ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಹಿರೇಬಂಡಾಡಿ ರಸ್ತೆಯ ಕ್ರಾಸ್ ಬಳಿ ಹೆದ್ದಾರಿಯನ್ನು ಅಗೆದಿದ್ದು, ಇದರಿಂದ ಹೆದ್ದಾರಿಯಿಂದ ಹಿರೇಬಂಡಾಡಿ ರಸ್ತೆಯಲ್ಲಿ ತೆರಳುವವರು ಸುಮಾರು ಅರ್ಧ ಕಿ.ಮೀ.ನಷ್ಟು ಸುತ್ತು ಬಳಸಿ ಹಿರೇಬಂಡಾಡಿ ರಸ್ತೆ ಪ್ರವೇಶಿಸುವ ಅನಿವಾರ್ಯತೆ ಎದುರಾಗಿತ್ತು. ಇಲ್ಲಿನ ಸಮಸ್ಯೆಯನ್ನು ಮನಗಂಡ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅವರು ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಗೆ ಸಮಸ್ಯೆಯನ್ನು ಮನವರಿಕೆ ಮಾಡಿದ ಬಳಿಕ ಸಮಸ್ಯೆಗೆ ಪರಿಹಾರ ದೊರಕಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಹಿರೇಬಂಡಾಡಿ ರಸ್ತೆಯ ಕ್ರಾಸ್ ಬಳಿ ಹೆದ್ದಾರಿಯನ್ನು ಅಗೆಯಲಾಗಿತ್ತು. ಇದರಿಂದ ಹೆದ್ದಾರಿಯಿಂದ ನೇರವಾಗಿ ಹಿರೇಬಂಡಾಡಿ ರಸ್ತೆಗೆ ತಿರುವು ಪಡೆಯಲಾಗದೇ ಸುಮಾರು ಅರ್ಧ ಕಿ.ಮೀ.ನಷ್ಟು ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುತ್ತು ಬಳಸಿ ತೆರಳಿ ಹಿರೇಬಂಡಾಡಿ ರಸ್ತೆಗೆ ತಿರುವು ಪಡೆಯಬೇಕಿತ್ತು. ಕಳೆದ ಸುಮಾರು 10 ದಿನಗಳಿಂದ ಈ ಸಮಸ್ಯೆ ಇದ್ದು, ಹಿರೇಬಂಡಾಡಿ ರಸ್ತೆಯ ಮೂಲಕ ತೆರಳುವವರು ಸಮಸ್ಯೆಯನ್ನು ಅನುಭವಿಸಬೇಕಿತ್ತು. ಇದನ್ನು ಮನಗಂಡ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅವರು ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥಾಪಕರಾದ ರಘುನಾಥ ರೆಡ್ಡಿ ಅವರ ಹಾಗೂ ಮಲ್ಲೇಶ್ ಅವರನ್ನು ಸ್ಥಳಕ್ಕೆ ಕರೆಯಿಸಿ ಇಲ್ಲಿನ ವಾಸ್ತವಾಂಶವನ್ನು ವಿವರಿಸಿದ್ದರು. ಕೂಡಲೇ ಸ್ಪಂದಿಸಿದ ಗುತ್ತಿಗೆದಾರ ಸಂಸ್ಥೆಯವರು ಹೆದ್ದಾರಿಯಿಂದ ಹಿರೇಬಂಡಾಡಿ ರಸ್ತೆಗೆ ನೇರ ಸಂಪರ್ಕ ಪಡೆಯುವಂತೆ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿಕೊಟ್ಟು, ಸಮಸ್ಯೆಗೆ ಪರಿಹಾರ ಕಲ್ಪಿಸಿದರು.
ಈ ಸಂದರ್ಭ ಪ್ರಶಾಂತ್ ಡಿಕೋಸ್ತರೊಂದಿಗೆ ಸಾಮಾಜಿಕ ಕಾರ್ಯಕರ್ತ ಪಿ. ನಾಗೇಶ ಪ್ರಭು ಇದ್ದರು.