*ಹಿಂದೂ ಧಾರ್ಮಿಕ ಶಿಕ್ಷಣವು ಪ್ರತಿ ಹಿಂದೂವಿನಲ್ಲಿ ಜಾಗೃತವಾಗಬೇಕು-ಕೇಶವಪ್ರಸಾದ್ ಮುಳಿಯ
*ಶ್ರೀ ಕ್ಷೇತ್ರವು ಪುತ್ತೂರಿನಲ್ಲಿ ಎರಡನೇ ದೊಡ್ಡ ಕ್ಷೇತ್ರವಾಗಿ ಬೆಳೆಯಬೇಕು-ಕೇಶವ ಪೂಜಾರಿ
*ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ಆಳವಾದ ಅಧ್ಯಯನ ಬೇಕಾಗಿದೆ-ಹೇಮನಾಥ ಶೆಟ್ಟಿ
ಪುತ್ತೂರು: ದೇವಾಲಯ ಸಂವರ್ಧನ ಸಮಿತಿ ಕರ್ನಾಟಕ, ಪುತ್ತೂರು, ದ.ಕ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ವತಿಯಿಂದ ಇಂದಿನ ಮಕ್ಕಳಿಗೆ ಹಿಂದೂ ಧರ್ಮದ ಅಮೂಲಾಗ್ರ ಪರಿಚಯ ಮಾಡಿ ಕೊಡಲು ಮೂರು ವರ್ಷಗಳಿಂದ ವ್ಯವಸ್ಥಿತ ಪಠ್ಯ ಪುಸ್ತಕದೊಂದಿಗೆ ಪ್ರಾರಂಭಿಸಿದ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ 27ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಮೇ.16ರಂದು ಬೆಳಿಗ್ಗೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಂದೂ ಧಾರ್ಮಿಕ ಶಿಕ್ಷಣವು ಪ್ರತಿ ಹಿಂದೂವಿನಲ್ಲಿ ಜಾಗೃತವಾಗಬೇಕು-ಕೇಶವಪ್ರಸಾದ್ ಮುಳಿಯ:
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಅರ್ಚಕರಾದ ಯೋಗೀಶ್ ಭಟ್ ಕುಂಜತ್ತಾಯರವರು ನೆರವೇರಿಸಿದರು. ಮಂಗಳೂರು ವಿಭಾಗದ ದೇವಾಲಯ ಸಂವರ್ಧನ ಸಮಿತಿ ವಿಭಾಗ ಪ್ರಮುಖ್ ಕೇಶವಪ್ರಸಾದ್ ಮುಳಿಯರವರು ಮಕ್ಕಳಿಗೆ ಸುಜ್ಞಾನ ದೀಪಿಕೆ ಪುಸ್ತಕ ವಿತರಣೆಯನ್ನು ನೆರವೇರಿಸಿ ಮಾತನಾಡಿ, ಹಿಂದೂ ಧರ್ಮದಲ್ಲಿ ಕೊರತೆ ಇರುವುದೇ ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆಯಾಗಿದೆ. ಹಿರಿಯರು ಹಿಂದೂ ಧಾರ್ಮಿಕತೆ ಬಗ್ಗೆ ತಿಳಿದಿದ್ದರು. ಆದರೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ತಿಳಿಯಬೇಕಾಗಿದೆ ಮತ್ತು ಇದನ್ನು ಉಳಿಸಬೇಕಾಗಿದೆ. ಮೂರು ವರ್ಷದ ಹಿಂದೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ಆರಂಭವಾಗಿತ್ತು. ಬಳಿಕ ಕಾವು ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಲ್ಲಿ ಆರಂಭಗೊಂಡಿತು. ಭಜನಾ ಮಂಡಳಿಯಿಂದ ಹೇಗೆ ಭಜನೆ ನಿರಂತರವಾಗಿ ನಡೆಯುತ್ತಿದೆಯೋ ಹಾಗೆಯೇ ಹಿಂದೂ ಧಾರ್ಮಿಕ ಶಿಕ್ಷಣವು ಪ್ರತಿ ಹಿಂದೂವಿನಲ್ಲಿ ಜಾಗೃತವಾಗಬೇಕು ಎಂದರು.

