ಪಂಚೇರಿನಲ್ಲಿ ರೋಡ್ ‘ತೋಡಾ’ಗುವ ಭೀತಿ
ಉಪ್ಪಿನಂಗಡಿ: ಪೆರಿಯಡ್ಕ – ಹಿರೇಬಂಡಾಡಿ ಸಂಪರ್ಕ ರಸ್ತೆಯ ಪಂಚೇರು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಎತ್ತರದ ಪ್ರದೇಶದಲ್ಲಿರುವ ತನ್ನ ಜಾಗದಲ್ಲಿದ್ದ ಚರಂಡಿಯನ್ನು ರಸ್ತೆಗೆ ತಿರುಗಿಸಿ ಬಿಟ್ಟಿದ್ದು, ಇದರಿಂದ ಮಣ್ಣು ಸಹಿತ ನೀರೆಲ್ಲಾ ರಸ್ತೆಗೆ ನುಗ್ಗಿ ಸಂಚಾರಕ್ಕೆ ತೊಡಕಾಗಲಿದೆ ಎಂಬ ದೂರು ಉಪ್ಪಿನಂಗಡಿಯ ಗ್ರಾ.ಪಂ.ನ ವಿಪತ್ತು ನಿರ್ವಹಣಾ ಸಭೆಯಲ್ಲಿ ಕೇಳಿ ಬಂತು.

ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಮೇ.15ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಪಂಚೇರು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಎತ್ತರದ ಪ್ರದೇಶದಲ್ಲಿದ್ದ ತನ್ನ ಜಾಗದಲ್ಲಿದ್ದ ಚರಂಡಿಯನ್ನು ಅವೈಜ್ಞಾನಿಕವಾಗಿ ರಸ್ತೆಯತ್ತ ತಿರುಗಿಸಿ ಬಿಟ್ಟಿದ್ದಾರೆ. ಅಲ್ಲಿ ಗುಡ್ಡದ ಮಣ್ಣು ಜರಿಯುತ್ತಿದ್ದು, ಇದರಿಂದಾಗಿ ಕಳೆದ ಮಳೆಗಾಲದಲ್ಲಿ ಈ ಚರಂಡಿಯಲ್ಲಿ ಮಣ್ಣು ಸಹಿತ ನೀರೆಲ್ಲಾ ರಸ್ತೆಗೆ ನುಗ್ಗಿ ಸಂಚಾರಕ್ಕೆ ತೊಡಕಾಗಿತ್ತದೆ, ರಸ್ತೆಯ ಇನ್ನೊಂದು ಬದಿ ಕೆಳ ಪ್ರದೇಶದಲ್ಲಿರುವ ತೋಟಕ್ಕೆ ಮಣ್ಣು, ನೀರು ನುಗ್ಗಿತ್ತು. ಈ ಬಾರಿ ತೋಟಕ್ಕೆ ನೀರು ನುಗ್ಗದಂತೆ ಆ ಭಾಗಕ್ಕೂ ಮಣ್ಣು ಹಾಕಿ ಎತ್ತರಿಸಲಾಗಿದ್ದು, ಇದರಿಂದಾಗಿ ಈ ಬಾರಿ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ನಿಂತುಕೊಂಡು ಸಂಚಾರ ಕಷ್ಟಸಾಧ್ಯವಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಅವರು ಅಲ್ಲಿನ ಪರಿಸ್ಥಿತಿಯನ್ನು ಸಭೆಯ ಮುಂದಿಟ್ಟಲ್ಲರಲ್ಲದೆ, ಈ ಬಾರಿ ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಸಂಚರಿಸಲು ಬೋಟ್‌ನ ವ್ಯವಸ್ಥೆ ಮಾಡಬೇಕಷ್ಟೇ. ಅಂತಹ ಪರಿಸ್ಥಿತಿ ಅಲ್ಲಿ ಎದುರಾಗಿದೆ. ಆದ್ದರಿಂದ ಗ್ರಾ.ಪಂ. ಪಿಡಿಒ, ವಿಎ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಚರಂಡಿಯನ್ನು ರಸ್ತೆ ಬದಿಗೆ ತಿರುಗಿಸಿ ಕೊಟ್ಟ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಆಗ ಉತ್ತರಿಸಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಸಭೆ ಮುಗಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸೋಣ ಎಂದರು.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ, ಗ್ರಾ.ಪಂ. ಬಗೆ ಹರಿಸಬಹುದಾದ ಸಮಸ್ಯೆಯನ್ನು ಗ್ರಾ.ಪಂ. ಬಗೆಹರಿಸಲಿದೆ. ಇನ್ನು ಬೇರೆ ಇಲಾಖೆಗಳ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇ.17ರಂದು ಉಪ್ಪಿನಂಗಡಿ ಆಗಮಿಸಲಿದ್ದು, ಅಂದು ಎಸಿ, ತಾ.ಪಂ. ಇಒ ಅವರು ಬರಲಿದ್ದಾರೆ. ಆದ್ದರಿಂದ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಂದು ಅವರ ಗಮನ ಸೆಳೆಯೋಣ ಎಂದರು.
