ಪುತ್ತೂರು: ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಮಾರು 25 ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟು ಬರೋಬ್ಬರಿ 32 ವರ್ಷ ಆಗಿದೆ. ಆದರೆ ಯಾರಿಗೂ ಈ ತನಕ ನಿವೇಶನ ಹಂಚಿಕೆ ಮಾಡಿರಲಿಲ್ಲ. ಇದೀಗ ಈ 25 ಮಂದಿಯ ಪೈಕಿ 7 ಮಂದಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ನಿವೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಗೆ ನಿವೇಶನ ಕೊಡಿಸಿದ ಶಾಸಕರನ್ನು ಮೇ.19ರಂದು ಕಚೇರಿಯಲ್ಲಿ ಭೇಟಿಯಾದ ಫಲಾನುಭವಿಗಳು ಆನಂದ ಭಾಷ್ಪದ ಮೂಲಕ ಕೃತಜ್ಞತೆ ಸಲ್ಲಿಸಿದರು.
ಐತ್ತೂರು ಗ್ರಾ.ಪಂ.ಸದಸ್ಯ ಈರೇಶ್ ಗೌಡ, ಹನುಮಂತ್, ವರದರಾಜ್, ತ್ಯಾಗಮೂರ್ತಿ, ಪಾರ್ಥಿವನ್, ಜಯಕುಮಾರ್, ಕುಮಾರ್ ಕೆ, ರವಿ ಎಂಬವರು ನಿವೇಶನ ಪಡೆದುಕೊಂಡ ಫಲಾನುಭವಿಗಳು. ನಿವೇಶನ ದೊರೆತಿರುವ ಹಿನ್ನೆಲೆಯಲ್ಲಿ ಅವರೆಲ್ಲರ ಕಣ್ಣಲ್ಲಿ ಆನಂದ ಭಾಷ್ಪ ತುಂಬಿಕೊಂಡಿತ್ತು. ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು 1993ರಲ್ಲಿ ಶ್ರೀಲಂಕಾ ನಿರಾಶ್ರಿತರಾದ 25 ಮಂದಿಗೆ ಐತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ 3 ಸೆಂಟ್ಸ್ ಮನೆ ನಿವೇಶನದ ಹಕ್ಕು ಪತ್ರ ನೀಡಿದ್ದರು. ಆದರೆ ಈ ತನಕವೂ ಅಧಿಕಾರಿಗಳು ಫಲಾನುಭವಿಗಳಿಗೆ ನಿವೇಶನದ ಜಾಗ ತೋರಿಸಿಲ್ಲ. ಈ ವಿಚಾರವನ್ನು ಫಲಾನುಭವಿಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಿದ್ದರು. ಶಾಸಕರ ಒಂದೇ ಒಂದು ಫೋನ್ ಕರೆಗೆ ಎಚ್ಚರಗೊಂಡ ಅಧಿಕಾರಿಗಳು 25 ಮಂದಿ ಫಲಾನುಭವಿಗಳ ಪೈಕಿ ಏಳು ಮಂದಿಗೆ ಮೊದಲ ಹಂತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ. ಹಕ್ಕುಪತ್ರ ಪಡೆದುಕೊಂಡ ಫಲಾನುಭವಿ ಮೃತಪಟ್ಟಿದ್ದಲ್ಲಿ ಅವರ ವಾರಿಸುದಾರರಿಗೆ ನಿವೇಶನ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಹಕ್ಕು ಪತ್ರ ಕೈಗೆ ಸಿಕ್ಕಿದರೂ ನಿವೇಶನ ಸಿಗದ ಫಲಾನುಭವಿಗಳಿಗೆ ನಿವೇಶನ ಕೊಡಿಸಲು ಕೊನೆಗೂ ಶಾಸಕ ಅಶೋಕ್ ಕುಮಾರ್ ರೈ ಅವರೇ ಬರಬೇಕಾಗಿ ಬಂದಿರುವುದು ವಿಪರ್ಯಾಸವಾಗಿದೆ.
