ಸಾವಿರಕ್ಕೂ ಮೇಲ್ಪಟ್ಟು ಅಕ್ರಮ- ಸಕ್ರಮ ಅರ್ಜಿ ವಿಲೇವಾರಿ : ಅಶೋಕ್ ಕುಮಾರ್ ರೈ

0

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸು

ಉಪ್ಪಿನಂಗಡಿ: ಚುನಾವಣೆಯ ಸಂದರ್ಭ ಕ್ಷೇತ್ರದ ಜನತೆಗೆ ಮಾತುಕೊಟ್ಟಂತೆ ಪುತ್ತೂರಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈಗಾಗಲೇ ಗ್ರಾಮ ಪಂಚಾಯತ್ ಮಟ್ಟಕ್ಕೆ ಆಡಳಿತವೇ ತೆರಳಿ ಒಂದು ಸಾವಿರಕ್ಕೂ ಮೇಲ್ಪಟ್ಟು ಅಕ್ರಮ – ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1600ಕ್ಕೂ ಮೇಲ್ಪಟ್ಟು 94 ಸಿ ಮತ್ತು 94ಸಿಸಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


‘ಶಾಸಕರ ನಡೆ- ಗ್ರಾಮದ ಕಡೆ’ಯೆಂಬ ವಿಶೇಷ ಅಭಿಯಾನದ ಮೂಲಕ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಮೇ.20ರಂದು ನಡೆದ ಅಕ್ರಮ- ಸಕ್ರಮ ಬೈಠಕ್‌ನಲ್ಲಿ ಅವರು ಫಲಾನುಭಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.


ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಬೇಕು. ಬಡ ಜನರ ಕಷ್ಟ -ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಬೇಕು ಎಂಬ ಮನೋಭಾವವನ್ನಿಟ್ಟುಕೊಂಡು ನಾನು ಶಾಸಕನಾದವ. ಚುನಾವಣೆಯ ಕಾಲದಲ್ಲಿ ನೀಡಿದ ಭರವಸೆಯಂತೆ ನಡೆಯುತ್ತಿದ್ದೇನೆ. ಇಲ್ಲಿನ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಈ ಭಾಗದ ಜನತೆಯ ಬಹಳ ವರ್ಷಗಳ ಕನಸಾದ ಸರಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ಮಂಜೂರುಗೊಳಿಸಿದ್ದೇನೆ. ಈ ಮೊದಲು ತಾಲೂಕು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಅಕ್ರಮ- ಸಕ್ರಮ ಬೈಠಕ್ ಅನ್ನು ಪ್ರತಿ ಗ್ರಾಮಕ್ಕೆ ಕೊಂಡು ಹೋಗಿ ಗ್ರಾಮ ಮಟ್ಟದಲ್ಲಿ ಜನರೆದುರೇ ನಡೆಸುತ್ತಿದ್ದೇನೆ. ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ 10 ಕೋ.ರೂ.ಗಳ ಕಾಮಗಾರಿ ಮುಗಿದಿದ್ದು, ಇನ್ನು 20 ಕೋ.ರೂ. ಕಾಮಗಾರಿ ಆರಂಭಗೊಂಡಿದೆ. 13 ಕೋ.ರೂ. ಕಾಮಗಾರಿ ಹಾಗೂ ರಸ್ತೆ ಮಧ್ಯೆ ವಿದ್ಯುತ್ ದೀಪಗಳ ಅಳವಡಿಕೆಗಾಗಿ 5 ಕೋ. ರೂ. ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಇದೆಲ್ಲಾ ಕಾಮಗಾರಿಗಳು ಮುಗಿದಾಗ ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಮಾದರಿ ರಸ್ತೆಯಾಗಲಿದೆ. ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ನೆರಳೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಈಗಾಗಲೇ 250ರಿಂದ 300 ಮಾವಿನ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇನ್ನು 300ರಷ್ಟು ವಿವಿಧ ಕಾಟು ಮಾವಿನ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಕ್ಕೆ ಇದು ಬೆಳೆದು ನಿಂತು ಹಣ್ಣು ನೀಡಲು ಆರಂಭವಾದಾಗ ನೆರಳಿನೊಂದಿಗೆ ಪ್ರಾಣಿ- ಪಕ್ಷಿ ಆಹಾರ ನೀಡುವುದರೊಂದಿಗೆ ಮನುಷ್ಯರಿಗೂ ಹಣ್ಣುಗಳ ರುಚಿಯನ್ನು ಉಣಬಡಿಸಲಿವೆ. ನಾನೆಂದೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ, ಪಕ್ಷ ಬೇಧ ಮಾಡಲಾರೆ. ಬಡವರ ಸೇವೆಯೇ ನನ್ನ ಗುರಿ ಎಂದರು.


ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದಾಗ ಮಾತ್ರ ಶ್ರೇಯಸ್ಸನ್ನು ಕಾಣಲು ಸಾಧ್ಯ. ಶಾಸಕರಾದ ಎರಡು ವರ್ಷದಲ್ಲಿ ಅದನ್ನು ಅಶೋಕ್ ಕುಮಾರ್ ರೈಯವರು ಮಾಡಿ ತೋರಿಸಿದ್ದಾರೆ. ಈಗಾಗಲೇ 13 ಕಡೆ ಅಕ್ರಮ- ಸಕ್ರಮ ಬೈಠಕ್ ನಡೆದಿದ್ದು, ಇದು 14ನೇ ಬೈಠಕ್ ಆಗಿದೆ. ಗ್ರಾಮ ಗ್ರಾಮಕ್ಕೆ ತೆರಳಿ ಜನರ ಸಮ್ಮುಖದಲ್ಲಿ ಬೈಠಕ್ ನಡೆಸಿ ಒಂದೂವರೆ ಸಾವಿರ ಎಕರೆ ಸರಕಾರಿ ಜಮೀನನ್ನು ಅದರ ಒತ್ತುವರಿದಾರರಿಗೆ ಕೊಡುವ ಕೆಲಸ ಮಾಡಲಾಗಿದೆ. ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಎರಡು ವರ್ಷವಾದರೂ, ತನ್ನ ಸಾರ್ವಜನಿಕ ಬದುಕಿನ 20 ವರ್ಷದಲ್ಲಿ ಜನರ ನೋವು- ನಲಿವನ್ನು ಕಂಡು ಅದಕ್ಕೆ ಪರಿಹಾರ ಕಲ್ಪಿಸಿಕೊಂಡು ಬಂದವರು. ಬೆವರಿನ ನೋವಿನ ಪ್ರೀತಿ ಗೊತ್ತಿರುವುದರಿಂದಲೇ ಅವರಿಂದ ಇಂತಹ ಕೆಲಸಗಳು ಸಾಧ್ಯವಾಗಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆಯವರು, ಅಕ್ರಮ- ಸಕ್ರಮದಡಿ ಭೂಮಿಯ ವಿಲೇವಾರಿ ಕಾರ್ಯ ಪುತ್ತೂರು ತಾಲೂಕಿನಲ್ಲಿ ಮಾತ್ರ ನಡೆಯುತ್ತಿದ್ದು, ಅದು ಕೂಡಾ ಈ ಬಾರಿ ಅಕ್ರಮ- ಸಕ್ರಮದ ಭೂಮಿಯು ಪ್ಲಾಟಿಂಗ್ ಆಗಿಯೇ ಸಿಗಲಿದೆ. ಇಲ್ಲಿನ ಶಾಸಕರು ನುಡಿದಂತೆ ನಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಮೊನ್ನೆ ಮಂಗಳೂರಿಗೆ ಬಂದ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಹಾಗೂ ಮಾಜಿ ಸಚಿವರಾದ ರಮಾನಾಥ ರೈಯವರ ಹೆಸರಿಡಿದು ಹೊಗಳಬೇಕೆಂದರೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳೇ ಕಾರಣ. ಅಶೋಕ್ ಕುಮಾರ್ ರೈಯವರು ಸಮರ್ಥ ಆಡಳಿತಗಾರನಾಗಿದ್ದು, ಸರಕಾರದ ಪ್ರೋತ್ಸಾಹವೂ ಅವರಿಗಿದೆ. ಈಗಾಗಲೇ ಪಂಚ ಗ್ಯಾರಂಟಿ ಯೋಜನೆಯಡಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೩೨೦ ಕೋ.ರೂ. ಅನುದಾನ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅದ್ಭುತ ಕನಸುಳ್ಳ, ಕೆಲಸ ಕಾರ್ಯಗಳಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುವ ಅಶೋಕ್ ರೈಯಂತಹ ಶಾಸಕರು ಇದ್ದಾಗ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.


