ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಕಾರ್ಮಿಕನೋರ್ವ ಶಿರಾಡಿ ಘಾಟ್ ಪ್ರದೇಶದಲ್ಲಿ ಮೂತ್ರ ವಿಸರ್ಜನೆಯ ನೆಪದಲ್ಲಿ ಇಳಿದಾತ ಓಡಿ ಹೋಗಿ ಕಣ್ಮರೆಯಾದ ಬಗ್ಗೆ ಬಸ್ಸಿನ ನಿರ್ವಾಹಕ ಉಪ್ಪಿನಂಗಡಿ ಪೊಲೀಸರ ಮೊರೆ ಹೋದ ಘಟನೆ ಮೇ.14ರ ತಡ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಮಧ್ಯಪ್ರದೇಶದ ಕಾರ್ಮಿಕರ ತಂಡವೊಂದು ಪ್ರಯಾಣಿಸುತ್ತಿತ್ತು. ಪುತ್ತೂರಿನ ಸಂಸ್ಥೆಯೊಂದರಲ್ಲಿ ದುಡಿಯಲು ಆಗಮಿಸುತ್ತಿದ್ದ ಈ ತಂಡದಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದ ಶ್ರೀಪಾಲ್ ನರ್ರೆ (37ವ) ಎಂಬಾತ ಶಿರಾಡಿ ಘಾಟ್ ಪ್ರವೇಶಿಸುತ್ತಿದ್ದಂತೆಯೇ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸುತ್ತಿದ್ದ. ಮೂತ್ರ ವಿಸರ್ಜನೆಯ ಕಾರಣಕ್ಕೆ ಈತ ವಿನಂತಿಸುತ್ತಿದ್ದಾನೆಂದು ಭಾವಿಸಿದ ಬಸ್ಸಿನ ನಿರ್ವಾಹಕ ಬಸ್ಸನ್ನು ನಿಲ್ಲಿಸುತ್ತಿದ್ದಂತೆಯೇ ಬಸ್ಸಿನಿಂದ ಇಳಿದವನೇ ಹೆದ್ದಾರಿಯಲ್ಲಿ ಹಿಂದಕ್ಕೆ ಓಡಿ ಕಣ್ಮರೆಯಾಗಿದ್ದಾನೆಂದು, ಒಂದಷ್ಟು ಹೊತ್ತು ಈತನಿಗಾಗಿ ಕಾದು ಆತ ಹಿಂದಿರುಗದೇ ಇದ್ದ ಕಾರಣಕ್ಕೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದು, ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳ ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಾಗಿದ್ದು, ಉಪ್ಪಿನಂಗಡಿ ಪೊಲೀಸರಿಗೆ ಕಣ್ಮರೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಗ್ಗಂಟಾಗಿತ್ತು. ಆದಾಗ್ಯೂ ಕಣ್ಮರೆಯಾದ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತಿತರ ಮಾಹಿತಿಯನ್ನು ಸಂಗ್ರಹಿಸಿ, ಬಸ್ಸನ್ನು ಪ್ರಯಾಣ ಮುಂದುವರೆಸಲು ಅನುವು ಮಾಡಿಕೊಟ್ಟರು.
ಮಧ್ಯ ಪ್ರದೇಶದ ಚಿಂದ್ವಾರ ಜಿಲ್ಲೆ, ಅಮರ್ವಾರ ಉಪವಿಭಾಗದ, ಗೋಗ್ರಿ ಗ್ರಾಮದ ಕೊಪ್ಪ್ಕೇಡಾ ನಿವಾಸಿ ಜಗತ್ ರಾಮ್ ನರ್ರೆ ಎಂಬವರ ಮಗನಾದ ಈ ಕಾರ್ಮಿಕನ ಅವಾಂತರದಿಂದಾಗಿ ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯ ಪ್ರಯಾಣಿಕರೆಲ್ಲರೂ ಸಕಾಲದಲ್ಲಿ ಮನೆ ತಲುಪಲಾಗದೆ ಸಂಕಷ್ಠಕ್ಕೀಡಾಗುವಂತಾಗಿತ್ತು.