ಶಾಸಕ ಅಶೋಕ್ ರೈಗೆ ದೂರು;
32 ವರ್ಷದ ಹಿಂದೆ ಹಕ್ಕು ಪತ್ರ ದೊರೆತರೂ ನಿವೇಶನ ವಂಚಿತರಾದ ಫಲಾನುಭವಿಗಳ ಜೊತೆಗೆ ಐತ್ತೂರು ಗ್ರಾ.ಪಂ.ಸದಸ್ಯ ಈರೇಶ್ ಗೌಡರವರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಬಂದಿದ್ದರು. ನಿವೇಶನ ಹಂಚಿಕೆಯಾಗದೇ ಇರುವ ವಿಚಾರವನ್ನು ಅವರು ಶಾಸಕರಿಗೆ ತಿಳಿಸಿದರು. ವಿಚಾರ ತಿಳಿದುಕೊಂಡ ಶಾಸಕರು ಸಂಬಂಧಪಟ್ಟ ಅಽಕಾರಿಗೆ ಕರೆ ಮಾಡಿ, 1993ರಲ್ಲಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಯಾಕೆ ನಿವೇಶನ ಕೊಟ್ಟಿಲ್ಲ ?, 32 ವರ್ಷಗಳಿಂದ ಅವರನ್ನು ಯಾಕೆ ಸತಾಯಿಸುತ್ತಿದ್ದೀರಿ. ನಿವೇಶನ ಇಲ್ಲದೇ ಇದ್ದರೆ ಹಕ್ಕು ಪತ್ರವನ್ನು ಯಾಕೆ ಕೊಟ್ಟಿದ್ದೀರಿ ? ಎಂದು ಪ್ರಶ್ನಿಸಿ ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿ, ಎಲ್ಲಾ 25 ಮಂದಿಯ ಕುಟುಂಬಸ್ಥರಿಗೆ ತಕ್ಷಣ ನಿವೇಶನ ಹಂಚಿಕೆ ಮಾಡುವಂತೆ ಸೂಚಿಸಿದ್ದರು. ಬಳಿಕ ಫಲಾನುಭವಿಗಳಿಗೆ ನೆರವಾದ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು, ಶಾಸಕರ ಸೂಚನೆಯಂತೆ ಶೀಘ್ರವೇ ನಿವೇಶನ ಮಂಜೂರುಗೊಳಿಸಲು ಸಹಕಾರ ನೀಡಿದ್ದರು.
ಶಾಸಕರಿಂದ ಅದ್ಭುತ ಕೆಲಸ ಆಗಿದೆ:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಅದ್ಬುತ ಕೆಲಸವಾಗಿದೆ. ಈ ಫಲಾನುಭವಿಗಳು ಅಽಕಾರಿಗಳ ಬಳಿಗೆ ಅಲೆದಾಟ ನಡೆಸಿ ನಿವೇಶನ ಸಿಗುತ್ತದೆ ಎಂಬ ಆಸೆಯನ್ನೇ ಬಿಟ್ಟಿದ್ದರು. 32 ವರ್ಷಗಳಿಂದ ಬಡ ಕುಟುಂಬಗಳು ಮಾಡಿದ ಹೋರಾಟಕ್ಕೆ ಈಗ ಶಾಸಕರಿಂದ ನ್ಯಾಯ ಸಿಕ್ಕಿದೆ. ಈ ಕುಟುಂಬಗಳಿಗೆ ಆಗಿರುವ ಸಂತೋಷ ಅಷ್ಟಿಷ್ಟಲ್ಲ. ಒಬ್ಬ ಜನಪ್ರತಿನಿಧಿಯಾದವರು ಹೇಗೆ ಜನರಿಗೆ ಸಹಾಯ ಮಾಡಬಹುದು, ಬಡವರ ಕಣ್ಣೀರೊರೆಸಬಹುದು ಎಂಬುದಕ್ಕೆ ಶಾಸಕರು ನಿದರ್ಶನವಾಗಿದ್ದಾರೆ ಎಂದು ಅಭಿಪ್ರಾಯಿಸಿದರು.
ಯಾರಿಂದಲೂ ಆಗದ್ದು ಶಾಸಕರು ಮಾಡಿದ್ದಾರೆ:
ಕಳೆದ 32 ವರ್ಷಗಳಿಂದ ಗ್ರಾ.ಪಂ.ಸದಸ್ಯ ಈರೇಶ್ ಗೌಡ ಹಾಗೂ ಇತರರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಈಗ ಪುತ್ತೂರು ಶಾಸಕರ ಬಳಿ ಅವರಿಗೆ ನ್ಯಾಯ ಸಿಕ್ಕಿದೆ. ಬಡವರಿಗೆ ಸ್ಪಂದನೆ ನೀಡುವ ಶಾಸಕರ ಮನೋಸ್ಥಿತಿ ಕಂಡು ನಮಗೂ ಅಚ್ಚರಿಯಾಗಿದೆ. ಯಾರಿಂದಲೂ ಮಾಡಲಾಗದ ಒಂದು ಪುಣ್ಯದ ಕೆಲಸವನ್ನು ಅವರು ಮಾಡಿರುವುದು ಅಭಿನಂದನಾರ್ಹವಾಗಿದೆ ಎಂದು ತಾ.ಪಂ.ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅಭಿಪ್ರಾಯಿಸಿದ್ದಾರೆ.
