ಪುತ್ತೂರು: ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವುದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಅಲ್ಲ. ಅದು ನನ್ನ ವೈಯಕ್ತಿಕ ಫೇಸ್‌ಬುಕ್ ಖಾತೆ. ಆದರೆ ಮಾಜಿ ಶಾಸಕರು ನನ್ನ ವಿರುದ್ಧ ದೇಶದ್ರೋಹದ ಆಪಾದನೆ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಬರೆಯಲು ನನಗೆ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅನುಮತಿ ಬೇಕಿಲ್ಲ ಎಂದು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ನಾನು ಹಾಕಿದ ಪೋಸ್ಟ್ ಯಾರನ್ನು ಉದ್ದೇಶಿಸಿದ್ದು ಎಂಬುದು ಇಡೀ ಪ್ರಪಂಚಕ್ಕೇ ಗೊತ್ತಿದೆ. ಭಾರತದಲ್ಲಿ ಧರ್ಮದ ಆಧಾರದಲ್ಲಿ ಜನರ ಮದ್ಯೆ ದ್ವೇಷ ವಿಷ ಬಿತ್ತಲು ಪ್ರಯತ್ನಿಸುತ್ತಿರುವವರು ಯಾರು ಎಂಬುದೂ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ನನ್ನ ಮನಸ್ಸಿನಲ್ಲಿ ಇದ್ದದ್ದು ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಝ್ ಶರೀಫ್. ಆದರೆ ಪುತ್ತೂರಿನ ಬಿಜೆಪಿ ನಾಯಕರು ಇದನ್ನು ತಿರುಚಿ ಇದು ಭಾರತದ ಪ್ರಧಾನಮಂತ್ರಿಗಳ ಮೇಲಿನ ಅವಹೇಳನ ಅಂತ ದೂರು ನೀಡಿದ್ದು ಅವರ ಭೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಈ ವಿಚಾರದಲ್ಲಿ ಪುತ್ತೂರಿನ ಮಾಜಿ ಶಾಸಕರು ನನ್ನ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೆರೆದಿದ್ದಾರೆ. ನನ್ನನ್ನು ದೇಶದ್ರೋಹಿಯೆಂದೂ, ಯುದ್ಧದ ಸಮಯದಲ್ಲಿ ಪ್ರಧಾನಿಯನ್ನು ಅವಹೇಳನ ಮಾಡಿ ದೇಶ ದುರ್ಬಲಗೊಳಿಸಲು ಪ್ರಯತ್ನಿಸಿದೆನೆಂದೂ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಇಂತಹ ಅವಹೇಳನಕಾರಿ ಪೋಸ್ಟ್ ಹಾಕಿದೆನೆಂದೂ ದೂರಿದ್ದಾರೆ. ದೇಶದ್ರೋಹದ ಕೇಸ್ ಹಾಕಿ ಬಂಧಿಸುವಂತೆಯೂ ಆಗ್ರಹಿಸಿದ್ದಾರೆ. ಆದರೆ ಬಿಜೆಪಿಯವರಿಗೆ ದೇಶದ್ರೋಹ ಏನು ಎಂಬುದೇ ಗೊತ್ತಿಲ್ಲ. ಕೋಮು ಭಾಷಣ ಮಾಡುವಲ್ಲಿ ಯುವಕರನ್ನು ಚೂ ಬಿಡುತ್ತಿರುವ ಮಾಜಿ ಶಾಸಕರಿಗೆ ಪೆಹಲ್ಗಾಂನಲ್ಲಿ ನಿರಾಯುಧನಾಗಿ ಭಯೋತ್ಪಾದಕರ ಜೊತೆ ಹೋರಾಟ ಮಾಡಿ ವೀರ ಮರಣ ಹೊಂದಿದ ಕುದುರೆ ಸವಾರ ಸೈಯ್ಯದ್ ಅದಿಲ್ ಹುಸೇನ್, ಬೆಟ್ಟದ ಮೇಲೆ ಗಾಯಾಳುಗಳಾಗಿ ಮಲಗಿದ್ದ ಪ್ರವಾಸಿಗರನ್ನು ಕುದುರೆಯ ಮೇಲೆ ಹೊತ್ತು ತಂದು ಆಸ್ಪತ್ರೆಗೆ ಸೇರಿಸಿದವರು ಯಾರೆಂಬುದು ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು ದೇಶ ಯುದ್ಧದ ಸಂದರ್ಭದಲ್ಲಿದ್ದಾಗ ಜನರ ನಡುವೆ ದ್ವೇಷ ತುಂಬಿ, ಅಂತಃಕಲಹಕ್ಕೆ ಪ್ರಚೋದಿಸಿ, ದೇಶವನ್ನು ಒಡೆಯುವ ಇಂತಹಾ ಕೃತ್ಯಗಳೇ ನಿಜವಾದ ದೇಶದ್ರೋಹವಾಗಿದೆ. ತಾವೇ ಸ್ವತಃ ದೇಶದ್ರೋಹದ ಕೆಲಸ ಮಾಡಿ ನನ್ನ ಮೇಲೆ ಆರೋಪಿಸುತ್ತಿರುವದು ಅವರ ಭೌದ್ದಿಕ ದಿವಾಳಿತನದ ಪ್ರತೀಕವಾಗಿದೆ ಎಂದರು.
ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ:
ಪುತ್ತೂರಿನ ಮಾಜಿ ಶಾಸಕರಿಗೂ ಅವರ ಜೊತೆಗಿರುವ ಜನರಿಗೂ ಈಗ ಇರುವರಿಗೆ ಹೇಗಾದರೂ ಮಾಡಿ ನನ್ನ ಬಾಯಿ ಮುಚ್ಚಿಸಬೇಕು. ಅದಕ್ಕಾಗಿಯೇ ನಾನು ಪುತ್ತೂರು ನಗರದ ನಿವಾಸಿಯಾಗಿದ್ದರೂ ನನ್ನ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನೇಮಕಾತಿಯ ವಿರುದ್ಧ ತಮ್ಮ ಬೆಂಬಲಿಗರಿಂದ ರಿಟ್ ಅರ್ಜಿ ಸಲ್ಲಿಸಿದರು. ಅದಕ್ಕಾಗಿಯೇ ಈ ಪೊಲೀಸ್ ದೂರು ನೀಡಿದರು. ಅದಕ್ಕಾಗಿಯೇ ಅವರು ನನ್ನನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟಿಸಬೇಕು ಎಂದೂ ಆಗ್ರಹಿಸಿದರು. ನನ್ನ ಬಾಯಿ ಮುಚ್ಚಿಸಲು ಇವರ ಜನ್ಮದಲ್ಲಿ ಸಾಧ್ಯ ಇಲ್ಲ. ಇವರ ದೇಶದ್ರೋಹಿ , ಸಮಾಜದ್ರೋಹಿ, ಧರ್ಮದ್ರೋಹಿ ರಾಜಕಾರಣದ ವಿರುದ್ಧ ನನ್ನ ಸಮರ ನಿರಂತರವಾಗಿ ನಡೆಯಲಿದೆ ಎಂದು ಅಮಳ ರಾಮಚಂದ್ರ ಹೇಳಿದರು.
ಹೆಣ್ಣು ಮಕ್ಕಳ ಜೊತೆ ಸೆಲ್ಫಿ ತೆಗೆಯುವುದು ದೇಶ ಸೇವೆಯಾ?
ಒಬ್ಬ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯ ಅರಿವು ನನಗೆ ಇದೆ. ಆದರೆ ಈ ಮಾಜಿ ಶಾಸಕರು ತಾವು ಶಾಸಕರಾಗಿದ್ದಾಗ ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿದ್ದರು ಎಂಬುದು ನೋಡಬೇಕು. ಅಭಿವೃದ್ದಿ ಕಾಮಗಾರಿಯಲ್ಲೂ, ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲೂ ಲೂಟಿ ಮಾಡಿದ್ದ ಇವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಕಛೇರಿಗೆ ಬಂದ ಹೆಣ್ಣು ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡು ಮಜಾ ಮಾಡಿದ್ದನ್ನು ಏನು ದೇಶಸೇವೆ ಎಂದು ಕರೆಯಬೇಕಾ ಎಂದು ಪ್ರಶ್ನಿಸಿದ ಅಮಳ ರಾಮಚಂದ್ರ ಅವರು ಇಂದು ಕಪೋಲಕಲ್ಪಿತವಾಗಿ ನನ್ನ ಮೇಲೆ ಪೊಲೀಸರಿಗೆ ದೂರು ಕೊಡುವ ಇವರು ಅಂದು ತಮ್ಮ ಮೇಲೆಯೇ ಲವ್ವಿ ಡುವ್ವಿ ಆಪಾದನೆಗಳು ಬಂದಾಗ ಪೊಲೀಸರಿಗೇಕೆ ದೂರು ನೀಡಿಲ್ಲ. ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ , ಮೋಜು ಮಸ್ತಿಯಲ್ಲಿ ತೊಡಗಿ, ಇತರರಿಂದ ನಾಲಾಯಕ್ ಶಾಸಕ ಎನಿಸಿಕೊಂಡ ಇವರು ನನ್ನ ಜವಾಬ್ದಾರಿಯನ್ನು ಹೇಳುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಎಂಜಲು ಕಾಸಿಗೆ ಕೈ ಒಡ್ಡದೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಲ್ಲದೆ ಫೇಸ್‌ಬುಕ್‌ನಲ್ಲಿ ಬರೆಯುವುದಕ್ಕೆ ಯಾವ ಮಾಜಿ ಶಾಸಕನ ಅನುಮತಿಯೂ ಅಗತ್ಯ ಇಲ್ಲ ಎಂದರು.