ಈ ಸಂದರ್ಭ 40 ಅಕ್ರಮ- ಸಕ್ರಮ ಕಡತಗಳನ್ನು ಮಂಜೂರುಗೊಳಿಸಲಾಯಿತು. 94ಸಿ ಮತ್ತು 94ಸಿಸಿಯಡಿ 20 ಮಂದಿಗೆ ಹಕ್ಕು ಪತ್ರಗಳನ್ನು ನೀಡಲಾಯಿತು. ವೇದಿಕೆಯಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಉಪಾಧ್ಯಕ್ಷ ಹರೀಶ್ ಡಿ., ಅಕ್ರಮ- ಸಕ್ರಮ ಸಮಿತಿಯ ಸದಸ್ಯರಾದ ರೂಪಲೇಖ ಆಳ್ವ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ನೆಕ್ಕಿಲಾಡಿ ಶ್ರೀ ಗುರುರಾಘವೇಂದ್ರ ಮಠದ ಅಧ್ಯಕ್ಷ ಉದಯ ಕುಮಾರ್ ಉದಯಗಿರಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ವಲಯಾಧ್ಯಕ್ಷ ಆದಂ ಕೊಪ್ಪಳ, ಹಿರೇಬಂಡಾಡಿ ವಲಯಾಧ್ಯಕ್ಷ ರವಿ ಪಟಾರ್ತಿ, ಕೋಡಿಂಬಾಡಿ ವಲಯಾಧ್ಯಕ್ಷ ಮೋನಪ್ಪ ಪಮ್ಮನಮಜಲು, ಕಾಂಗ್ರೆಸ್ ಪ್ರಮುಖರಾದ ಅಸ್ಕರ್ ಅಲಿ, ಕಲಂದರ್ ಶಾಫಿ, ವೆಂಕಪ್ಪ ಪೂಜಾರಿ, ಶಿವಪ್ರಸಾದ್ ಕೋಡಿಂಬಾಡಿ, ಜಗದೀಶ್ ಶೆಟ್ಟಿ ನಡುಮನೆ, ಅಬ್ದುರ್ರಹ್ಮಾನ್ ಕೆ., ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಕಂದಾಯ ಹೋಬಳಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

ಜನಪ್ರತಿನಿಧಿಗಳ ಮನಸ್ಸು ವಿಶಾಲವಾಗಿರಬೇಕು.ಶಾಸಕರಿಂದ ಜನಪ್ರತಿನಿಧಿಗಳಿಗೆ ಜನಸ್ಪಂದನಾ ಪಾಠ
ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ನುಸುಳಬಾರದು. ಜನಪ್ರತಿನಿಧಿಯಾದವನ ಮನಸ್ಸು ವಿಶಾಲವಾಗಿರಬೇಕು. ನಮಗೆ ಜನರು ಅಧಿಕಾರ ನೀಡಿದ್ದು ಅನ್ಯಾಯ ಮಾಡಲಿಕ್ಕಲ್ಲ. ಬದಲಾಗಿ ಜನರಿಗೆ ಉಪಕಾರ ಮಾಡ್ಲಿಕ್ಕೆ. ಚುನಾವಣೆಯ ಸಂದರ್ಭ ರಾಜಕೀಯ ಮಾಡೋಣ. ಆದರೆ ಗೆದ್ದ ಬಳಿಕ ರಾಜಕೀಯ ಬಿಟ್ಟು ಎಲ್ಲರನ್ನೂ ಒಂದೇ ಸಮಾನಾಗಿ ಕಂಡು ಅಭಿವೃದ್ಧಿ ಕಾರ್ಯದಲ್ಲಿ ಪರಸ್ಪರ ಕೈಜೋಡಿಸೋಣ ಎಂದು 34 ನೆಕ್ಕಿಲಾಡಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಾ ಶಾಸಕ ಅಶೋಕ್ ಕುಮಾರ್ ರೈ ಅವರು ಜನಪ್ರತಿನಿಧಿಗಳಿಗೆ ಜನಸ್ಪಂದನಾ ಪಾಠ ಮಾಡಿದ ಘಟನೆ ಸಭೆಯಲ್ಲಿ ನಡೆಯಿತು.


ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸೌಂದರ್ಯೀಕರಣಕ್ಕೆ ಆದ್ಯತೆ ನೀಡಿದ ನಾನು ಈ ಚತುಷ್ಪಥ ಹೆದ್ದಾರಿಯ ಮಧ್ಯೆ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಹೈದರಬಾದ್‌ನಿಂದ ಬೋಗನ್‌ವಿಲ್ಲಾ ಹೂವಿನ ಗಿಡಗಳನ್ನು ತರಿಸಿ ನಾಟಿ ಮಾಡಿಸಿದ್ದೆ. ಬೇಸಿಗೆಯಲ್ಲಿ ಅದಕ್ಕೆ ನೀರುಣಿಸಬೇಕಾಗಿ ಬರುವುದರಿಂದ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಕೇಳಿದ್ದೆ. ಆಗ ಅವರು ನಮಗೆ ನಗರ ಸಭೆಯಿಂದ ‘ಜಲ ಸಿರಿ’ ಯೋಜನೆಯ ನೀರು ಪೂರೈಸಲು ಆದೇಶ ನೀಡಿ ಎಂದು ಮನವಿ ಮಾಡಿದ್ದರು. ಅದಕ್ಕೂ ಆದೇಶ ನೀಡಿದ್ದೇನೆ. ಆದೇಶ ನೀಡುವುದಷ್ಟೇ ನನ್ನ ಕೆಲಸ. ಅದನ್ನು ತರಿಸುವ ಕೆಲಸ ಪಂಚಾಯತ್‌ನದ್ದು. ನೆಕ್ಕಿಲಾಡಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರಿನ ಕೊಳವೆ ಬಾವಿಯಿತ್ತು. ಅದರ ನೀರನ್ನು ಹೂವಿನ ಗಿಡಗಳಿಗೆ ಹಾಕಲು ಕೊಡಿ ಎಂದಾಗ ಅದರಲ್ಲಿ ಪಂಪ್ ಇಲ್ಲ ಎಂಬ ಉತ್ತರ ಬಂತು. ಪಂಪ್ ಅನ್ನು ನಾನೇ ಕೊಡಿಸಿದೆ. ಆದರೆ ಮತ್ತೆಯೂ ನೀರು ಕೊಡಲು ಗ್ರಾ.ಪಂ.ನಿಂದ ಆಕ್ಷೇಪ ಬಂತು. ಅಧ್ಯಕ್ಷರೂ ಒಪ್ಪಿದ್ದರೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ನನ್ನ ಗಮನಕ್ಕೆ ಬಂತು. ನಾನು ನೀರು ಕೇಳಿದ್ದು ನನ್ನ ರೈ ಎಸ್ಟೇಟ್‌ಗೆ ತಗೊಂಡು ಹೋಗಲು ಅಲ್ಲ. ಸಾರ್ವಜನಿಕ ಕೆಲಸಕ್ಕಾಗಿ. ಇಲ್ಲಿ ರಸ್ತೆ ಮಧ್ಯೆ ಹೂವಿನ ಗಿಡಗಳು ಬೆಳೆದು ಹೂ ಬಿಟ್ಟಾಗ ಸುಂದರವಾಗಿ ಕಾಣೋದು ನೆಕ್ಕಿಲಾಡಿ ಗ್ರಾ.ಪಂ.ನ ಹೆದ್ದಾರಿ ಪರಿಸರ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕುಡಿಯಲು ಉಪಯೋಗವಿಲ್ಲದ ನೀರನ್ನು ಹೂವಿನ ಗಿಡಗಳಿಗೆ ಉಣಿಸಿದರೆ ಏನು ತೊಂದರೆಯಾಗುತ್ತಿತ್ತು. ರಾಜಕೀಯ ಏನಿದ್ದರೂ ಚುನಾವಣಾ ಸಂದರ್ಭ ಇರಲಿ. ಜನಪ್ರತಿನಿಧಿಯಾದವನಿಗೆ ಮೊದಲು ಸೇವಾ ಮನೋಭಾವವಿರಬೇಕು. ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ದುಡಿಯುವ ವಿಶಾಲ ಮನಸ್ಸಿರಬೇಕು ಎಂದರು.

LEAVE A REPLY

Please enter your comment!
Please enter your name here