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಾಕೀರ್, ಕಡಬ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಕೆ.ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಶಾಸಕರಿಗೆ ಅಭಿನಂದನೆ
ನಿವೇಶನ ಸಿಕ್ಕಿದ ಫಲಾನುಭವಿಗಳು ಸೋಮವಾರ ಶಾಸಕರ ಕಚೇರಿಗೆ ಬಂದು ಶಾಸಕರಿಗೆ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ. ಶಾಸಕರ ಕಾಲಿಗೆ ನಮಸ್ಕರಿಸಿದ ಫಲಾನುಭವಿಗಳು ನೀವು ನಮ್ಮ ಪಾಲಿನ ದೇವರಾಗಿ ಬಂದಿದ್ದೀರಿ, ನಾವು ನಿಮ್ಮ ಕ್ಷೇತ್ರದವರೇ ಅಲ್ಲ, ನಾವು ನಿಮಗೆ ಮತವನ್ನೂ ಹಾಕಿಲ್ಲ, ಹಾಕಲು ಸಾಧ್ಯವೂ ಇಲ್ಲ. ಆದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ನಮ್ಮ ಮನವಿಗೆ ಸ್ಪಂದಿಸಿ 32 ವರ್ಷಗಳಿಂದ ಯಾರಿಂದಲೂ ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಿ ನಮ್ಮ ಕುಟುಂಬದ ಕಣ್ಣೀರು ಒರೆಸಿದ್ದೀರಿ. ನಿಮ್ಮ ಸೇವೆಯನ್ನು ನಾವು ಎಂದಿಗೂ ಮರೆಯಲಾರೆವು, ನಿಮ್ಮ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇವೆ ಎಂದು ಆನಂದ ಭಾಷ್ಪದಿಂದ ಹೇಳಿದರು.
ಬಡವರಿಗೆ ಸವಲತ್ತು ಮನೆಗೆ ತಲುಪಿಸುವ ಕೆಲಸ ಆಗಿದೆ
ಹಕ್ಕು ಪತ್ರ ನೀಡಿದ್ದಾರೆ. ಆದರೆ ನಿವೇಶನ ನೀಡಿಲ್ಲ ಎಂದು ಐತ್ತೂರು ಗ್ರಾಮದ 25 ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ವಿನಯಕುಮಾರ್ ಸೊರಕೆ ಅವರು ಶಾಸಕರಾಗಿದ್ದ ವೇಳೆ ಬಡವರಿಗೆ ಸಹಾಯವಾಗಲೆಂದು ಹಕ್ಕು ಪತ್ರ ನೀಡಿದ್ದರು. ಹಕ್ಕು ಪತ್ರ ನೀಡಿದ ಬಳಿಕ ನಿವೇಶನ ಹಂಚಿಕೆ ಮಾಡುವ ಕೆಲಸವನ್ನು ಇಲಾಖಾ ಅಧಿಕಾರಿಗಳು ಮಾಡಬೇಕಿತ್ತು. ಯಾಕೆ ಆ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಗಮನಕ್ಕೆ ಈ ವಿಚಾರ ಬಂದ ಕೂಡಲೇ ಸ್ಪಂದಿಸಿದ್ದೇನೆ. ಪ್ರಥಮ ಹಂತದಲ್ಲಿ 7 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ದೊರೆತವರ ಪೈಕಿ ಕೆಲವು ಫಲಾನುಭವಿಗಳು ಮರಣ ಹೊಂದಿದ್ದಾರೆ. ಹಕ್ಕು ಪತ್ರ ಪಡೆದ ಎಲ್ಲರಿಗೂ ನಿವೇಶನ ನೀಡುವಂತೆ ಸೂಚನೆಯನ್ನು ನೀಡಿದ್ದೇನೆ. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹಾಗೂ ಐತ್ತೂರು ಗ್ರಾ.ಪಂ ಸದಸ್ಯ ಈರೇಶ್ರವರು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು