ಪುತ್ತೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಪರಿವರ್ತನೆ ಹಾಗೂ ಪ್ರೇರಣಾ ಅಭಿಯಾನ ಕಾರ್ಯಕ್ರಮವು ಮೇ.15ರಂದು ಸಮೃದ್ಧಿ ಸಂಜೀವಿನಿ ಬಲ್ನಾಡು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಬಲ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಅಭಿಯಾನ ನಿರ್ವಹಣಾ ಘಟಕ ಬಿಆರ್ಪಿ ವಿದ್ಯಾಶ್ರೀ ಕಾರ್ಯಕ್ರಮ ಆಯೋಜನೆ ಹಾಗೂ ಅಭಿಯಾನದ ಉದ್ದೇಶದ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಯಶೋಧ ಪೌಷ್ಠಿಕ ಆಹಾರ, ಆರೋಗ್ಯ, ಸ್ವಚ್ಚತೆ – ನೈರ್ಮಲ್ಯ, ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿ ನಿಶಪ್ರಿಯ, ಹದಿಹರೆಯದ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಆರೈಕೆ, ಲಿಂಗತ್ವಧಾರಿತ ಶೋಷಣೆಗಳು, ಕೌಟುಂಬಿಕ ಕಲಹಗಳು, ಸಾಂತ್ವನ ಕೇಂದ್ರದ ಸೌಲಭ್ಯಗಳ ಮಾಹಿತಿಗಳನ್ನು ನೀಡಿದರು.
ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಬಿ.ಆರ್., ಸದಸ್ಯೆ ವಿನಯ, ಕಾರ್ಯದರ್ಶಿ ಲಕ್ಷ್ಮೀ, ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮೂಲಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ, “ನಮ್ಮ ಗ್ರಾಮ ,ಸ್ವಚ್ಛ ಬಲ್ನಾಡು” ಶೀರ್ಷಿಕೆಯಡಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಸ್ವಸಹಾಯ ಸಂಘಗಳ ಸದಸ್ಯರು, ಕಿಶೋರಿ ಸಂಘದ ಹೆಣ್ಣು ಮಕ್ಕಳು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಗ್ರಂಥಾಲಯ ಮೇಲ್ವಿಚಾರಕರು, ವಿಆರ್ಡಬ್ಲ್ಯೂ ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಿಶೋರಿ ಸಂಘದ ಮಕ್ಕಳು ಪ್ರಾರ್ಥಿಸಿದರು. ಎಂಬಿಕೆ ಅಂಬಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಅಕ್ಷತಾ ವಂದಿಸಿದರು.