ಪುತ್ತೂರು: ವೇಗವಾಗಿ ಬೆಳೆಯುತ್ತಿರುವ ಔದ್ಯೋಗಿಕರಂಗದಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳಾಗುತ್ತಿರುತ್ತವೆ. ಅದಕ್ಕಾಗಿ ನಮ್ಮ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿ ದೆಸೆಯಿಂದಲೇ ಚಿಂತನೆ ಮಾಡಬೇಕಾಗಿದೆ. ಸವಾಲುಗಳು ಎದುರಾದ ಮನು ಮತ್ತು ಬಲಗೊಳ್ಳುತ್ತಾನೆ. ಸಮಸ್ಯೆಗಳನ್ನು ಮೀರಿ ನಿಲ್ಲಲು ನಮಗೆ ಬೇಕಿರುವುದು ಉತ್ತೇಜನ. ಶ್ರದ್ಧೆಯಿಂದ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ. ಎಂದು ಪುತ್ತೂರಿನ ಆದಾಯ ತೆರಿಗೆ ಕಛೇರಿಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಆಗಿರುವ ತೇಜಸ್ವಿ ಮಕಿನ್ ರವರು ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಮಾರ್ಗಸೂಚಿಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ರಹಸ್ಯವು ಕಠಿಣ ಪರಿಶ್ರಮಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಿಗದಿತ ವೇಳಾಪಟ್ಟಿಯ ಪ್ರಕಾರ ಸರಿಯಾದ ಯೋಜನೆ ಮತ್ತು ಅಧ್ಯಯನದ ಅಗತ್ಯವಿರುವ ಬುದ್ಧಿವಂತ ಕೆಲಸವೂ ಆಗಿದೆ. ವಿದ್ಯಾರ್ಥಿಗಳು ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆಯುವುದರ ಜೊತೆಗೆ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಲು ಪ್ರಾರಂಭಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳು ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.
ಯುಪಿಎಸ್ಸಿ ಪರೀಕ್ಷೆಗಳ ಬಗ್ಗೆ, ಬ್ಯಾಂಕಿಂಗ್ ಪರೀಕ್ಷೆ, ಎಸ್.ಎಸ್.ಎಲ್.ಸಿ / ಪಿಯುಸಿ ನಂತರ ಇರುವ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ದಿನಚರಿ , ಸಮಯ ಪರಿಪಾಲನೆ, ಒತ್ತಡ ನಿವಾರಣೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅರ್ಚನಾ ಸ್ವಾಗತಿಸಿ ವಂದಿಸಿದರು.