ಆನೆಗುಂಡಿಯಿಂದ ಮತ್ತೆ ಕೆಯ್ಯೂರಿಗೆ ಹೆಜ್ಜೆ ಹಾಕಿದ ಹಾಕಿದ ಒಂಟಿ ಸಲಗ…!

0

ಹಲವೆಡೆ ಕೃಷಿ ಹಾನಿ, ಗ್ರಾಮದ ದೇರ್ಲ ಉರ್ಕಿ ಕಾಡಲ್ಲಿ ಬೀಡು ಬಿಟ್ಟಿರುವ ಶಂಕೆ..?

ಪುತ್ತೂರು: ಕೊಳ್ತಿಗೆ ಗ್ರಾಮದ ಅರ್ತ್ಯಡ್ಕ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ನಿರತರಾಗಿದ್ದ ಮಹಿಳೆಯೋರ್ವರ ಸಾವಿಗೆ ಕಾರಣವಾದ ಒಂಟಿ ಸಲಗ ಮತ್ತೆ ಕೆಯ್ಯೂರು ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಮೇ.20 ರ ರಾತ್ರಿ ಗ್ರಾಮದ ಅಂಬುಲ ಭಾಗದಲ್ಲಿ ಹಲವು ಕಡೆಗಳಲ್ಲಿ ಕೃಷಿ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.

ಅಂಬುಲದ ವಿಶ್ವನಾಥ ಗೌಡ, ಕೂಸಪ್ಪ ಗೌಡ ಹಾಗೂ ಸುಲೈಮಾನ್ ಎಂಬವರ ತೋಟಕ್ಕೆ ಬಂದಿರುವ ಕಾಡಾನೆ ತೋಟದಲ್ಲಿ ಬಾಳೆಗಿಡ ಸೇರಿದಂತೆ ಅಡಿಕೆ ಸಸಿಗಳನ್ನು ತಿಂದು ಹಾಕಿದೆ. ಅಂಬುಲ ಭಾಗದಲ್ಲಿ ಮೇ.21 ರಂದು ಬೆಳಗ್ಗಿನ ಜಾವ ದೇರ್ಲ ಪಕ್ಕದ ಕಣಿಯಾರುಮಲೆ ಉರ್ಕಿ ಕಾಡಿಗೆ ಸೇರಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಸ್ಥಳಕ್ಕೆ ಪಂಚಾಯತ್, ಅರಣ್ಯ ಇಲಾಖಾ ಅಧಿಕಾರಿಗಳ ಭೇಟಿ
ಆನೆ ಬಂದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅರಣ್ಯ ಸಂರಕ್ಷಕ ಕಿರಣ್ ಬಿ.ಎಂ, ಸಹಾಯಕ ಸತ್ಯನ್, ಗ್ರಾಪಂ ಸಿಬ್ಬಂದಿ ಧರ್ಮಣ್ಣರವರುಗಳು ಭೇಟಿ ನೀಡಿದ್ದಾರೆ. ಆನೆ ಬಂದಿರುವ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


ಆನೆಗುಂಡಿಯಿಂದ ಕೆಯ್ಯೂರಿಗೆ…!?
ಕೇರಳದ ಭಾಗದ ಪರಪ್ಪೆ ಅಭಯಾರಣ್ಯದಿಂದ ಬಂದಿದೆ ಎನ್ನಲಾದ ಈ ಒಂಟಿ ಸಲಗವನ್ನು ಕೊಳ್ತಿಗೆ ಗ್ರಾಮದ ಆನೆಗುಂಡಿ ಪ್ರದೇಶಕ್ಕೆ ಹಿಮ್ಮೆಟ್ಟಿಸುವ ಸಲುವಾಗಿ ಚಿಕ್ಕಮಗಳೂರಿನಿಂದ ಇಟಿಎಫ್(ಎಲಿಫೆಂಟ್ ಟಾಸ್ಕ್‌ಫೋರ್ಸ್)ತಂಡದವರು ಕೊಳ್ತಿಗೆ ಗ್ರಾಮಕ್ಕೆ ಆಗಮಿಸಿದ್ದರು. ನಾಲ್ಕೈದು ದಿನಗಳ ಕಾಲ ಕಾರ್ಯಾಚರಣೆ ಮಾಡುವ ಮೂಲಕ ಆನೆಯನ್ನು ಆನೆಗುಂಡಿ ಪ್ರದೇಶಕ್ಕೆ ಹಿಮ್ಮೆಟ್ಟಿಸಿದ್ದರು. ಕಾಡಾನೆ ಆನೆಗುಂಡಿ ಪ್ರದೇಶಕ್ಕೆ ಹೋಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ತಂಡವು ಬಳಿಕ ಅಲ್ಲಿಂದ ತೆರಳಿತ್ತು. ಇಟಿಎಫ್ ತಂಡ ತೆರಳಿದ ವಾರದೊಳಗೆ ಆನೆ ಮತ್ತೆ ಕೆಯ್ಯೂರು ಗ್ರಾಮಕ್ಕೆ ಬಂದಿದೆ.

ಅಲೆಮಾರಿ ಆನೆ…
ಇದೊಂದು ಒಂಟಿ ಅಲೆಮಾರಿ ಆನೆಯಾಗಿದ್ದು ಪರಪ್ಪೆ ಅಭಯಾರಣ್ಯ ಪ್ರದೇಶದಿಂದ ಗುಂಪಿನಿಂದ ತಪ್ಪಿಸಿಕೊಂಡು ಬಂದಿದೆ ಎಂದು ಹೇಳಲಾಗಿದೆ. ಕೆಲವೊಂದು ಜನರು ಹೇಳುವ ಪ್ರಕಾರ ಇದೊಂದು ಸಾಕಿ ಬೆಳೆಸಿದ ಆನೆಯಾಗಿದ್ದು ಇದನ್ನು ಸಾಕಲು ಸಾಧ್ಯವಾಗದೆ ಕಾಡಿಗೆ ಬಿಟ್ಟಿರುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ಆನೆಯು ಕೊಳ್ತಿಗೆ ಹಾಗೂ ಕೆಯ್ಯೂರು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದೆ. ಕೃಷಿಗೆ ಕೂಡ ದೊಡ್ಡ ಮಟ್ಟದ ತೊಂದರೆಯನ್ನು ಮಾಡದಿರುವ ಈ ಆನೆಯು ಗ್ರಾಮದ ಜನರಿಗೂ ಕೂಡ ಉಪದ್ರ ಮಾಡುತ್ತಿಲ್ಲ. ದುರಾದೃಷ್ಟವಶಾತ್ ಕೊಳ್ತಿಗೆಯ ಅರ್ತ್ಯಡ್ಕದಲ್ಲಿ ಮಹಿಳೆಯೊಬ್ಬರು ಆ ಆನೆಯ ದಾಳಿಗೆ ಸಾವನ್ನಪ್ಪಿದ್ದು ಬಿಟ್ಟರೆ ಇದುವರೆಗೆ ಈ ಒಂಟಿ ಸಲಗ ಯಾರಿಗೂ ತೊಂದರೆಯನ್ನು ಮಾಡಿಲ್ಲ ಎನ್ನಲಾಗಿದೆ. ಈ ಅಲೆಮಾರಿ ಆನೆಗೊಂದು ಪರ್ಮನೆಂಟ್ ನೆಲೆಯನ್ನು ತೋರಿಸುವವರು ಯಾರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here