್ಯರಾದ ರಾಘವೇಂದ್ರರವರು ಕಾಲೇಜು ಬೇರೆ ಬೇರೆ ಉದ್ಯಮ ಸಂಸ್ಥೆಗಳೊಡನೆ ಸಂಪರ್ಕ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗಗಳ ಅವಕಾಶವನ್ನು ಒದಗಿಸುವಂತಾಗಬೇಕು ಎಂದು ತಿಳಿಸಿದರು. 

ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಚನಿಯಪ್ಪ ನಾಯ್ಕರವರು ಮಾತನಾಡಿ, ಈ ಕಾಲೇಜಿನಲ್ಲಿ ತೀರಾ ಬಡ ಹಿನ್ನೆಲೆಯಿಂದ ಬಂದವರಿಗೂ ಕೂಡ ಉತ್ತಮ ಶಿಕ್ಷಣ ಲಭಿಸುತ್ತದೆ. ಬಡ ವರ್ಗದ ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ಆಶಾಕಿರಣ. ಈ ಕಾಲೇಜು ಆದಷ್ಟು ಶೀಘ್ರದಲ್ಲಿ ಹೊಸ ಕಟ್ಟಡಕ್ಕೆ ಹೋಗಲಿ ಹಾಗೂ ಬಡ ಮಕ್ಕಳು ಕೂಡ ಸರ್ಕಾರದ ಸವಲತ್ತುಗಳನ್ನು ಸೂಕ್ತವಾಗಿ ಬಳಸುವಂತಾಗಲಿ ಎಂದು ಹಾರೈಸಿದರು. 

ಕಾಲೇಜಿನ ಹೊಸ ಕಟ್ಟಡದ  ಹತ್ತಿರದ ನಿವಾಸಿ ಹಾಗೂ  ಉದ್ಯಮಿ ಆಸ್ಕರ್ ಆನಂದ್ ಮಾತನಾಡಿ, ನಿರ್ಮಾಪಕರು ಕಾಲೇಜಿನ ಕೆಲಸವನ್ನು ತ್ವರಿತ ಗತಿಯಿಂದ ನಡೆಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಉತ್ತಮ ರೀತಿಯಲ್ಲಿ ಕಟ್ಟಡ ಸಿದ್ದವಾಗುವ ನಿರೀಕ್ಷೆ ಇದೆ. ಕೊಂಬೆಟ್ಟು ಸರ್ಕಾರಿ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು ಈಗ ಸರ್ಕಾರಿ ಕಾಲೇಜು ಆರಂಭವಾಗಿ ನಾವು ಸಾವಿರಾರು ವಿದ್ಯಾರ್ಥಿಗಳನ್ನು ಕಾಣುವಂತಾಗಲಿ ಎಂದು ಹಾರೈಸಿದರು. 

ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಪ್ರೊ.ನಂದ ಕಿಶೋರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಉತ್ತಮ ವೃತ್ತಿ ಮಾರ್ಗದರ್ಶನ ನೀಡಿದ ಫಲವಾಗಿ ಈ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಕಾಲೇಜು ಐಕ್ಯೂಏಸಿ ಘಟಕದ ಸಂಯೋಜಕರಾದ ಪ್ರೊ| ಸ್ಟೀವನ್ ಕ್ವಾಡ್ರಸ್ ಕಾರ್ಯಕ್ರಮವನ್ನು ಸಂಯೋಜಿಸಿ, ಕಾಲೇಜಿನಲ್ಲಿ ಇದು ಈ ರೀತಿಯ ಮೊದಲ ಕಾರ್ಯಕ್ರಮ, ಗುಣಮಟ್ಟ ಭರವಸೆಗಾಗಿ ಇಂತಹ ಕಾರ್ಯಕ್ರಮಗಳನ್ನು ಇನ್ನು ಮುಂದೆಯೂ ಸಂಯೋಜಿಸಲಾಗುವುದೆಂದು ಅವರು ತಿಳಿಸಿದರು. ವಿದ್ಯಾರ್ಥಿನಿಯರಾದ ಭೂಮಿಕ ಹಾಗೂ ಪವಿತ್ರ ಪ್ರಾರ್ಥನಾ ಕಾರ್ಯಕ್ರಮ ನಡೆಸಿಕೊಟ್ಟರು.

ಹೊಸ ಕಟ್ಟಡದಲ್ಲಿ ಆಧುನಿಕ ಕಾಲಕ್ಕೆ ಅಗತ್ಯವಾದ ತರಬೇತಿಗಳು ಆರಂಭ..
ಹೊಸ ಕಟ್ಟಡಕ್ಕೆ ಹೋದ ಮೇಲೆ ಆಧುನಿಕವಾದ ತರಬೇತಿಗಳನ್ನು ಮುಖ್ಯವಾಗಿ ಸಿಎ, ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯೋಗ ಸಿದ್ಧತೆಗಾಗಿ ಬ್ರಿಜ್ ಕೋರ್ಸ್, ಕಾಲೇಜು  ಬಿಸಿಎ, ಬಿಬಿಎ, ಬಿ ಎಸ್ ಸಿ,  ಬಿಕಾಂ ವೊಕೇಶನಲ್, ಮುಂತಾದ ಆಧುನಿಕ ಕಾಲಕ್ಕೆ ಅಗತ್ಯವಾದ ತರಬೇತಿಗಳನ್ನು ಆರಂಭಿಸಲಾಗುವುದು.
-ಪ್ರೊ|ಗೋಪಾಲಕೃಷ್ಣ ಕೆ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು

LEAVE A REPLY

Please enter your comment!
Please enter your name here