ಪುತ್ತೂರು: ವಾರ್ತಾಭಾರತಿ ದೈನಿಕದ ಹೆಸರು ಮತ್ತು ‘ಆಪರೇಷನ್ ಸಿಂದೂರ್’ ಹೆಸರು ಸೇರಿಸಿ ಸುಳ್ಳು ಹಾಗು ಪ್ರಚೋದನಾಕಾರಿ ಮಾಹಿತಿ ಹರಡುತ್ತಿರುವ ಮೂವರು ಹಾಗು newsputtur.com ವೆಬ್ಸೈಟ್ ವಿರುದ್ಧ ವಾರ್ತಾಭಾರತಿ ಪತ್ರಿಕೆಯ ಸುದ್ದಿ ಸಂಪಾದಕ ಬಿ.ಎಮ್.ಬಶೀರ್ ಅವರು ನೀಡಿದ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೋಷ್ ಹೆಗಡೆ,ನಿತಿನ್ ಶಾಮನೂರು ಮತ್ತು ಬೆಟ್ಟಂಪಾಡಿ ಚಂದ್ರ ಎಂಬ ವ್ಯಕ್ತಿಗಳು ತಮ್ಮ ಫೆಸ್ ಬುಕ್ ಖಾತೆಯಲ್ಲಿ ನನ್ನ ಹೆಸರು, ನಾನು ಉದ್ಯೋಗದಲ್ಲಿರುವ ವಾರ್ತಾಭಾರತಿ ದೈನಿಕದ ಹೆಸರು ಹಾಗು ಆಪರೇಷನ್ ಸಿಂದೂರ್ ಹೆಸರು ಸೇರಿಸಿ ಒಂದು ಹಸಿ ಸುಳ್ಳು ಹಾಗು ಪ್ರಚೋದನಾಕಾರಿ ವಂದಂತಿ ಹರಡಿದ್ದಾರೆ. newsputtur.com ಎಂಬ ಹೆಸರಿನ ವೆಬ್ಸೈಟ್ ಕೂಡಾ ಇದೇ ಸುಳ್ಳು ಸುದ್ದಿಯನ್ನು ಹರಡಿದೆ.ಸಂತೋಷ್ ಹೆಗಡೆಯ ಫೆಸ್ ಬುಕ್ ಪೋಸ್ಟ್ನಲ್ಲಿ ನಿತಿನ್ ಶಾಮನೂರ್ ಎಂಬಾತನ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದೆ.ನಿತಿನ್ ಶಾಮನೂರು ಎಂಬಾತನ ಪೋಸ್ಟ್ನಲ್ಲಿ ಒಬ್ಬ ಮಹಿಳೆಯ ಫೊಟೋ ಹಾಗು ಸೈನಿಕರ ಪೊಟೋ ಜೊತೆ ಸುಳ್ಳು ಮಾಹಿತಿ ಬರೆಯಲಾಗಿದೆ.ಆ ಸುಳ್ಳು ಹಾಗು ಪ್ರಚೋದನಕಾರಿ ಬರಹದ ಶೀರ್ಷಿಕೆ ‘ಆಪರೇಷನ್ ಸಿಂದೂರ್:ಕನ್ನಡ ಪತ್ರಕರ್ತನ ಸೋದರ ಸಂಬಂಧಿಯ ಪತ್ನಿ ಫಿನಿಷ್’ ಎಂದಾಗಿದ್ದು ಆ ಶೀರ್ಷಿಕೆಯ ಕೆಳಗೆ, ‘ಪಾಕಿಸ್ತಾನದ ಉಗ್ರರ ದಾಳಿಗೆ ಪ್ರತಿಕಾರವಾಗಿ ನಡೆದ ಭಾರತೀಯ ಸೇನೆಯ ದಾಳಿಯಲ್ಲಿ ಕರ್ನಾಟಕದ ಹೆಸರಾಂತ ದಿನಪತ್ರಿಕೆಯೊಂದರ ಸಂಪಾದಕರ ಕುಟುಂಬದ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಸುದ್ದಿ ತಿಳಿದು ಬಂದಿದೆ.ವಾರ್ತಾಭಾರತಿ ಎನ್ನುವ ಸ್ಥಳೀಯ ಪತ್ರಿಕೆಯ ಸಂಪಾದಕರಾದ ಬಿ.ಎಮ್.ಬಶೀರ್ ಅವರ ಸೋದರ ಸಂಬಂಧಿಯ ಪತ್ನಿಯಾದ ಮರ್ಯಾಮ್ ಹತ್ಯೆಯಾದ ಮಹಿಳೆಯಾಗಿದ್ದು ಆಕೆ ಐಎಸ್ಐಎಸ್ ಸಂಘಟನೆಯಲ್ಲಿ ಸಕ್ರಿಯಳಾಗಿದ್ದು,ಈ ಹಿಂದೆ ಎನ್ಐಎ ಬಲೆಗೂ ಬಿದ್ದಿದ್ದಳು ಎನ್ನಲಾಗುತ್ತಿದೆ.ಸಭ್ಯ ಕುಟುಂಬ ಮೂಲದಿಂದ ಬಂದಿದ್ದ ಮರ್ಯಾಮ್ ಸಂಪಾದಕರ ಸೋದರ ಸಂಬಂಧಿಯನ್ನು ವಿವಾಹವಾದ ನಂತರ ಐಎಸ್ಐಎಸ್ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದಳು.2016ರಲ್ಲಿ ಆಕೆ ಸಿರಿಯಾಕ್ಕೆ ತೆರಳಿ ಭಯೋತ್ಪಾದಕ ತರಬೇತಿ ಪಡೆದಿದ್ದಳು.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ಎಂಬಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದ ಮನೆಯೊಂದರ ಮೇಲೆ ಭಾರತೀಯ ಸೇನಾ ಪಡೆ ದಾಳಿ ಮಾಡಿದಾಗ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ’ ಎಂದು ಬರೆಯಲಾಗಿದೆ.