ಶ್ರೀ ಕ್ಷೇತ್ರವು ಪುತ್ತೂರಿನಲ್ಲಿ ಎರಡನೇ ದೊಡ್ಡ ಕ್ಷೇತ್ರವಾಗಿ ಬೆಳೆಯಬೇಕು-ಕೇಶವ ಪೂಜಾರಿ:
ಅಧ್ಯಕ್ಷತೆ ವಹಿಸಿದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ಮಾತನಾಡಿ, ದೇವರು, ದೈವರುಗಳ ಸಂಕಲ್ಪದೊಂದಿಗೆ ಇದೀಗ ಎರಡನೇ ಅವಧಿಗೆ ಶ್ರೀ ಕ್ಷೇತ್ರದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಇಲ್ಲಿನ ದೇವಸ್ಥಾನವು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿ ಆಗಿದೆ. ನಾವು ಮಾಡುವುದು ಸೇವೆ ವಿನಹ ಬೇರೇನೂ ಅಲ್ಲ. ಇದೀಗ ಶ್ರೀ ಕ್ಷೇತ್ರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ತರಗತಿಗಳು ಆರಂಭವಾಗಿದ್ದು, ಪ್ರತಿ ಬುಧವಾರದಂದು ಮಕ್ಕಳ ಜೊತೆಗೆ ತಾಯಂದಿರು ಆಗಮಿಸಬೇಕು. ಶ್ರೀ ಕ್ಷೇತ್ರವು ಪುತ್ತೂರಿನಲ್ಲಿ ಎರಡನೇ ದೊಡ್ಡ ಕ್ಷೇತ್ರವಾಗಿ ಬೆಳೆಯಬೇಕು ಎಂದರು.
ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ಆಳವಾದ ಅಧ್ಯಯನ ಬೇಕಾಗಿದೆ-ಹೇಮನಾಥ ಶೆಟ್ಟಿ:
ಧರ್ಮ ಶಿಕ್ಷಣ ಸಮಿತಿ ಪುತ್ತೂರು ತಾಲೂಕಿನ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇಂದಿನ ಹಾಗೂ ಮುಂದಿನ ಸಮುದಾಯದ ಹಿಂದು ಮಕ್ಕಳು ಸಮಗ್ರವಾಗಿ ಬೆಳೆಯಬೇಕಾದರೆ ಹಿಂದೂ ಧಾರ್ಮಿಕ ಶಿಕ್ಷಣದ ಬಗ್ಗೆ ಆಳವಾದ ಅಧ್ಯಯನ ಬೇಕಾಗಿದೆ. ಇತರ ಧರ್ಮದಲ್ಲೂ ತಮ್ಮ ಧಾರ್ಮಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನಮ್ಮಲ್ಲಿ ಎಷ್ಟು ಮಂದಿ ದೇವಸ್ಥಾನಕ್ಕೆ ಬರುತ್ತಾರೆ, ದೇವಸ್ಥಾನದ ಒಳ ಹೋಗುತ್ತಾರೆ ಎಂಬುದು ಮುಖ್ಯವಾಗುತ್ತದೆ. ಇದಕ್ಕೆ ಕಾರಣವೇ ಹಿಂದೂ ಧಾರ್ಮಿಕ ಶಿಕ್ಷಣದ ಕೊರತೆಯಾಗಿದೆ. ಕೇವಲ ದೇವರ, ದೈವದ ಭಯದಿಂದ ಶ್ರೀ ಕ್ಷೇತ್ರಗಳಿಗೆ ಹೋಗುವುದಲ್ಲ, ಪ್ರತಿ ದಿನವೂ ನಾವು ಹೋಗುವಂತಾಗಬೇಕು ಎಂದರು.
ಹಿಂದೂ ಧಾರ್ಮಿಕ ಶಿಕ್ಷಣ ವಿಭಾಗದ ಸಂಯೋಜಕಿ ಶ್ರೀಮತಿ ಶಂಕರಿ ಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಲಾಯಿತು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಹಿಂದೂ ಧಾರ್ಮಿಕ ಶಿಕ್ಷಣದ ಬೋಧಕರಾದ ಶ್ರೀಮತಿ ವತ್ಸಲಾ ರಾಜ್ಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿರವರು ಪ್ರಾರ್ಥಿಸಿದರು. ಕಾರ್ಯಕ್ರಮದ ನಿರ್ವಾಹಕರಾದ ಶ್ರೀಮತಿ ವೀಣಾ ನಾಗೇಶ್ ತಂತ್ರಿರವರು ಸ್ವಾಗತಿಸಿದರು. ಸಂಘಟಕರಾದ ಶ್ರೀಮತಿ ತೇಜಸ್ವಿ ರಾಜೇಶ್ ಕೆಮ್ಮಿಂಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ಲಲಿತಾ ಕೆ, ರೇಖಾ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ್ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್, ಸಿಬ್ಬಂದಿ ಭರತ್, ರಘುನಾಥ್ ಪೂಜಾರಿ ಸಹಿತ ಹಲವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದಲ್ಲಿ..
ಪ್ರತಿ ಬುಧವಾರ, ಸಂಜೆ 5 ರಿಂದ 6 ಗಂಟೆಯವರೆಗೆ ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳು ನಡೆಯಲಿದೆ.