*ನೆಲ್ಲಿಕಟ್ಟೆಯಲ್ಲಿ ಸ್ಥಳ ಬಾಡಿಗೆಯಲ್ಲಿದ್ದ ಜಾಗ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸ್ವಾಧೀನ
*ಜಾಗದಲ್ಲಿ ಬೆಳೆದ ಗಿಡಗಂಟಿಗಳ ತೆರವುಗೊಳಿಸಿ ಸ್ವಚ್ಛತೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಹಲವೆಡೆ ಜಮೀನುಗಳಿದ್ದು, ಒತ್ತುವರಿಯಾಗಿರುವ ಜಾಗವನ್ನು ಸ್ವಾಧೀನ ಮಾಡುವ ಕಾರ್ಯವನ್ನು ಜಾತ್ರೆಯ ಸಂದರ್ಭ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಸ್ವಾಧೀನ ಪಡಿಸುವ ಕಾರ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ.
ಮೇ.16ರಂದು ಬೆಳಗ್ಗೆ ನೆಲ್ಲಿಕಟ್ಟೆಯಲ್ಲಿ ಅಭಿಮಾನ್ ಬಾರ್ ಆಂಡ್ ರೆಸ್ಟೋರೆಂಟ್ ಎದುರು ಸರ್ವೆ ನಂಬರ್ 123-5 ರಲ್ಲಿ ಇದ್ದ ವಾಸ್ತವ್ಯ ಇಲ್ಲದ ಅದಂ ಹಾಜಿ ಅವರ ಪತ್ನಿ ರುಕ್ಕಾಬಿ ಹೆಸರಿನಲ್ಲಿರುವ ಸ್ಥಳ ಬಾಡಿಗೆಯ 0.8ಸೆಂಟ್ಸ್ ಜಾಗವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದಲ್ಲಿ ದೇವಸ್ಥಾನದ ಸುಪರ್ದಿಗೆ ಪಡೆದು ಕೊಳ್ಳಲಾಯಿತು. ಜೆಸಿಬಿ ಮೂಲಕ ಜಾಗದಲ್ಲಿ ತುಂಬಿದ ಗಿಡಗಂಟಿಗಳನ್ನು ತೆರವು ಮಾಡಲಾಯಿತು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಜೊತೆಗಿದ್ದರು. ಗೋಪಾಲ ಪೂಜಾರಿ ಮತ್ತು ಪ್ರಕಾಶ್ ಗೌಡ ಅವರು ತೆರವು ಕಾರ್ಯದ ಉಸ್ತುವಾರಿ ವಹಿಸಿದ್ದರು.
ನೆಲ್ಲಿಕಟ್ಟೆಯಲ್ಲಿ ಇನ್ನೂ ಹಲವು ಜಾಗವನ್ನು ಸ್ವಾಧೀನ ಮಾಡಲಿದ್ದೇವೆ:
ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಬಾಡಿಗೆಯಲ್ಲಿದ್ದ ಜಾಗವನ್ನು ಮರಳಿ ದೇವಸ್ಥಾನಕ್ಕೆ ಪಡೆದುಕೊಳ್ಳುವ ಕೆಲಸ ಕಾರ್ಯವನ್ನು ಮತ್ತೆ ಆರಂಬಿಸಿದ್ದೇವೆ. ಜಾತ್ರೆಯ ಸಂದರ್ಭದಲ್ಲಿ ಸಮಯವಕಾಶವಿರಲಿಲ್ಲ. ಇದೀಗ ಮತ್ತೆ ಆರಂಭಿಸಿದ್ದೇವೆ. ದೇವಸ್ಥಾನದ ಜಾಗವನ್ನು ಸರ್ವೆ ಮಾಡಿಸುವ ಕಾರ್ಯ ನಡೆಯುತ್ತಿದೆ. ನೆಲ್ಲಿಕಟ್ಟೆಯಲ್ಲಿರುವ ಸರ್ವೆ ಸಂಖ್ಯೆ 123-5 ರಲ್ಲಿ ಇದ್ದ ವಾಸ್ತವ್ಯ ಇಲ್ಲದ ಅದಂ ಹಾಜಿ ಮತ್ತು ರುಕ್ಕಾಬಿ ಹೆಸರಿನಲ್ಲಿರುವ ಸ್ಥಳ ಬಾಡಿಗೆಯ 0.8ಸೆಂಟ್ಸ್ ಜಾಗ ಎಂಬುದು ತಿಳಿದು ಬಂದಿದೆ. ಇಲ್ಲಿ ಮನೆಯೂ ಇಲ್ಲ, ಅವರ ವಾಸ್ತವ್ಯವೂ ಇಲ್ಲ. ಅವರು ಕೂಡಾ ಮಹಾಲಿಂಗೇಶ್ವರ ದೇವರ ಜಾಗವನ್ನು ಮಹಾಲಿಂಗೇಶ್ವರ ದೇವರಿಗೆ ಬಿಟ್ಟುಕೊಡುತ್ತೇವೆ ಎಂದು ತಿಳಿಸಿದ್ದಾರೆ. ಅದರಂತೆ ಅವರು ಬಿಟ್ಟು ಕೊಟ್ಟಿದ್ದಾರೆ. ಹಾಗಾಗಿ ದೇವಸ್ಥಾನದ ವತಿಯಿಂದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಬೇಲಿಯ ವ್ಯವಸ್ಥೆ ಮಾಡಿ ಫಲಕ ಹಾಕುತ್ತೇವೆ. ನೆಲ್ಲಿಕಟ್ಟೆಯಲ್ಲಿ ಶೀಘ್ರದಲ್ಲಿ ಇನ್ನೂ ಹಲವು ಜಾಗವನ್ನು ಸ್ವಾಧೀನ ಪಡೆಯುವ ಕೆಲಸವನ್ನು ಶಾಸಕರ ಸೂಚನೆಯಂತೆ ಮಾಡುತ್ತೇವೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು