ಪುತ್ತೂರು: ಡಾ. ನಿನಾದ್ ಲಸ್ರಾದೋ ಅವರು ಫೋರ್ಬ್ಸ್ ಮ್ಯಾಗಜಿನ್ ಎತಿಯಾ 2025 ಆವೃತ್ತಿಯಲ್ಲಿ 30 ವರುಷಗಳ ಒಳಗಿನ 30 ಜಾಗತಿಕ ಯುವ ವಿಜ್ಞಾನಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.
ಡಾ. ನಿನಾದ್ ಲಸ್ರಾದೋ ಪಿ.ಹೆಚ್.ಡಿ ಪದವಿಯನ್ನು 24ನೇ ವಯಸ್ಸಿನಲ್ಲಿ ಅಮೇರಿಕಾದ ನೆಬ್ರಾಸ್ಕ ವಿಶ್ವವಿದ್ಯಾನಿಲಯದಲ್ಲಿ ವೈರಲ್ ಇಮ್ಯುನೋಲಜಿಯಲ್ಲಿ ಪಡೆದ ನಂತರ ಹಾರ್ವಾರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಸಂಶೋಧನೆಯನ್ನು ಮುಂದುವರಿಸಿರುತ್ತಾರೆ. ಇವರ 20ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ವೈಜ್ಞಾನಿಕ ಜರ್ನಲ್‌ಗಳಲ್ಲಿ ಪ್ರಕಟಿಗೊಂಡಿವೆ. ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿ ಮತ್ತು ಫೆಲೋಶಿಪ್‌ಗಳನ್ನು ಪಡೆದಿರುವ ಅವರ ನೇತೃತ್ವದ ತಂಡ ಕೊರೋನಾ ರೋಗದ ಸಂದರ್ಭದಲ್ಲಿ ನಡೆಸಿದ ಸಂಶೋಧನೆಗೆ ಅಮೇರಿಕಾದ ಶ್ವೇತಭವನದಿಂದ ಪ್ರಶಂಸೆಯನ್ನು ಪಡೆದಿದ್ದರು.
ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸುದಾನ ವಸತಿಯುತ ಶಾಲೆ, ಪಿ.ಯು.ಸಿ. ವಿದ್ಯಾಭ್ಯಾಸವನ್ನು ಅಂಬಿಕಾ ಪದವಿ ಪೂರ್ವ ಕಾಲೇಜು ಮತ್ತು ಪದವಿಯನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಪಡೆದಿರುವ ಡಾ. ನಿನಾದ್ ಲಸ್ರಾದೋರವರು, ಪ್ರಸ್ತುತ ನೆಹರೂನಗರದ ನಿವಾಸಿ, ವಿಟ್ಲ ಮೂಲದ ಸ್ಟೆಲ್ಲಾ ಸಿಕ್ವೇರಾ ಹಾಗೂ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಹೆಚ್.ಆರ್. ಲಸ್ರಾದೋ ಇವರ ಪುತ್ರ.