ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗು ನಾಟಿ ವೈದ್ಯ ಕಾಯಿಮಣ ಗ್ರಾಮದ ಜಿನ್ನಪ್ಪ ಗೌಡ ಕಳುವಾಜೆ (78ವ) ರವರು ಮೇ 21 ರಂದು ಬೆಳಗ್ಗೆ ನಿಧನರಾದರು.
ಜಿನ್ನಪ್ಪ ಗೌಡರು ಅನಾರೋಗ್ಯಗೊಂಡ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ ಜಾನಕಿ, ಪುತ್ರಿಯರಾದ ಯಮುನ, ಜಯಂತಿ, ಪುತ್ರರಾದ ಭಾಸ್ಕರ, ಯಶವಂತ ಕಳುವಾಜೆ ಅವರನ್ನು ಅಗಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಿನ್ನಪ್ಪರು
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಜಿನ್ನಪ್ಪರು ಅದರಲ್ಲಿ ದಂಡ ಪ್ರಮುಖ್ ಆಗಿ ಸೇವೆ ಸಲ್ಲಿಸಿದ್ದರು. ‘ತುರ್ತು ಪರಿಸ್ಥಿತಿ’ಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು.
ನಾಟಿ ವೈದ್ಯರು
ತಂದೆಯಿಂದ ಬಳುವಳಿಯಾಗಿ ಬಂದಿದ್ದ ನಾಟಿ ವೈದ್ಯ ವಿದ್ಯೆಯನ್ನು ಸಮರ್ಥವಾಗಿ ಬಳಸಿಕೊಂಡು ಜನ – ಜಾನುವಾರುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ಜನಾನುರಾಗಿಯಾಗಿದ್ದರು.
ಜನ ಪ್ರತಿನಿಧಿ
ಗೌಡರು ಗ್ರಾ. ಪ. ಸದಸ್ಯರಾಗಿದ್ದ ಸಂದರ್ಭದಲ್ಲಿ ‘ಕೂಲಿಗಾಗಿ ಕಾಳು’ ಯೋಜನೆಯಡಿಯಲ್ಲಿ ಸ್ವಗ್ರಾಮಕ್ಕೆ ವಿವಿಧ ಕಡೆಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು.
ಚುನಾವಣಾ ಅನುಭವ
ಜನಸಂಘದ ಕಾಲದಲ್ಲಿಯೇ ಅವರು ಕಾಣಿಯೂರು ಮಠದ ಶ್ರೀನಿವಾಸ್ ಆಚಾರ್ ಅವರ ವಿರುದ್ಧ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾಗಿದ್ದರು.
ಶಿಕ್ಷಣ ಪ್ರೇಮಿ
ಬೆಳಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಆ ಶಾಲೆಗೆ 4.50 ಎಕ್ರೆ ಭೂಮಿಯನ್ನು ಕೊಡಿಸಿದ್ದರು. ಅಂತೆಯೇ ನಾರ್ಯಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮಂಡಳಿ ಮತ್ತು ನಿರ್ವಹಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಅಲ್ಲಿಗೂ ಸಹ 4.50 ಎಕ್ರೆ ಭೂಮಿಯನ್ನು ಗಳಿಸಿಕೊಟ್ಟಿದ್ದರು.
ಇಂದು ಅಂತ್ಯ ಸಂಸ್ಕಾರ
ಇಂದು, ಮೇ 21ರಂದು, ಮೃತರ ಸ್ವಗೃಹದಲ್ಲಿ ಅಪರಾಹ್ನದ ವೇಳೆ ಅವರ ದೇಹದ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಸಹೋದರ ವೆಂಕಟ್ರಮಣ ಗೌಡರು ಮಾಹಿತಿ ನೀಡಿದ್ದಾರೆ.