ಕೆಲವು ಕಡೆಗಳಲ್ಲಿ ಖಾಸಗಿ ಜಾಗಗಳಲ್ಲಿರುವ ಮರ- ಗಿಡಗಳ ಗೆಲ್ಲುಗಳು ರಸ್ತೆಗೆ ಬಾಗಿದ್ದು, ಇದರ ತೆರವಿಗೆ ಗ್ರಾ.ಪಂ.ನಿಂದ ನೊಟೀಸ್ ನೀಡಲು ನಿರ್ಧರಿಸಲಾಯಿತು. ಪುಳಿತ್ತಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರಿನ ಸಿಮೆಂಟ್ ಟ್ಯಾಂಕ್ ಸೋರಿಕೆಯಾಗುತ್ತಿರುವ ಬಗ್ಗೆ ಈ ಸಂದರ್ಭ ಸಭೆಯ ಗಮನ ಸೆಳೆಯಲಾಯಿತು. ಪದಾಳ ಹಾಗೂ ಮರಿಕೆ ಕಾಲನಿಯಲ್ಲಿ ಧರೆ ಕುಸಿತದ ಭೀತಿ ಇರುವ ಬಗ್ಗೆ ಸದಸ್ಯ ಲೊಕೇಶ್ ಬೆತ್ತೋಡಿ ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಧನಂಜಯ, ಯು.ಟಿ. ತೌಸೀಫ್, ವನಿತಾ, ಉಷಾ ನಾಯ್ಕ ಅಬ್ದುರ್ರಶೀದ್, ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿ ಜಂಗಪ್ಪ, ಗ್ರಾಮಸ್ಥ ಉದಯಶಂಕರ ಭಟ್ಟ ಪದಾಳ, ಆರೋಗ್ಯ, ಅರಣ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ಶೇಖರ್ ಸ್ವಾಗತಿಸಿ, ವಂದಿಸಿದರು.