ಈ ಸುಳ್ಳು ಹಾಗು ಪ್ರಚೋದನಕಾರಿ ಪೋಸ್ಟ್ನಲ್ಲಿ ಸಂತೋಷ್ ಹೆಗಡೆ ನನ್ನ ಹೆಸರನ್ನು ಟ್ಯಾಗ್ ಮಾಡಿ ‘ಇದನ್ನು ವಾಂತಿ ಬರ್ತಿಲಿ ಪ್ರಕಟಿಸೋದು ಯಾವಾಗ ನೀನು’ ಎಂದು ಬರೆದಿದ್ದಾನೆ.ಬೆಟ್ಟಂಪಾಡಿ ಚಂದ್ರ ಎಂಬ ಹೆಸರಿನ ಫೆಸ್ ಬುಕ್ ಖಾತೆಯಿಂದಲೂ ಇದೇ ಸುಳ್ಳು ಸುದ್ದಿ ಪೋಸ್ಟ್ ಮಾಡಲಾಗಿದೆ.newsputtur.com ಎಂಬ ಹೆಸರಿನ ಒಂದು ವೆಬ್ಸೈಟ್ ಕೂಡ ಇದೇ ಸುಳ್ಳು ಸುದ್ದಿಯನ್ನು ಹರಡಿದೆ.ಆಪರೇಷನ್ ಸಿಂದೂರ್ ಹೆಸರಿನಲ್ಲಿ ಹರಡಿರುವ ಈ ಸುಳ್ಳು ಹಾಗೂ ಪ್ರಚೋದನಕಾರಿ ವದಂತಿ ವೈಯಕ್ತಿಕವಾಗಿ ನನಗೆ ಹಾಗೂ ನಾನು ಉದ್ಯೋಗದಲ್ಲಿರುವ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಗೆ ತೀವ್ರ ಸಮಸ್ಯೆ ತಂದೊಡ್ಡಿದೆ.ಜನರಿಗೆ ಇದರಿಂದ ಸುಳ್ಳು ಮಾಹಿತಿ ರವಾನೆಯಾಗುತ್ತಿದೆ.ಈ ಸುಳ್ಳು ಸುದ್ದಿಯಿಂದ ಸಮಾಜದಲ್ಲಿ ಅಶಾಂತಿ, ಪ್ರಕ್ಷುಬ್ದತೆ ಹರಡುವ ಸಾಧ್ಯತೆ ಇದೆ.ಕರಾವಳಿಯಲ್ಲಿ ಇತ್ತೀಚಿನ ಕೆಲವು ಘಟನೆಗಳಿಂದ ಈಗಾಗಲೇ ಸೂಕ್ಷ್ಮ ವಾತಾವರಣವಿದ್ದು, ಇಂತಹ ಸುಳ್ಳು ಹಾಗು ಪ್ರಚೋದನಕಾರಿ ವದಂತಿಗಳಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.ಆದ್ದರಿಂದ ಸಂತೋಷ್ ಹೆಗಡೆ, ನಿತಿನ್ ಶಾಮನೂರ್, ಬೆಟ್ಟಂಪಾಡಿ ಚಂದ್ರ ಹಾಗು newsputtur.com ವೆಬ್ಸೈಟ್ನ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿ.ಎಂ.ಬಶೀರ್ ಅವರು ದೂರು ನೀಡಿದ್ದಾರೆ.ಬಿ.ಎಂ.ಬಶೀರ್ ಅವರು ನೀಡಿರುವ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ(ಅ.ಕ್ರ.0097/25)ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.