ನೆಲ್ಯಾಡಿ: ಸುಳ್ಯ-ಪೈಚಾರು-ಸವಣೂರು-ನೆಲ್ಯಾಡಿ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಪುತ್ಯೆ ಎಂಬಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನ ಸವಾರರು ಬದಲಿ ರಸ್ತೆ ಮೂಲಕ ಸಂಚಾರ ಮಾಡುವಂತೆ ಜಿಲ್ಲಾಧಿಕಾರಿಯವರು ಮೇ 15ರಂದು ಆದೇಶಿಸಿದ್ದಾರೆ. ಲಘು ವಾಹನಗಳು ನೆಲ್ಯಾಡಿ-ಪಡಡ್ಡ ಮೂಲಕ ಹಾಗೂ ಘನ ವಾಹನಗಳು ನೆಲ್ಯಾಡಿ-ಪೆರಿಯಶಾಂತಿ ಮಾರ್ಗವಾಗಿ ಸಂಚಾರ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ನೆಲ್ಯಾಡಿ-ಕೊಕ್ಕಡ ಮಧ್ಯೆ ಪುತ್ಯೆ ಎಂಬಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮೇ.1ರಿಂದ ಜೂ.15ರ ತನಕ (ಒಂದುವರೆ ತಿಂಗಳು) ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕಾಗುತ್ತದೆ. ಆದ್ದರಿಂದ ನೆಲ್ಯಾಡಿ ಪೇಟೆಯಿಂದ ಕೊಕ್ಕಡ ಕಡೆಗೆ ಬರುವ ಮತ್ತು ಹೋಗುವ ವಾಹನಗಳಿಗೆ ಬದಲಿ ರಸ್ತೆಯಾದ ಪಡ್ಡಡ್ಕ-ನೆಲ್ಯಾಡಿ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಂಡು ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡುವಂತೆ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕೋರಿಕೆಯಂತೆ ಬದಲಿ ರಸ್ತೆಯಾದ ಪಡ್ಡಡ್ಕ-ನೆಲ್ಯಾಡಿ ಮಾರ್ಗದ ಮೂಲಕ ವಾಹನಗಳು ಸಂಚರಿಸುವ ಬಗ್ಗೆ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಂದ ಹಾಗೂ ಕೌಕ್ರಾಡಿ ಗ್ರಾ.ಪಂ.ಪಿಡಿಒ ಅವರಿಂದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ವರದಿ ಕೇಳಿದ್ದರು.
ನೆಲ್ಯಾಡಿ-ಪಡಡ್ಕ ಬದಲಿ ರಸ್ತೆಯು ಅಗಲ ಕಿರಿದಾಗಿದ್ದು ಲಘು ವಾಹನಗಳ ಸುಗಮ ಸಂಚಾರಕ್ಕೆ ಮಾತ್ರ ಸೂಕ್ತವಾಗಿರುವುದು ಕಂಡು ಬರುತ್ತದೆ. ಆದ್ದರಿಂದ ಘನವಾಹನಗಳು ನೆಲ್ಯಾಡಿ-ಪೆರಿಯಶಾಂತಿ ಮಾರ್ಗವಾಗಿ ನೆಲ್ಯಾಡಿ-ಕೊಕ್ಕಡ ಕಡೆಗೆ ಸಂಚರಿಸುವುದು ಸೂಕ್ತವಾಗಿರುವುದು ಕಂಡು ಬಂದಿರುತ್ತದೆ ಎಂದು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ನೆಲ್ಯಾಡಿ-ಪಡಡ್ಕ ರಸ್ತೆಯು ಲಘು ವಾಹನ ಸಂಚಾರಕ್ಕೆ ಸೂಕ್ತವಾಗಿದೆ. ಘನ ವಾಹನಗಳು ನೆಲ್ಯಾಡಿ-ಪೆರಿಯಶಾಂತಿ-ಕೊಕ್ಕಡ ಮಾರ್ಗದಲ್ಲಿ ಸಂಚರಿಸುವಂತೆ ಕೌಕ್ರಾಡಿ ಗ್ರಾ.ಪಂ.ನಿಂದ ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ. ಈ ಬಗ್ಗೆ ಪುತ್ತೂರು ಉಪವಿಭಾಗದ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಅವಲೋಕಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಈ ಆದೇಶ ಹೊರಡಿಸಿದ್ದಾರೆ.