ಕಿಂಡಿ ಅಣೆಕಟ್ಟು ಬಗ್ಗೆ ನಿರ್ಲಕ್ಷ್ಯ
ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಸುವ ಮೂಲ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉಪ್ಪಿನಂಗಡಿ ಗ್ರಾಮದ ಪಂಚೇರು ಮತ್ತು ನಾಲಾಯದ ಗುಂಡಿ ಎಂಬಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದ ಜನರ ಪ್ರಯೋಜನಕ್ಕೆ ಲಭಿಸುತ್ತಿಲ್ಲ ಎಂಬ ದೂರು ಸಭೆಯಲ್ಲಿ ಕೇಳಿ ಬಂದಾಗ ಪ್ರತಿಕ್ರಿಯಿಸಿದ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಈ ಬಗ್ಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ತೀರಾ ನಿರ್ಲಕ್ಷ್ಯ ತೋರುತ್ತಿದೆ. ಈ ಬಾರಿಯ ಬೇಸಿಗೆಯಲ್ಲಿ ಈ ಎರಡು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಿ ನೀರು ನಿಲ್ಲಿಸುವ ಕಾರ್ಯವಾಗಿಲ್ಲ. ಅದು ಕೂಡ ಅದಕ್ಕಿಂತ ಮೊದಲ ಬಾರಿ ಕಿಂಡಿ ಅಣೆಕಟ್ಟಿಗೆ ಜೋಡಿಸಿದ ಹಲಗೆಗಳಲ್ಲಿ ಕೆಲವನ್ನು ತೆಗೆಯದೇ ಹಾಗೇ ಬಿಡಲಾಗಿದೆ. ಇದರಿಂದ ಎರಡು ವರ್ಷದ ಹಿಂದೆ ತರಿಸಲಾದ ಹೊಸ ಹಲಗೆಗಳು ಸಂಪೂರ್ಣ ನಾಶವಾಗುವಂತಾಗಿದೆ. ಇದರ ನಿರ್ವಹಣೆಗೆ ಗ್ರಾ.ಪಂ. ಸದಸ್ಯರು, ಆ ಪರಿಸರದ ಜನರನ್ನು ಸೇರಿಸಿಕೊಂಡು ಸಮಿತಿ ಮಾಡಿ ಎಂದು ನಾವೆಷ್ಟು ಹೇಳಿದರೂ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತವಾಗುತ್ತಿಲ್ಲ. ಈ ಬಾರಿಯಂತೂ ಈ ಎರಡೂ ಕಿಂಡಿ ಅಣೆಕಟ್ಟುಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದ್ದು, ಇದಕ್ಕೆ ಈಗಿನ ಎಂಜಿನಿಯರ್ ರವಿಚಂದ್ರ ಅವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆರಳೆಣಿಕೆಯ ಮಂದಿ ಭಾಗಿ
ಪ್ರವಾಹ ಪೀಡಿತ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ನಡೆದ ಗ್ರಾ.ಪಂ.ನ ವಿಪತ್ತು ನಿರ್ವಹಣಾ ಸಭೆಯಲ್ಲಿ ಗ್ರಾಮದ ಬೆಟ್ಟದಷ್ಟು ಸಮಸ್ಯೆಗಳು ಪ್ರಸ್ತಾಪವಾಗಬೇಕಿದ್ದರೂ, ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕೂಡಾ 10ನ್ನು ದಾಟಿರಲಿಲ್ಲ. ಗ್ರಾಮಸ್ಥರಿಗಿಂತ ಇಲಾಖಾ ವತಿಯಿಂದ ಬಂದ ಆಶಾ ಕಾರ್ಯಕರ್ತರೇ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಇನ್ನೊಂದೆಡೆ ಮೂರ‍್ನಾಲ್ಕು ಇಲಾಖೆಯ ಅಧಿಕಾರಿಗಳನ್ನು ಬಿಟ್ಟರೆ, ಉಳಿದ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಜರಿಯಾಗಿ ಸಭೆಯನ್ನು ನಿರ್ಲಕ್ಷಿಸಿದಂತಿತ್ತು. ಮತ್ತೊಂದೆಡೆ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ 20 ಮಂದಿ ಸದಸ್ಯರಿದ್ದರೂ, ಸಭೆಯಲ್ಲಿ ಏಳು ಸದಸ್ಯರು ಮಾತ್ರ ಕಾಣಿಸಿಕೊಂಡರು. ಇದರಿಂದಾಗಿ ಕೆಲವೊಂದು ಸಮಸ್ಯೆಗಳು ಮಾತ್ರ ಸಭೆಯಲ್ಲಿ ಪ್ರಸ್ತಾಪವಾಗಿ, ಆರಂಭವಾದ ಸುಮಾರು ಅರ್ಧಗಂಟೆಯಲ್ಲೇ ಸಭೆ ಮುಗಿಯುವಂತಾಯಿತು.